ವಿಂಬಲ್ಡನ್ ಟೆನಿಸ್‌: ಫೈನಲ್‌ಗೆ ಜೊಕೊ ಲಂಡನ್‌ : ಬಿರುಸಿನ ಹೊಡೆತಗಳಿಗೆ ಹೆಸರು ಪಡೆದಿರುವ ಇಟಲಿಯ ಯಾನಿಕ್‌ ಸಿನೆರ್‌ ಅವರನ್ನು ನೇರ ಸೆಟ್‌ಗಳಿಂದ ಮಣಿಸಿದ ನೊವಾಕ್‌ ಜೊಕೊವಿಚ್, ವಿಂಬಲ್ಡನ್‌ ಟೆನಿಸ್‌ ಟೂರ್ನಿಯ ಫೈನಲ್‌ ಪ್ರವೇಶಿಸಿದರು. ಆಲ್‌ ಇಂಗ್ಲೆಂಡ್‌ನ ಕ್ಲಬ್‌ನ ಸೆಂಟರ್‌ಕೋರ್ಟ್‌ನಲ್ಲಿ ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ ಪಂದ್ಯವನ್ನು ಜೊಕೊವಿಚ್‌, ಎರಡೂ ಮುಕ್ಕಾಲು ಗಂಟೆ ನಡೆದ ಪೈಪೋಟಿಯಲ್ಲಿ 6–3, 6–4, 7–6 ರಿಂದ ಗೆದ್ದುಕೊಂಡರು. ವಿಂಬಲ್ಡನ್‌ನಲ್ಲಿ 9ನೇ ಬಾರಿ ಪ್ರಶಸ್ತಿ ಸುತ್ತು ತಲುಪಿರುವ ಅವರು ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳಲ್ಲಿ ಒಟ್ಟಾರೆಯಾಗಿ ದಾಖಲೆಯ 35ನೇ ಬಾರಿ ಫೈನಲ್‌ ಪ್ರವೇಶಿಸಿದ್ದಾರೆ. ಜೊಕೊವಿಚ್‌, ಅಮೆರಿಕದ ಆಟಗಾರ್ತಿ ಕ್ರಿಸ್‌ ಎವರ್ಟ್‌ ಅವರೊಂದಿಗೆ (34 ಫೈನಲ್‌) ಈ ದಾಖಲೆ ಹಂಚಿಕೊಂಡಿದ್ದರು. 36 ವರ್ಷದ ಜೊಕೊವಿಚ್‌, ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಸ್ಪೇನ್‌ನ ಕಾರ್ಲೊಸ್‌ ಅಲ್ಕರಾಜ್‌ ಅಥವಾ ರಷ್ಯಾದ ಡೇನಿಯಲ್‌ ಮೆಡ್ವೆಡೇವ್‌ ಅವರ ಸವಾಲು ಎದುರಿಸಲಿದ್ದಾರೆ. ಜೊಕೊವಿಚ್‌ ಅವರು ಚಾಂಪಿಯನ್‌ ಆದರೆ ಎಂಟು ಬಾರಿ ಚಾಂಪಿಯನ್‌ ಆಗಿರುವ ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ ಅವರ ದಾಖಲೆ ಸರಿಗಟ್ಟಲಿದ್ದಾರೆ. 21 ವರ್ಷದ ಸಿನೆರ್‌, ಕಳೆದ ವರ್ಷ ಇಲ್ಲಿ ಕ್ವಾರ್ಟರ್‌ಫೈನಲ್‌ನಲ್ಲಿ ಜೊಕೊವಿಚ್‌ ವಿರುದ್ಧ ಮೊದಲ ಎರಡು ಸೆಟ್‌ಗಳನ್ನು ಗೆದ್ದಿದ್ದರು. ಸರ್ಬಿಯದ ಆಟಗಾರ ಆ ಬಳಿಕ ಪುಟಿದೆದ್ದು ನಿಂತು ಪ್ರಯಾಸದ ಜಯ ಸಾಧಿಸಿದ್ದರು. ಆದರೆ ಈ ಬಾರಿ ಅವರು ಎದುರಾಳಿಗೆ ಮೇಲುಗೈ ಸಾಧಿಸಲು ಅಲ್ಪವೂ ಅವಕಾಶ ನೀಡಲಿಲ್ಲ. ಮಹಿಳೆಯರ ಫೈನಲ್‌ ಇಂದು: ಮಹಿಳೆಯರ ಸಿಂಗಲ್ಸ್‌ ವಿಭಾಗದ ಫೈನಲ್‌ ಶನಿವಾರ ನಡೆಯಲಿದ್ದು, ಟ್ಯುನೀಷಿಯಾದ ಆನ್ಸ್‌ ಜಬೇರ್‌ ಮತ್ತು ಜೆಕ್‌ ರಿಪಬ್ಲಿಕ್‌ನ ಮಾರ್ಕೆತ ವೊಂದ್ರೊಸೋವಾ ಪ್ರಶಸ್ತಿಗಾಗಿ ಹಣಾಹಣಿ ನಡೆಸುವರು. ಚೊಚ್ಚಲ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯ ನಿರೀಕ್ಷೆಯೊಂದಿಗೆ ಇಬ್ಬರೂ ಸೆಂಟರ್ ಕೋರ್ಟ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. 28 ವರ್ಷದ ಜಬೇರ್ ಅವರು ಚಾಂಪಿಯನ್‌ ಆದರೆ, ಗ್ರ್ಯಾನ್‌ಸ್ಲಾಮ್‌ ಗೆದ್ದ ಮೊದಲ ಆಫ್ರಿಕನ್‌ ಮತ್ತು ಅರಬ್‌ ಮಹಿಳೆ ಎನಿಸಿಕೊಳ್ಳಲಿದ್ದಾರೆ. ಈ ಹಿಂದೆ ಎರಡು ಸಲ ಫೈನಲ್‌ನಲ್ಲಿ ಎಡವಿದ್ದ ಅವರು, ಮೂರನೇ ಪ್ರಯತ್ನದಲ್ಲಿ ಅದೃಷ್ಟ ಕೈಹಿಡಿಯುವ ನಿರೀಕ್ಷೆಯಲ್ಲಿದ್ದಾರೆ. ಕಳೆದ ವರ್ಷ ಅವರು ಇಲ್ಲಿ ಫೈನಲ್‌ನಲ್ಲಿ ಎಲೆನಾ ರಿಬಾಕಿನಾ ಎದುರು ಪರಾಭವಗೊಂಡಿದ್ದರು. ಆ ಬಳಿಕ ಅಮೆರಿಕ ಓಪನ್‌ ಟೂರ್ನಿಯ ಫೈನಲ್‌ನಲ್ಲಿ ಇಗಾ ಶ್ವಾಂಟೆಕ್‌ ಕೈಯಲ್ಲಿ ಮಣಿದಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.