ವಿಂಬಲ್ಡನ್‌ ಟೆನಿಸ್ ಟೂರ್ನಿ: ಅಲ್ಕರಾಜ್‌ಗೆ ಸುಲಭ ಗೆಲುವು ವಿಂಬಲ್ಡನ್‌: ಮೂರನೇ ಬಾರಿ ವಿಂಬಲ್ಡನ್‌ನಲ್ಲಿ ಆಡುತ್ತಿರುವ ಕಾರ್ಲೋಸ್‌ ಅಲ್ಕರಾಜ್ ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ನೇರ ಸೆಟ್‌ಗಳ ಜಯಗಳಿಸುವ ಮೂಲಕ ತಾವು ನೆಚ್ಚಿನ ಸ್ಪರ್ಧಿ ಎಂಬ ಸಂದೇಶ ರವಾನಿಸಿದರು. ಅಗ್ರ ಶ್ರೇಯಾಂಕ ಪಡೆದಿರುವ ಸ್ಪೇನ್‌ನ ಆಟಗಾರ ಅಲ್ಕರಾಜ್‌ 6–0, 6–2, 7–5 ರಿಂದ ಜೆರೆಮಿ ಚಾರ್ಡಿ ಅವರನ್ನು ಸೋಲಿಸಿದರು. 36 ವರ್ಷದ ಜೆರೆಮಿ ಅವರು 14ನೇ ಬಾರಿ ಇಲ್ಲಿ ಆಡಿದ್ದಾರೆ. ದಾಖಲೆ ಎಂಟನೇ ಬಾರಿ ವಿಂಬಲ್ಡನ್‌ ಗೆಲ್ಲುವ ನೊವಾಕ್‌ ಜೊಕೊವಿಚ್‌ ಅವರ ಕನಸಿಗೆ ಅಡ್ಡಿಯಾಗುವ ಸಾಮರ್ಥ್ಯ ಅಲ್ಕರಾಜ್ ಅವರಿಗೆ ಮಾತ್ರ ಎಂದು ಹೇಳಲಾಗುತ್ತಿದೆ. ಈ ಹಿಂದಿನ ಪ್ರಯತ್ನಗಳಲ್ಲಿ ಸ್ಪೇನ್‌ನ ಆಟಗಾರ ನಾಲ್ಕನೇ ಸುತ್ತನ್ನು ದಾಟಿಲ್ಲ. ಇಲಿನಾ ರಿಬಾಕಿನಾ ಸೆಂಟರ್‌ಕೋರ್ಟ್‌ನಲ್ಲಿ ನಡೆದ ಪಂದ್ಯದಲ್ಲಿ ಶೆಲ್ಬಿ ರೋಜರ್ಸ್‌ ಅವರನ್ನು 4–6, 6–1, 6–2 ರಿಂದ ಸೋಲಿಸಿದರು. ಕಳೆದ ವರ್ಷದ ರನ್ನರ್‌ ಅಪ್‌, ಟ್ಯುನೀಷಿಯಾದ ಆನ್ಸ್ ಜಬೇರ್ 6–3 6–3 ರಿಂದ ಶ್ರೇಯಾಂಕರಹಿತ ಆಟಗಾರ್ತಿ ಪೋಲೆಂಡ್‌ನ ಮೆಗ್ಧಲಿನಾ ಫ್ರೆಚ್‌ ಮೇಲೆ ಜಯಗಳಿಸಿ ಎರಡನೇ ಸುತ್ತು ತಲುಪಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.