ಅಲ್ಕರಾಜ್‌ ಪರಿಪೂರ್ಣ ಆಟಗಾರ: ಅಂತಹ ಆಟಗಾರನನ್ನು ಎದುರಿಸಿಯೇ ಇಲ್ಲ: ಜೊಕೊವಿಚ್ ಶ್ಲಾಘನೆ ಲಂಡನ್‌: ನೊವಾಕ್‌ ಜೊಕೊವಿಚ್‌ ಅವರು ತಮ್ಮ 23 ವರ್ಷಗಳ ವೃತ್ತಿಜೀವನದಲ್ಲಿ ಟೆನಿಸ್‌ ಕೋರ್ಟ್‌ನಲ್ಲಿ ಸಾಧ್ಯವಿರುವ ಎಲ್ಲ ಅನುಭವಗಳನ್ನು ಪಡೆದಿದ್ದಾರೆ. ಆದರೆ ಕಾರ್ಲೊಸ್‌ ಅಲ್ಕರಾಜ್‌ ಅವರಂತಹ ಆಟಗಾರನನ್ನು ಅವರು ಒಮ್ಮೆಯೂ ಎದುರಿಸಿಲ್ಲವಂತೆ! ಭಾನುವಾರ ನಡೆದ ವಿಂಬಲ್ಡನ್‌ ಟೂರ್ನಿಯ ಫೈನಲ್‌ನಲ್ಲಿ ಸ್ಪೇನ್‌ನ ಯುವ ಆಟಗಾರ ಅಲ್ಕರಾಜ್, ಸರ್ಬಿಯದ ಜೊಕೊವಿಚ್‌ ಅವರನ್ನು ಮಣಿಸಿ ಚಾಂಪಿಯನ್‌ ಆಗಿದ್ದರು. ವಿಂಬಲ್ಡನ್ ಟೂರ್ನಿಯ ಮೇಲೆ ಜೊಕೊವಿಚ್ ಹಲವು ವರ್ಷಗಳಿಂದ ಹೊಂದಿದ್ದ ಪಾರಮ್ಯಕ್ಕೆ ಅಂತ್ಯ ಹಾಡಿದ್ದರು. ಫೈನಲ್‌ನಲ್ಲಿ ಅಲ್ಕರಾಜ್ 1-6, 7-6, 6-1, 3-6, 6-4 ರಿಂದ ಗೆದ್ದಿದ್ದರು. 36 ವರ್ಷದ ಜೊಕೊವಿಚ್‌ ಅವರು ತಮ್ಮನ್ನು ಮಣಿಸಿದ ಯುವ ಪ್ರತಿಭೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ‘ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಅವನಂತಹ ಆಟಗಾರನ ವಿರುದ್ಧ ಆಡಿಯೇ ಇಲ್ಲ. ಅಲ್ಕರಾಜ್‌ ಆಟದ ಬಗ್ಗೆ ಜನರು ಕಳೆದ 12 ತಿಂಗಳುಗಳಿಂದ ವಿವಿಧ ಮಾತುಗಳನ್ನು ಆಡುತ್ತಿದ್ದರು. ರೋಜರ್‌ ಫೆಡರರ್‌, ರಫೆಲ್‌ ನಡಾಲ್‌ ಮತ್ತು ನನ್ನ ಆಟದಲ್ಲಿರುವ ಕೆಲವು ಅಂಶಗಳು ಆತನ ಆಟದಲ್ಲಿ ಅಡಕವಾಗಿದೆ ಎನ್ನುತ್ತಿದ್ದರು. ಅದನ್ನು ನಾನು ಒಪ್ಪುತ್ತೇನೆ’ ಎಂದು ಪಂದ್ಯದ ಬಳಿಕ ಪ್ರತಿಕ್ರಿಯಿಸಿದ್ದಾರೆ. ‘ನಡಾಲ್‌ ಅವರಲ್ಲಿರುವ ಹೋರಾಟದ ಮನೋಭಾವ ಮತ್ತು ರಕ್ಷಣಾತ್ಮಕ ಆಟವನ್ನು ಅಲ್ಕರಾಜ್‌ ಅವರಲ್ಲಿ ಕಾಣಬಹುದು. ಅವರ ಬ್ಯಾಕ್‌ಹ್ಯಾಂಡ್‌ ಹೊಡೆತಗಳಿಗೂ ನನ್ನ ಬ್ಯಾಕ್‌ಹ್ಯಾಂಡ್‌ ಹೊಡೆತಗಳಿಗೂ ಹೋಲಿಕೆಯಿದೆ. ಅವರೊಬ್ಬ ಪರಿಪೂರ್ಣ ಆಟಗಾರ’ ಎಂದು ಬಣ್ಣಿಸಿದರು. 