ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿ: ಜೊಕೊವಿಚ್‌ ಐತಿಹಾಸಿಕ ಸಾಧನೆ ಪ್ಯಾರಿಸ್‌ (ಎಎಫ್‌‍ಪಿ/ ರಾಯಿಟರ್ಸ್‌): ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದ ಸರ್ಬಿಯಾದ ನೊವಾಕ್‌ ಜೊಕೊವಿಚ್‌, 23ನೇ ಗ್ರ್ಯಾನ್‌ಸ್ಲಾಮ್‌ ಗೆದ್ದು ಐತಿಹಾಸಿಕ ಸಾಧನೆ ಮಾಡಿದರು. ರೋಲಂಡ್‌ ಗ್ಯಾರೋಸ್‌ನ ಫಿಲಿಪ್‌ ಶಾಟ್ರಿಯೆರ್‌ ಕೋರ್ಟ್‌ನಲ್ಲಿ ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಜೊಕೊವಿಚ್ 7–6, 6–3, 7–5 ರಲ್ಲಿ ನಾರ್ವೆಯ ಕ್ಯಾಸ್ಪರ್‌ ರೂಡ್‌ ಅವರನ್ನು ಮಣಿಸಿದರು. ಈ ಮೂಲಕ ರಫೆಲ್‌ ನಡಾಲ್‌ ಅವರನ್ನು ಹಿಂದಿಕ್ಕಿ, ಅತಿಹೆಚ್ಚು ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳ ಒಡೆಯ ಎನಿಸಿಕೊಂಡರು. 22 ಗ್ರ್ಯಾನ್‌ಸ್ಲಾಮ್‌ ಗೆದ್ದಿರುವ ಸ್ಪೇನ್‌ನ ನಡಾಲ್‌ ಎರಡನೇ ಸ್ಥಾನದಲ್ಲಿದ್ದರೆ, 20 ಟ್ರೋಫಿ ಜಯಿಸಿರುವ ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ ಮೂರನೇ ಸ್ಥಾನದಲ್ಲಿದ್ದಾರೆ. ಫ್ರೆಂಚ್‌ ಓಪನ್‌ ಗೆದ್ದ ಅತಿ ಹಿರಿಯ ಆಟಗಾರ ಎಂಬ ಗೌರವ ಜೊಕೊವಿಚ್‌ಗೆ ಲಭಿಸಿತು. ಎಲ್ಲ ನಾಲ್ಕು ಗ್ರ್ಯಾನ್‌ಸ್ಲಾಮ್‌ಗಳನ್ನು ಕನಿಷ್ಠ ಮೂರು ಸಲ ಗೆದ್ದ ಮೊದಲ ಆಟಗಾರ ಎಂಬ ಐತಿಹಾಸಿಕ ಸಾಧನೆಯೂ ಒಲಿಯಿತು. ಅವರು ಈ ಹಿಂದೆ 2016 ಮತ್ತು 2021 ರಲ್ಲಿ ಇಲ್ಲಿ ಚಾಂಪಿಯನ್‌ ಆಗಿದ್ದರು. ಮೂರು ಗಂಟೆ 13 ನಿಮಿಷ ನಡೆದ ಫೈನಲ್‌ ಪಂದ್ಯದ ಮೊದಲ ಸೆಟ್‌ನಲ್ಲಿ ಇಬ್ಬರೂ ಪಟ್ಟುಬಿಡದೆ ಹೋರಾಡಿದ್ದರಿಂದ 6–6 ರಲ್ಲಿ ಸಮಬಲ ಕಂಡುಬಂತು. ಆದರೆ ಟೈಬ್ರೇಕರ್‌ನಲ್ಲಿ ಅಮೋಘ ಲಯದಲ್ಲಿ ಆಡಿದ ಜೊಕೊವಿಚ್‌ 7–1 ರಲ್ಲಿ ಗೆದ್ದು ಮೊದಲ ಸೆಟ್‌ ಕೈವಶ ಮಾಡಿಕೊಂಡರು. ಎರಡನೇ ಸೆಟ್‌ನಲ್ಲಿ ಜೊಕೊವಿಚ್‌ ಅವರ ವೇಗದ ಸರ್ವ್‌ ಮತ್ತು ನಿಖರ ರಿಟರ್ನ್‌ಗಳಿಗೆ ತಕ್ಕ ಉತ್ತರ ನೀಡಲು ರೂಡ್‌ ವಿಫಲರಾದರು. ನಿರಾಯಾಸವಾಗಿ ಎದುರಾಳಿಯ ಸರ್ವ್‌ ಬ್ರೇಕ್‌ ಮಾಡಿ 6–3 ರಲ್ಲಿ ಸೆಟ್‌ ಗೆದ್ದು 2–0 ರಲ್ಲಿ ಮುನ್ನಡೆ ಗಳಿಸಿದರು. ಮೂರನೇ ಸೆಟ್‌ನ ಮೊದಲ 10 ಗೇಮ್‌ಗಳವರೆಗೆ ಇಬ್ಬರೂ ತಮ್ಮ ಸರ್ವ್‌ಗಳನ್ನು ಉಳಿಸಿಕೊಂಡದ್ದರಿಂದ 5–5 ರಲ್ಲಿ ಸಮಬಲ ಕಂಡುಬಂತು. 11ನೇ ಗೇಮ್‌ನಲ್ಲಿ ಎದುರಾಳಿಯ ಸರ್ವ್‌ ಬ್ರೇಕ್‌ ಮಾಡಿದ ಜೊಕೊವಿಚ್‌ ನಿರ್ಣಾಯಕ ಮುನ್ನಡೆ ಸಾಧಿಸಿದರು. ಮುಂದಿನ ಗೇಮ್‌ ಗೆದ್ದು ಚಾಂಪಿಯನ್‌ ಆಗುವ ಮೂಲಕ ಹೊಸ ಚರಿತ್ರೆ ಸೃಷ್ಟಿಸಿದರು. ₹ 20.60 ಕೋಟಿ ಬಹುಮಾನ: ಜೊಕೊವಿಚ್ ₹ 20.60 ಕೋಟಿ ನಗದು ಬಹುಮಾನ ಗೆದ್ದುಕೊಂಡರೆ, ‘ರನ್ನರ್‌ ಅಪ್‌‘ ರೂಡ್‌ ₹ 10.28 ಕೋಟಿ ತಮ್ಮದಾಗಿಸಿಕೊಂಡರು. ಸು ವೆ– ವಾಂಗ್‌ಗೆ ಮಿಶ್ರ ಡಬಲ್ಸ್‌ ಪ್ರಶಸ್ತಿ: ತೈವಾನ್‌ನ ಶೆ ಸು–ವೆ ಮತ್ತು ಚೀನಾದ ವಾಂಗ್‌ ಕ್ಸಿನ್‌ಯು ಅವರು ಮಿಶ್ರ ಡಬಲ್ಸ್‌ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು. ಭಾನುವಾರ ನಡೆದ ಫೈನಲ್‌ನಲ್ಲಿ ಅವರು 1–6, 5–6, 6–1 ರಲ್ಲಿ ಅಮೆರಿಕದ ಟೇಲರ್‌ ಟೌನ್‌ಸೆಂಡ್‌– ಲೆಯ್ಲಾ ಫೆರ್ನಾಂಡೆಜ್‌ ವಿರುದ್ಧ ಗೆದ್ದರು. ಸು–ವೆ ಮತ್ತು ವಾಂಗ್‌ ಅವರು ಜತೆಯಾಗಿ ಆಡಿದ ಎರಡನೇ ಟೂರ್ನಿ ಇದು. ಹೆಚ್ಚು ಗ್ರ್ಯಾನ್‌ಸ್ಲಾಮ್‌ ಗೆದ್ದವರು ನೊವಾಕ್‌ ಜೊಕೊವಿಚ್; 23 ರಫೆಲ್‌ ನಡಾಲ್‌; 22 ರೋಜರ್‌ ಫೆಡರರ್‌; 20 ಪೀಟ್‌ ಸಾಂಪ್ರಾಸ್‌; 14 ಬ್ಯೋನ್‌ ಬೋರ್ಗ್; 11 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.