ಬೆಂಗಳೂರು ಓಪನ್‌ ಟೆನಿಸ್ ಟೂರ್ನಿ: ಚುನ್‌ ಸಿನ್‌ ಶುಭಾರಂಭ ಬೆಂಗಳೂರು: ಅಗ್ರಶ್ರೇಯಾಂಕದ ಆಟಗಾರ ಚೀನಾ ತೈಪೆಯ ಚುನ್‌ ಸಿನ್‌ ಸೆಂಗ್‌ ಮತ್ತು ಇಟಲಿಯ ಲುಕಾ ನಾರ್ಡಿ ಅವರು ಇಲ್ಲಿ ನಡೆಯುತ್ತಿರುವ ಬೆಂಗಳೂರು ಓಪನ್‌ ಟೆನಿಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದರು. ಕೆಎಸ್‌ಎಲ್‌ಟಿಎ ಕೋರ್ಟ್‌ನಲ್ಲಿ ಸೋಮವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಚುನ್‌ ಅವರು 6–4, 6–4 ರಲ್ಲಿ ಪೋರ್ಚುಗಲ್‌ನ ಫ್ರೆಡೆರಿಕೊ ಫೆರೇರಾ ಸಿಲ್ವಾ ಅವರನ್ನು ಮಣಿಸಿದರು. ಒಂದು ಗಂಟೆ 42 ನಿಮಿಷ ನಡೆದ ಹಣಾಹಣಿಯಲ್ಲಿ ಚುನ್‌ ಶಿಸ್ತಿನ ಆಟವಾಡಿದರು. ವೇಗದ ಸರ್ವ್‌ ಮತ್ತು ಚಾಣಾಕ್ಷ ರಿಟರ್ನ್‌ಗಳ ಮೂಲಕ ಎದುರಾಳಿಯನ್ನು ಒತ್ತಡಕ್ಕೆ ಸಿಲುಕಿ ಸಿದರು. ಅವರು ಆರು ಏಸ್‌ಗಳನ್ನು ಸಿಡಿಸಿದರು. ನಾರ್ಡಿ ಅವರು 6–4, 6–4 ರಲ್ಲಿ ಸರ್ಬಿಯದ ಮಿಜಾನ್‌ ಜೆಕಿಚ್‌ ವಿರುದ್ಧ ಗೆದ್ದರು. ಪ್ರಧಾನ ಸುತ್ತಿನ ಇನ್ನೊಂದು ಪಂದ್ಯದಲ್ಲಿ ಆಸ್ಟ್ರೇಲಿಯಾದ ಮಾರ್ಕ್ ಪೊಲ್ಮನ್ಸ್‌ 6–1, 6–2 ರಲ್ಲಿ ಇಟಲಿಯ ಫ್ರಾನ್ಸೆಸ್ಕೊ ಮಾಸ್ಟ್ರೆಲಿ ಅವರನ್ನು ಸೋಲಿಸಿದರು. ಇಲ್ಲಿ ಆರನೇ ಶ್ರೇಯಾಂಕ ಹೊಂದಿದ್ದ ಮಾಸ್ಟ್ರೆಲಿ ಸ್ವಯಂಕೃತ ತಪ್ಪುಗಳನ್ನೆಸಗಿ ಸೋಲಿನ ಹಾದಿ ಹಿಡಿದರು. ಪ್ರಧಾನ ಸುತ್ತಿಗೆ ಪ್ರಜ್ಞೇಶ್‌: ಭಾರತದ ಪ್ರಜ್ಞೇಶ್ ಗುಣೇಶ್ವರನ್‌ ಪ್ರಧಾನ ಹಂತ ಪ್ರವೇಶಿಸುವಲ್ಲಿ ಯಶಸ್ವಿಯಾದರು. ಅವರು ಅರ್ಹತಾ ಹಂತದ ಎರಡನೇ ಸುತ್ತಿನಲ್ಲಿ 6–4, 6–3 ರಲ್ಲಿ ಸ್ಪೇನ್‌ನ ಕಾರ್ಲೊಸ್‌ ಸ್ಯಾಂಚೆಜ್‌ ಜೊವೆರ್‌ ವಿರುದ್ಧ ಗೆದ್ದರು. ಆದರೆ ಭಾರತದ ಇನ್ನೊಬ್ಬ ಆಟಗಾರ ಮುಕುಂದ್‌ ಶಶಿಕುಮಾರ್‌ ನಿರಾಸೆ ಅನುಭವಿಸಿದರು. ಅವರು 5–7, 4–6 ರಲ್ಲಿ ಚೀನಾ ತೈಪೆಯ ಜೇಸನ್‌ ಜಂಗ್‌ ಎದುರು ಪರಾಭವಗೊಂಡರು. ಅರ್ಹತಾ ಹಂತದ ಇತರ ಪಂದ್ಯಗಳಲ್ಲಿ ಆಸ್ಟ್ರೇಲಿಯಾದ ಜೇಮ್ಸ್‌ ಮೆಕೇಬ್‌ 6–1, 6–3 ರಲ್ಲಿ ಜಪಾನ್‌ನ ಹಿರೊಕಿ ಮೊರಿಯಾ ವಿರುದ್ಧ; ಫ್ರಾನ್ಸ್‌ನ ಗಿಯೊವಾನಿ ಪೆರಿಕಾರ್ಡ್‌ 7–5, 6–1 ರಲ್ಲಿ ಜಪಾನ್‌ನ ಯಸುತಕ ಉಚಿಯಾಮ ವಿರುದ್ಧ ಜಯಿಸಿದರು. ಬ್ಯೋನ್‌ ಬೋರ್ಗ್‌ಗೆ ಇಂದು ಸನ್ಮಾನ: ಸ್ವೀಡನ್‌ನ ದಿಗ್ಗಜ ಆಟಗಾರ ಬ್ಯೋನ್‌ ಬೋರ್ಗ್‌ ಮತ್ತು ಭಾರತದ ವಿಜಯ್‌ ಅಮೃತ್‌ರಾಜ್‌ ಅವರನ್ನು ಮಂಗಳವಾರ ಬೆಳಿಗ್ಗೆ ಕೆಎಸ್‌ಎಲ್‌ಟಿಎನಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸನ್ಮಾನಿಸುವರು. ಬ್ಯೋನ್‌ ಬೋರ್ಗ್‌ ಅವರ ಪುತ್ರ ಲಿಯೊ ಬೋರ್ಗ್‌ ಅವರು ಈ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.