ಡೇವಿಸ್ ಕಪ್: ಭಾರತ ತಂಡದಲ್ಲಿ ದಿಗ್ವಿಜಯ್, ರೋಹನ್ ನವದೆಹಲಿ: ಮುಂಬರಲಿರುವ ಡೇವಿಸ್ ಕಪ್ ಟೆನಿಸ್ ಟೂರ್ನಿಯಲ್ಲಿ ಆಡಲಿರುವ ಭಾರತ ತಂಡದಲ್ಲಿ ಯುವಪ್ರತಿಭೆ ದಿಗ್ವಿಜಯ್ ಪ್ರತಾಪ್ ಸಿಂಗ್ ಅವರಿಗೆ ಸ್ಥಾನ ನೀಡಲಾಗಿದೆ. ಸೆಪ್ಟೆಂಬರ್ 16 ಮತ್ತು 17ರಂದು ಲಖನೌನಲ್ಲಿ ಡೇವಿಸ್ ಕಪ್ ವಿಶ್ವ ಗುಂಪು –2ರ ಪಂದ್ಯದಲ್ಲಿ ಭಾರತ ತಂಡವು ಮೊರಾಕ್ಕೊ ವಿರುದ್ಧ ಆಡಲಿದೆ. ಇದಕ್ಕಾಗಿ ಸೋಮವಾರ ಆರು ಆಟಗಾರರ ತಂಡವನ್ನು ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ಪ್ರಕಟಿಸಿದೆ. ತಂಡದಲ್ಲಿ; ಕನ್ನಡಿಗ ರೋಹನ್ ಬೋಪಣ್ಣ, ಸುಮಿತ್ ನಗಾಲ್, ಶಶಿಕುಮಾರ್ ಮುಕುಂದ್, ಯೂಕಿ ಬಾಂಭ್ರಿ, ರಾಮಕುಮಾರ್ ರಾಮನಾಥನ್ ಹಾಗೂ ದಿಗ್ವಿಜಯ್ ಪ್ರತಾಪ್ ಸಿಂಗ್ ಇದ್ದಾರೆ. ದೇಶದ ಅಗ್ರಮಾನ್ಯ ಡಬಲ್ಸ್ ಆಟಗಾರ ರೋಹನ್ ಬೋಪಣ್ಣ ಅವರಿಗೆ ಇದು ವಿದಾಯದ ಪಂದ್ಯವಾಗಲಿದೆ. ಈಚೆಗೆ ರೋಹನ್ ಅವರೇ ಈ ಕುರಿತು ಪ್ರಕಟಿಸಿದ್ದರು. ಈ ತಂಡದ ಆಟವಾಡದ ನಾಯಕನಾಗಿ ರೋಹಿತ್ ರಾಜಪಾಲ್ ಮುಂದುವರಿಯುವರು. ’ಐವರು ಆಟಗಾರರಾದ ಸಾಕೇತ್ ಮೈನೆನಿ, ಮನಾದ್ ದೇಹಮಾನೆ, ಮನೀಷ್ ಸುರೇಶ್ ಕುಮಾರ್, ಕರಣ್ ಸಿಂಗ್ ಮತ್ತು ಯುವಾನ್ ನಂದಾಲ್ ಅವರೂ ಭಾರತ ತಂಡದೊಂದಿಗೆ ಅಭ್ಯಾಸದಲ್ಲಿ ಭಾಗವಹಿಸುವರು‘ ಎಂದು ಎಐಟಿಎ ತಿಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.