ಬೆಂಗಳೂರು ಓಪನ್ ಟೆನಿಸ್‌ ಟೂರ್ನಿ ಬೆಂಗಳೂರು: ಭಾರತದ ಸುಮಿತ್‌ ನಗಾಲ್‌ ಮತ್ತು ಚೀನಾ ತೈಪೆಯ ಸೆಂಗ್‌ ಚುನ್‌ ಸಿನ್‌ ಅವರು ಬೆಂಗಳೂರು ಓಪನ್ ಟೆನಿಸ್‌ ಟೂರ್ನಿಯ ಪ್ರಶಸ್ತಿ ಜಯಿಸುವ ನೆಚ್ಚಿನ ಆಟಗಾರರು ಎನಿಸಿದ್ದಾರೆ. ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ (ಕೆಎಸ್‌ಎಲ್‌ಟಿಎ) ಆಯೋಜಿಸುತ್ತಿರುವ ಐದನೇ ಆವೃತ್ತಿಯ ಎಟಿಪಿ ಚಾಲೆಂಜರ್ ಟೂರ್ನಿಯು ಸೋಮವಾರ ಇಲ್ಲಿ ಆರಂಭವಾಗಲಿದೆ. ಇದೇ 26ರವರೆಗೆ ಟೂರ್ನಿ ನಡೆಯಲಿದೆ. 21 ವರ್ಷದ ಚುನ್‌ ವಿಶ್ವ ರ‍್ಯಾಂಕಿಂಗ್‌ನಲ್ಲಿ 132ನೇ ಸ್ಥಾನದಲ್ಲಿದ್ದಾರೆ. ಸಿಂಗಲ್ಸ್ ವಿಭಾಗದಲ್ಲಿ ಇಲ್ಲಿ ಅವರಿಗೆ ಅಗ್ರಶ್ರೇಯಾಂಕ ಲಭಿಸಿದೆ. ಚುನ್ ಅವರಿಗೆ ಮೊದಲ ಪಂದ್ಯದಲ್ಲಿ ಪೋರ್ಚುಗಲ್‌ನ ಫೆರೆರಾ ಸಿಲ್ವಾ ಸವಾಲು ಎದುರಾಗಿದೆ. ವೈಲ್ಡ್‌ಕಾರ್ಡ್‌ ಪ್ರವೇಶ ಪಡೆದಿರುವ, ಸ್ವೀಡನ್‌ನ ದಿಗ್ಗಜ ಬ್ಯೋನ್‌ ಬೋರ್ಗ್ ಪುತ್ರ ಲಿಯೊ ಬೋರ್ಗ್‌ ಮೊದಲ ಸುತ್ತಿನಲ್ಲಿ ಚೀನಾ ತೈಪೆಯ ಯು ಸಿವು ಸು ಎದುರು ಆಡುವರು. ಭಾರತದ ಸುಮಿತ್ ನಗಾಲ್ ಮತ್ತು ಕರ್ನಾಟಕದ ಆಟಗಾರ ಎಸ್‌.ಡಿ. ಪ್ರಜ್ವಲ್ ದೇವ್‌ ಅವರಿಗೆ ವೈಲ್ಡ್‌ಕಾರ್ಡ್‌ ಲಭಿಸಿದೆ. ಸುಮಿತ್ ಮೊದಲ ಪಂದ್ಯದಲ್ಲಿ ವಿಯೆಟ್ನಾಂನ ಲಿ ಹಾಂಗ್‌ ನ್ಯಾಮ್ ಎದುರು ಕಣಕ್ಕಿಳಿಯುವರು. ಪ್ರಜ್ವಲ್‌ ದೇವ್‌ ಅವರಿಗೆ ಕ್ವಾಲಿಫೈಯರ್‌ನಿಂದ ಗೆದ್ದುಬಂದ ಆಟಗಾರನ ಸವಾಲು ಎದುರಾಗಲಿದೆ. 2017ರಲ್ಲಿ ಸುಮಿತ್ ನಗಾಲ್‌ ಮತ್ತು 2018ರಲ್ಲಿ ಪ್ರಜ್ಞೇಶ್‌ ಗುಣೇಶ್ವರನ್ ಸಿಂಗಲ್ಸ್ ವಿಭಾಗದಲ್ಲಿ ಇಲ್ಲಿ ಪ್ರಶಸ್ತಿ ಜಯಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.