ಟೆನಿಸ್‌: ಮತ್ಸುದ ಚಾಂಪಿಯನ್‌ ಬೆಂಗಳೂರು: ಜಪಾನ್‌ನ ಮಿಸಾಕಿ ಮತ್ಸುದ ಅವರು ಐಟಿಎಫ್ ಮಹಿಳಾ ಟೆನಿಸ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದರು. ಭಾನುವಾರ ನಡೆದ ಫೈನಲ್‌ನಲ್ಲಿ ಅವರು 7–5, 4–6, 7–6 ರಲ್ಲಿ ತಮ್ಮದೇ ದೇಶದ ಮಿಸಾಕಿ ದೊಯಿ ವಿರುದ್ಧ ಗೆದ್ದರು. ಜಪಾನ್‌ನ ಇಬ್ಬರು ಆಟಗಾರ್ತಿಯರ ನಡುವಿನ ಫೈನಲ್‌ ಪಂದ್ಯ ರೋಚಕತೆಯಿಂದ ಕೂಡಿತ್ತು. ಮತ್ಸುದ ಮೊದಲ ಸೆಟ್‌ಅನ್ನು 7–5 ರಲ್ಲಿ ಗೆದ್ದುಕೊಂಡರಲ್ಲದೆ, ಎರಡನೇ ಸೆಟ್‌ನಲ್ಲಿ 4–0 ರಲ್ಲಿ ಮುನ್ನಡೆ ಗಳಿಸಿದರು. ಈ ವೇಳೆ ತಿರುಗೇಟು ನೀಡಿದ ದೊಯಿ ಸತತ ಆರು ಗೇಮ್‌ಗಳನ್ನು ಗೆದ್ದುಕೊಂಡು ಎರಡನೇ ಸೆಟ್‌ ಜಯಿಸಿ ಪಂದ್ಯವನ್ನು ಸಮಸ್ಥಿತಿಗೆ ತಂದರು. ನಿರ್ಣಾಯಕ ಸೆಟ್‌ನಲ್ಲಿ ಇಬ್ಬರೂ ಪಟ್ಟುಬಿಡದ ಪೈಪೋಟಿ ನಡೆಸಿದ್ದರಿಂದ 6–6 ರಲ್ಲಿ ಸಮಬಲ ಕಂಡುಬಂತು. ಟೈಬ್ರೇಕರ್‌ನಲ್ಲಿ ಶಿಸ್ತಿನ ಆಟವಾಡಿದ ಮತ್ಸುದ ಪಂದ್ಯವನ್ನು ತಮ್ಮದಾಗಿಸಿದರಲ್ಲದೆ, ವೃತ್ತಿಜೀವನದ ಮೊದಲ ಐಟಿಎಫ್‌ ಪ್ರಶಸ್ತಿ ಗೆದ್ದುಕೊಂಡರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.