20 ವರ್ಷದ ಅಲ್ಕರಾಜ್ ಅವರು ಎಲ್ಲ ಮೂರು ರೀತಿಯ ಕೋರ್ಟ್‌ಗಳಲ್ಲಿ (ಕ್ಲೇ, ಹಾರ್ಡ್‌ಕೋರ್ಟ್‌ ಮತ್ತು ಹುಲ್ಲುಹಾಸು) ಚೆನ್ನಾಗಿ ಆಡುವ ಸಾಮರ್ಥ್ಯವನ್ನು ಬಹಳ ಬೇಗನೇ ಕರಗತ ಮಾಡಿಕೊಂಡಿರುವುದಕ್ಕೆ ಜೊಕೊವಿಚ್‌ ಅಚ್ಚರಿ ವ್ಯಕ್ತಪಡಿಸಿದ್ದಾರೆ. ‘ಅವರು ಈ ಋತುವಿನಲ್ಲಿ ಹುಲ್ಲುಹಾಸಿನಲ್ಲಿ ಅಷ್ಟು ಚೆನ್ನಾಗಿ ಆಡುವರು ಎಂದು ನಾನು ನಿರೀಕ್ಷಿಸಿಯೇ ಇರಲಿಲ್ಲ. ಆದರೆ ಅವರು ವಿಶ್ವದ ಅತ್ಯುತ್ತಮ ಆಟಗಾರ ಎಂಬುದನ್ನು ಸಾಬೀತುಪಡಿಸಿದ್ದಾರೆ’ ಎಂದು ಶ್ಲಾಘಿಸಿದರು. ಸಿಕ್ಕ ಅವಕಾಶ ಬಳಸಿಕೊಳ್ಳಲಿಲ್ಲ: ನಿರ್ಣಾಯಕ ಘಟ್ಟಗಳಲ್ಲಿ ನನ್ನ ಪರವಾಗಿ ಬಂದಿದ್ದ ಕೆಲವು ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ವಿಫಲವಾಗಿದ್ದಕ್ಕೆ ವಿಷಾದವಿದೆ ಎಂದು ಜೊಕೊವಿಚ್‌ ಹೇಳಿದರು. ಮೊದಲ ಸೆಟ್‌ನಲ್ಲಿ ನಿರಾಯಾಸ ಗೆಲುವು ಸಾಧಿಸಿದ್ದ ಜೊಕೊವಿಚ್‌ಗೆ ಟೈಬ್ರೇಕರ್‌ನಲ್ಲಿ ನಿರ್ಧಾರವಾಗಿದ್ದ ಎರಡನೇ ಸೆಟ್‌ ಗೆಲ್ಲಲು ಅವಕಾಶವಿತ್ತು. ಆದರೆ ಬ್ಯಾಕ್‌ಹ್ಯಾಂಡ್‌ ರಿಟರ್ನ್‌ನಲ್ಲಿ ಚೆಂಡನ್ನು ನೆಟ್‌ಗೆ ಹೊಡೆದಿದ್ದರು. ‘ಎರಡನೇ ಸೆಟ್‌ನ ಟೈಬ್ರೇಕರ್‌ನಲ್ಲಿ 6–6 ರಿಂದ ಸಮಬಲ ಆಗಿದ್ದಾಗ, ನನ್ನ ಬ್ಯಾಕ್‌ಹ್ಯಾಂಡ್‌ ಹೊಡೆತದಲ್ಲಿ ಚೆಂಡು ನೆಟ್‌ಗೆ ಬಡಿಯಿತು. ಆ ಹೊಡೆತದಲ್ಲಿ ತಪ್ಪು ಮಾಡಬಾರದಿತ್ತು’ ಎಂದರು. ಐದನೇ ಸೆಟ್‌ನ ಎರಡನೇ ಗೇಮ್‌ನಲ್ಲಿ ಎದುರಾಳಿಯ ಸರ್ವ್‌ ಬ್ರೇಕ್‌ ಮಾಡಿ 2–0 ರಲ್ಲಿ ಮುನ್ನಡೆ ಗಳಿಸುವ ಅತ್ಯುತ್ತಮ ಅವಕಾಶವನ್ನು ಜೊಕೊವಿಚ್‌ ಕಳೆದುಕೊಂಡಿದ್ದರು. ಅವರ ಸ್ಮ್ಯಾಷ್‌ನಲ್ಲಿ ಚೆಂಡು ನೆಟ್‌ಗೆ ಬಡಿದಿತ್ತು. ‘ಆ ಬ್ರೇಕ್‌ ಪಾಯಿಂಟ್‌ನಲ್ಲಿ (ಐದನೇ ಸೆಟ್‌) ಚೆನ್ನಾಗಿ ಆಡಿದ್ದೆ. ಆದರೆ ಬಲವಾಗಿ ಗಾಳಿ ಬೀಸುತ್ತಿದ್ದರಿಂದ ದೇಹದ ಮೇಲೆ ಸಮತೋಲನ ಸಾಧಿಸಲು ಆಗಲಿಲ್ಲ. ಸ್ಮ್ಯಾಷ್‌ ಹೊಡೆಯಲು ವಿಫಲನಾದೆ’ ಎಂದು ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.