ಎಟಿಪಿ ರ್‍ಯಾಂಕಿಂಗ್‌ ಪಟ್ಟಿ ಪ್ರಕಟ: ಜೊಕೊವಿಚ್‌ಗೆ ಮತ್ತೆ ಅಗ್ರಸ್ಥಾನ ಪ್ಯಾರಿಸ್‌ (ಎಎಫ್‌ಪಿ): ಭಾನುವಾರವಷ್ಟೇ ಫ್ರೆಂಚ್‌ ಓಪನ್‌ ಚಾಂಪಿಯನ್‌ ಆದ ‌ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಅವರು ಸೋಮವಾರ ಪ್ರಕಟವಾದ ಎಟಿಪಿ ಕ್ರಮಾಂಕ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಏರಿದ್ದಾರೆ. 23ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ 36 ವರ್ಷದ ಜೊಕೊವಿಚ್‌ ಮೂರನೇ ಸ್ಥಾನದಿಂದ ಅಗ್ರಸ್ಥಾನಕ್ಕೆ ಜಿಗಿದಿದ್ದಾರೆ. ಅಗ್ರಸ್ಥಾನದಲ್ಲಿದ್ದ ಸ್ಪೇನ್‌ನ ಕಾರ್ಲೊಸ್‌ ಅಲ್ಕರಾಜ್‌ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ. 20 ವರ್ಷದ ಸ್ಪೇನ್‌ ಆಟಗಾರ, ಫ್ರೆಂಚ್‌ ಓಪನ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಜೊಕೊವಿಚ್‌ ಎದುರು ಸೋತಿದ್ದರು. ಫ್ರೆಂಚ್‌ ಓಪನ್‌ ಮೊದಲ ಸುತ್ತಿನಲ್ಲೇ ಆಘಾತಕಾರಿ ಸೋಲು ಕಂಡಿದ್ದ ರಷ್ಯಾದ ಡೇನಿಯಲ್ ಮೆಡ್ವೆಡೆವ್ ಎರಡನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಇಳಿದಿದ್ದಾರೆ. ಫ್ರೆಂಚ್‌ ಓಪನ್‌ ರನ್ನರ್‌ ಅಪ್‌ ಆದ ನಾರ್ವೆಯ ಕ್ಯಾಸ್ಪರ್‌ ರೂಡ್‌ 4ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. 14 ಬಾರಿ ಫೆಂಚ್‌ ಓಪನ್‌ ಕಿರೀಟ ಧರಿಸಿದ್ದ ರಫೆಲ್‌ ನಡಾಲ್‌ ಕ್ರಮಾಂಕ ಪಟ್ಟಿಯಲ್ಲಿ 136ನೇ ಸ್ಥಾನಕ್ಕೆ ಕುಸಿದಿದ್ದಾರೆ. ಅವರು ಸೊಂಟದ ನೋವಿನಿಂದಾಗಿ ಜನವರಿಯಿಂದ ಯಾವುದೇ ಟೂರ್ನಿಯಲ್ಲಿ ಆಡಿರಲಿಲ್ಲ. ಶ್ವಾಂಟೆಕ್‌ಗೆ ಅಗ್ರಪಟ್ಟ: ಫ್ರೆಂಚ್‌ ಓಪನ್‌ ಚಾಂಪಿಯನ್‌, ಪೋಲೆಂಡ್‌ನ ಇಗಾ ಶ್ವಾಂಟೆಕ್‌, ಡಬ್ಲ್ಯುಟಿಎ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಬೆಲಾರಸ್‌ನ ಅರಿನಾ ಸಬಲೆಂಕಾ ಅವರು ಎರನೇ ಶ್ರೇಯಾಂಕದಲ್ಲೇ ಮುಂದುವರಿದಿದ್ದಾರೆ. ಫ್ರೆಂಚ್‌ ಓಪನ್‌ ಗೆದ್ದಲ್ಲಿ ಅವರು ಅಗ್ರಸ್ಥಾನಕ್ಕೆ ಏರಲು ಅವಕಾಶವಿತ್ತು. ಆದರೆ ಸೆಮಿಫೈನಲ್‌ನಲ್ಲಿ ಕರೊಲಿನಾ ಮುಕೋವಾ ಎದುರು ಸೋಲನುಭವಿಸಿದ್ದರು. ಮುಕೋವಾ 43ನೇ ಸ್ಥಾನದಿಂದ 16ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಕಜಕಸ್ತಾನದ ಎಲೆನಾ ರಿಬಾಕಿನಾ 3ನೇ, ಫ್ರಾನ್ಸ್‌ನ ಕರೊಲಿನಾ ಗಾರ್ಸಿಯಾ 4ನೇ ಸ್ಥಾನದಲ್ಲಿದ್ದಾರೆ. 3ನೇ ಸ್ಥಾನದಲ್ಲಿದ್ದ ಅಮೆರಿಕದ ಜೆಸ್ಸಿಕಾ ಪೆಗುವಾ 5ನೇ ಸ್ಥಾನಕ್ಕೆ ಸರಿದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.