ಕೊರಿಯಾ ಓಪನ್‌ ಫೈನಲ್‌ಗೆ ಸಾತ್ವಿಕ್‌– ಚಿರಾಗ್ ಜೋಡಿ ಯೋಸು (ಕೊರಿಯಾ): ವಿಶ್ವದ ಮೂರನೇ ಕ್ರಮಾಂಕದ ಡಬಲ್ಸ್‌ ಜೋಡಿ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ, ಕೊರಿಯಾ ಓಪನ್‌ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ ತಲುಪಿದರು. ಭಾರತೀಯ ಆಟಗಾರರು ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ವಿಶ್ವದ ಎರಡನೇ ಕ್ರಮಾಂಕದ ಚೀನಾ ಜೋಡಿಯನ್ನು ನೇರ ಸೆಟ್‌ಗಳಿಂದ ಸೋಲಿಸಿದರು. ಸಾತ್ವಿಕ್– ಚಿರಾಗ್ ಜೋಡಿ 21–15, 24–22 ರಿಂದ ಎರಡನೇ ಶ್ರೇಯಾಂಕದ ಲಿಯಾಂಗ್ ವಿ ಕೆಂಗ್‌– ವಾಂಗ್‌ ಚಾಂಗ್ ಅವರನ್ನು ಸೋಲಿಸಿತು. ಇದು ಭಾರತೀಯ ಆಟಗಾರರಿಗೆ ಚೀನಾದ ಈ ಜೋಡಿಯ ವಿರುದ್ಧ ಮೊದಲ ಜಯ. ಈ ಹಿಂದೆ ಎರಡು ಬಾರಿ ಸೋತಿದ್ದರು. ಫೈನಲ್‌ನಲ್ಲಿ ಭಾರತದ ಆಟಗಾರರು, ಅಗ್ರ ಶ್ರೇಯಾಂಕದ ಫಜರ್ ಅಲ್ಫಿಯಾನ್‌– ಮುಹಮ್ಮದ್‌ ರಿಯಾಣ್‌ ಅರ್ಡಿಯಾಂಟೊ ಅವರನ್ನು ಎದುರಿಸಲಿದ್ದಾರೆ. ಇಂಡೊನೇಷ್ಯಾದ ಈ ಜೋಡಿ 17–21, 21–16, 21–18 ರಿಂದ ಕೊರಿಯಾದ ಕಾಂಗ್‌ ಮಿನ್‌ ಹ್ಯುಕ್‌– ಸಿಯೊ ಸಿಯುಂಗ್ ಜೋಡಿಯನ್ನು ಸೋಲಿಸಿತು. ಚಿರಾಗ್‌– ಸಾತ್ವಿಕ್‌ ಇದಕ್ಕೆ ಮೊದಲು ಇಂಡೊನೇಷ್ಯಾ ಸೂಪರ್‌ 1000 ಮತ್ತು ಸ್ವಿಸ್‌ ಓಪನ್‌ ಸೂಪರ್‌ 500 ಸಿರೀಸ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.