ಟೆನಿಸ್ ಅಂಗಣದ ಮಿನುಗು ತಾರೆ: ಮಾರ್ಕೆತ ಅಸಾಧಾರಣ ಜಿಗಿತ ಮಾರ್ಕೆತ ವೊಂದ್ರೊಸೋವಾ. ಜೆಕ್‌ ರಿಪಬ್ಲಿಕ್‌ನ 24ರ ತರುಣಿಯೀಗ ಟೆನ್ನಿಸ್‌ ಅಂಗಳದ ಹೊಸ ಸಂಚಲನ. ಎಡಗೈ ಆಟಗಾರ್ತಿಯ ಬಲಗೈ ಮೇಲೆ – ‘ನೋ ರೈನ್‌, ನೋ ಫ್ಲವರ್ಸ್‌’ ಎನ್ನುವ ಟ್ಯಾಟೂ. ಮಳೆಯಿಲ್ಲದಿದ್ದಲ್ಲಿ ಹೂಗಳೂ ಇಲ್ಲ ಎನ್ನುವ ಮಾತು, ಸ್ವತಃ ಆಕೆಯ ಸಾಧನೆಗೆ ಹೊಂದುವಂತಹದ್ದು. ವೊಂದ್ರೊಸೋವಾಳ ಛಲ–ಶ್ರಮದ ಮಳೆಯೀಗ ವಿಂಬಲ್ಡನ್‌ ಪ್ರಶಸ್ತಿಯೆಂಬ ಹೂವನ್ನು ಅರಳಿಸಿದೆ. ‘ಸೋಲುಗಳಿಲ್ಲದೆ ಗೆಲುವಿಲ್ಲ; ನಿಮ್ಮ ಪ್ರಯತ್ನದಲ್ಲಿ ಸೋತರೂ, ಸ್ವಸಾಮರ್ಥ್ಯದ ಬಗ್ಗೆ ನಂಬಿಕೆಯಿದ್ದರೆ ಪ್ರತಿಫಲ ನಿಶ್ಚಿತ’ ಎನ್ನುವ ಅರ್ಥದ ಮಾತನ್ನು ಎರಡು ವರ್ಷಗಳ ಹಿಂದೆ ವೊಂದ್ರೊಸೋವಾ ಆಡಿದ್ದರು. ಆ ಮಾತನ್ನೀಗ ಸಾಧಿಸಿ ತೋರಿಸಿದ್ದಾರೆ. ಟ್ಯುನೇಷಿಯಾದ ಒನ್ಸ್‌ ಜಬೇರ್ ಅವರನ್ನು 6-4, 6-4 ನೇರ ಸೆಟ್‌ಗಳಲ್ಲಿ ಮಣಿಸುವ ಮೂಲಕ, ವಿಂಬಲ್ಡನ್ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದ ಮೊದಲ ಶ್ರೇಯಾಂಕರಹಿತ ಆಟಗಾರ್ತಿ ಎನ್ನುವ ಅಗ್ಗಳಿಕೆ ಅವರದ್ದಾಗಿದೆ. ವೊಂದ್ರೊಸೋವಾ ಈ ಮೊದಲು ನಾಲ್ಕು ಸಲ ವಿಂಬಲ್ಡನ್ ಆಡಿದ್ದರೂ ಜಯಗಳಿಸಿದ್ದು ಒಂದು ಪಂದ್ಯದಲ್ಲಷ್ಟೇ. ಈ ವಿಂಬಲ್ಡನ್ ಋತುವಿನಲ್ಲಿ ಶ್ರೇಯಾಂಕ ಹೊಂದಿದ್ದ ನಾಲ್ವರು ಆಟಗಾರ್ತಿಯರನ್ನು ಮಣಿಸಿ ಚಾಂಪಿಯನ್ ಆದರು. 32 ಮೆಟ್ಟಿಲುಗಳ ಜಿಗಿತದೊಂದಿಗೆ 10ನೇ ಶ್ರೇಯಾಂಕ ಮುಟ್ಟಿದರು. 2019ರ ಫ್ರೆಂಚ್‌ ಓಪನ್‌ ಫೈನಲ್ಸ್‌ನಲ್ಲಿ ಆಡಿ ಸೋತು 14ನೇ ಶ್ರೇಯಾಂಕ ಗಿಟ್ಟಿಸಿದ್ದು ಹಾಗೂ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದು ವೊಂದ್ರೊಸೋವಾರ ಈ ಮೊದಲಿನ ಸಾಧನೆಗಳು. ವೊಂದ್ರೊಸೋವಾ ಅವರದ್ದು ಕ್ರೀಡಾಪಟುಗಳ ಕುಟುಂಬ. ಅವರ ತಂದೆ ವಾಲಿಬಾಲ್‌ ಆಟಗಾರ. ತಾಯಿಯ ತಂದೆ– ಅಜ್ಜ– ಪೆಂಟಥ್ಲಾನ್‌ನಲ್ಲಿ ರಾಷ್ಟ್ರೀಯ ಚಾಂಪಿಯನ್‌, ಒಲಿಂಪಿಕ್‌ನಲ್ಲಿ ಬೆಳ್ಳಿ ಪದಕ ಪಡೆದ ಸಾಧಕ. ಟೆನ್ನಿಸ್‌ ಅಂಗಳದಲ್ಲಿ ಭವಿಷ್ಯ ಕಂಡುಕೊಳ್ಳಲು ನಿಶ್ಚಯಿಸುವ ಮುನ್ನ, ಫುಟ್‌ಬಾಲ್‌, ಟೇಬಲ್‌ ಟೆನ್ನಿಸ್‌ ಹಾಗೂ ಫ್ಲೋರ್‌ಬಾಲ್‌ ಆಟಗಳಲ್ಲೂ ವೊಂದ್ರೊಸೋವಾ ಜಾಣೆ ಎನ್ನಿಸಿಕೊಂಡಿದ್ದರು. ಮಗಳು ಮೂರು ವರ್ಷದವಳಿದ್ದಾಗಲೇ ವೊಂದ್ರೊಸೋವಾ ಅಪ್ಪ–ಅಮ್ಮ ಬೇರಾದರೂ, ಮಗಳ ಭವಿಷ್ಯವನ್ನು ರೂಪಿಸುವಲ್ಲಿ ಹೆತ್ತವರ ಕಾಳಜಿಯಲ್ಲಿ ವ್ಯತ್ಯಾಸವಾಗಲಿಲ್ಲ. ಎಂಟರ ವಯಸ್ಸಿನಲ್ಲಿ ರಾಷ್ಟ್ರೀಯ ಟೂರ್ನಿಯಲ್ಲಿ ಮೊದಲ ಬಾರಿ ಆಡಿದಾಗ ವೊಂದ್ರೊಸೋವಾ ಎಂಟರ ಹುಡುಗಿ. 12ರ ವಯಸ್ಸಿನಲ್ಲಿ ಅಮೆರಿಕದಲ್ಲಿ ನಡೆದ ಟೂರ್ನಿಯೊಂದನ್ನು ಗೆಲ್ಲುವ ಮೂಲಕ ಅಂತರರಾಷ್ಟ್ರೀಯ ಕಣದಲ್ಲೂ ಯಶಸ್ಸಿನ ರುಚಿ. ಜೂನಿಯರ್‌ ವಿಭಾಗದಲ್ಲಿ ಕೆಲಕಾಲ ವಿಶ್ವದ ಅಗ್ರಗಣ್ಯ ಆಟಗಾರ್ತಿ, ಡಬಲ್ಸ್‌ನಲ್ಲಿ ಎರಡು ಪ್ರಶಸ್ತಿ ಜಯಿಸಿದ ಸಾಧಕಿ. ವೊಂದ್ರೊಸೋವಾ ಶೂಪ್ರಿಯೆ. ಆಕೆಯ ಸಂಗ್ರಹದಲ್ಲಿ 200ಕ್ಕೂ ಹೆಚ್ಚು ಶೂಗಳಿವೆ. ವಿಂಬಲ್ಡನ್‌ ‍ಪ್ರಶಸ್ತಿಯಿಂದ ದೊರೆತ 3 ದಶಲಕ್ಷ ಡಾಲರ್‌ ಹಣದಲ್ಲೂ ಒಂದಷ್ಟು ಪಾಲು ಶೂಗಳಿಗೆ ಹೋದರೆ ಅಚ್ಚರಿಪಡಬೇಕಿಲ್ಲ. ಗಾಯದಿಂದ ಆರು ತಿಂಗಳ ಕಾಲ ಅಂಗಳದಿಂದ ದೂರವಿದ್ದ ವೊಂದ್ರೊಸೋವಾ, ಕಳೆದ ವಿಂಬಲ್ಡನ್‌ನಲ್ಲಿ, ಮಣಿಕಟ್ಟಿಗೆ ಬ್ಯಾಂಡೇಜ್ ಧರಿಸಿಯೇ ಅಂಗಳಕ್ಕಿಳಿದು ನಿರಾಶೆ ಅನುಭವಿಸಿದ್ದರು. ಈ ಬಾರಿ ಪ್ರಶಸ್ತಿಯ ಕೊಯಿಲು. ಪ್ರಶಸ್ತಿ ಸ್ವೀಕರಿಸುವಾಗ ಈ ಡ್ರಾಪ್‌ ಶಾಟ್‌ ನಿಸ್ಸೀಮೆ ಉದ್ಗರಿಸಿದ್ದು: ‘ಈಗೇನಾಗುತ್ತಿದೆ ಎನ್ನುವುದೇ ತಿಳಿಯುತ್ತಿಲ್ಲ’. ಆಟದ ಅಂಗಳ ಸೃಷ್ಟಿಸುವ ಅಚ್ಚರಿಗಳು ಒಂದೆರಡೇ. ಆದರೆ, ವೊಂದ್ರೊಸೋವಾ ಪರಿಶ್ರಮದ ಹಾದಿಯನ್ನು ಗಮನಿಸಿದರೆ, ಆಕೆಯ ಸಾಧನೆ ಆಕಸ್ಮಿಕವೇನೂ ಅಲ್ಲ. ಟೆನ್ನಿಸ್‌ ಗ್ರ್ಯಾನ್‌ ಸ್ಲ್ಯಾಮ್‌ ಪರಂಪರೆಯಲ್ಲಿ ಜೆಕ್‌ ಆಟಗಾರ್ತಿಯರ ಗುರುತುಗಳು ಢಾಳಾಗಿವೆ. ಆ ಸಾಲಿನಲ್ಲೀಗ ವೊಂದ್ರೊಸೋವಾ ಎಂಬ ಹೊಸ ತಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.