ಒನ್ಸ್‌ ಜಬೇರ್‌: ಸೋತು ಗೆದ್ದ ‘ಟ್ಯುನೀಷಿಯಾ ಟೆನಿಸ್‌ ರಾಣಿ’ ಟೆನಿಸ್‌ ಲೋಕದ ಪ್ರತಿಷ್ಠಿತ ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳ ಮಹಿಳಾ ಸಿಂಗಲ್ಸ್‌ನಲ್ಲಿ ಹಿಂದೆ ಗೆದ್ದವರ ಪಟ್ಟಿಯನ್ನೊಮ್ಮ ನೋಡಿ. ಅದರಲ್ಲಿ ಮಾರ್ಗರೆಟ್‌ ಕೋರ್ಟ್‌, ಸೆರೆನಾ ವಿಲಿಯಮ್ಸ್‌, ಸ್ಟಫಿ ಗ್ರಾಫ್‌, ಮರಿಯಾ ಶರಪೋವಾ ಹೆಸರುಗಳು ಪದೇ ಪದೇ ರಾರಾಜಿಸುತ್ತಿದ್ದವು. ಆದರೆ, ಇತ್ತೀಚೆಗಿನ ವರ್ಷಗಳಲ್ಲಿ ಗೆದ್ದವರ ಪಟ್ಟಿಯಲ್ಲಿ ಹೊಸಬರ ಹೆಸರು ಮಾತ್ರವಲ್ಲ, ರನ್ನರ್‌ ಅಪ್‌ ಆದವರಲ್ಲಿಯೂ ಹೊಸ ಪ್ರತಿಭೆಗಳು ಹೆಚ್ಚಾಗಿ ಕಾಣಿಸುತ್ತಿವೆ. ಇದರಲ್ಲಿ ಟ್ಯುನೀಷಿಯಾದ ಒನ್ಸ್‌ ಜಬೇರ್‌ ಹೆಸರು ಕೂಡ ಪ್ರಮುಖವಾದದ್ದು. 28 ವರ್ಷದ ಜಬೇರ್‌ 2019ರಲ್ಲಿ ಮೊದಲ ಬಾರಿಗೆ ವರ್ಷದ ನಾಲ್ಕೂ ಗ್ರ್ಯಾನ್‌ ಸ್ಲಾಮ್‌ ಟೂರ್ನಿಗಳಲ್ಲಿ ಆಡಿದ್ದರೂ ಗಮನ ಸೆಳೆಯಲಿಲ್ಲ. ಜಬೇರ್‌ ಹಿಂದಿನ ಒಂದು ವರ್ಷದಲ್ಲಿ ಎರಡು ಬಾರಿ ವಿಂಬಲ್ಡನ್‌ ಮತ್ತು ಒಂದು ಸಲ ಯು.ಎಸ್‌. ಓಪನ್‌ ಟೂರ್ನಿಗಳಲ್ಲಿ ಫೈನಲ್‌ ತಲುಪಿದ್ದರು. ಇತ್ತೀಚೆಗೆ ವಿಂಬಲ್ಡನ್‌ ಟೂರ್ನಿಯಲ್ಲಿ ಜೆಕ್‌ ರಿಪಬ್ಲಿಕ್‌ನ ಶ್ರೇಯಾಂಕ ರಹಿತ ಆಟಗಾರ್ತಿ ಮಾರ್ಕೆತ ವೊಂದ್ರೊಸೋವಾ ಎದುರು ರನ್ನರ್‌ ಅಪ್‌ ಸ್ಥಾನ ಪಡೆದರು. ಇದೇ ವರ್ಷ ಫ್ರೆಂಚ್‌ ಓಪನ್‌ ಮತ್ತು 2020ರಲ್ಲಿ ಆಸ್ಟ್ರೇಲಿಯಾ ಓಪನ್‌ನಲ್ಲಿ ಕ್ವಾರ್ಟರ್‌ ಫೈನಲ್‌ ತಲುಪಿದ್ದರು. ಈ ಎಲ್ಲಾ ಸಾಧನೆಗಳಿಂದಾಗಿ ಕಳೆದ ವರ್ಷದ ಜೂನ್‌ನಲ್ಲಿ ವಿಶ್ವ ಮಟ್ಟದ ರ್‍ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನ ಗಳಿಸಿದ್ದರು. ಅಮ್ಮನ ಪ್ರೇರಣೆ: ಮನರಂಜನೆ ಸಲುವಾಗಿ ಅಮ್ಮ ಆಡುತ್ತಿದ್ದ ಟೆನಿಸ್‌ನಿಂದಾಗಿ ಮಗಳಿಗೂ ಇದೇ ಕ್ರೀಡೆಯಲ್ಲಿ ಆಸಕ್ತಿ ಬಂದಿತು. ಮಗಳಿಗೆ ಮೂರನೇ ವರ್ಷದಿಂದ ಈ ಕ್ರೀಡೆಯ ಕುರಿತು ಅಮ್ಮ ಪಾಠ ಮಾಡಿದರು. ಅರೇಬಿಕ್‌, ಇಂಗ್ಲಿಷ್‌ ಮತ್ತು ಫ್ರೆಂಚ್‌ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುವ ಜಬೇರ್‌ ತಮ್ಮ ಬಾಲ್ಯದ ದಿನಗಳಲ್ಲಿ ತಮ್ಮನ್ನು ತಾವೇ ರೋಜರ್‌ ಫೆಡರರ್ ಎನ್ನುವ ಉಪನಾಮದಿಂದ ಕರೆದುಕೊಳ್ಳುತ್ತಿದ್ದರು. ಅವರ ಆಟದಿಂದ ಪ್ರೇರಣೆ ಪಡೆದರು. ಜಬೇರ್‌ ತಮ್ಮ 14ನೇ ವಯಸ್ಸಿನಲ್ಲಿ ಐಟಿಎಫ್‌ ಮಹಿಳಾ ಸರ್ಕಿಟ್‌ ಟೂರ್ನಿಯಲ್ಲಿ ಆಡಿದರು. 16ನೇ ವಯಸ್ಸಿನಲ್ಲಿ ಫ್ರೆಂಚ್‌ ಓಪನ್‌ನ ಎರಡು ಜೂನಿಯರ್‌ ಟೂರ್ನಿಗಳ ಸಿಂಗಲ್ಸ್‌ನಲ್ಲಿ ಫೈನಲ್ ತಲುಪಿ ಒಂದು ಬಾರಿ ಚಾಂಪಿಯನ್‌ ಆದರು. ಈ ಮೂಲಕ ಅವರು 1964ರ ಬಳಿಕ ಜೂನಿಯರ್‌ ವಿಭಾಗದ ಪ್ರಮುಖ ಟೂರ್ನಿಯಲ್ಲಿ ಗೆದ್ದ ಟ್ಯುನೀಷಿಯಾದ ಮೊದಲ ಆಟಗಾರ್ತಿ ಎನಿಸಿದರು. ಮೂರು ಬಾರಿ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. ಆಟದ ಅನುಭವ ಹಾಗೂ ಕೌಶಲ ಪಕ್ವಗೊಂಡಂತೆಲ್ಲ ಡಬ್ಲ್ಯುಟಿಎ ಪ್ರಶಸ್ತಿ, ಡಬ್ಲ್ಯುಟಿಎ 1000 ಹಂತದ ಗರಿ, ಗ್ರ್ಯಾನ್‌ ಸ್ಲಾಮ್‌ ಟೂರ್ನಿಗಳಲ್ಲಿ ಫೈನಲ್‌ ಪ್ರವೇಶಿಸಿದ ಅರಬ್‌ ರಾಷ್ಟ್ರದ ಮೊದಲ ಆಟಗಾರ್ತಿ ಎನ್ನುವ ಗರಿಮೆಗೆ ಪಾತ್ರರಾದರು. 2019ರಲ್ಲಿ ‘ವರ್ಷದ ಅರಬ್ ಮಹಿಳೆ’ ಗೌರವ ಲಭಿಸಿತು. ಇವುಗಳ ಪಟ್ಟಿಗೆ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದ ಮೊದಲ ಅರಬ್‌ ಹಾಗೂ ಆಫ್ರಿಕಾ ಖಂಡದ ಮೊದಲ ಆಟಗಾರ್ತಿ ಎನಿಸುವ ಹಿರಿಮೆ ಮೂರನೇ ಬಾರಿಗೆ ಕೈ ತಪ್ಪಿದೆ. ಪ್ರತಿಷ್ಠಿತ ಟೂರ್ನಿಗಳಲ್ಲಿ ಸೋತಿದ್ದರೂ ಫೈನಲ್‌ ತಲುಪಿದ ಸಾಧನೆ ಅವರ ದೇಶದ ಜನರಲ್ಲಿ ಹೆಮ್ಮೆಯ ಭಾವ ಮೂಡಿಸಿದೆ. ಟ್ಯುನೀಷಿಯಾದ ಹಲವು ಮೊದಲುಗಳ ಒಡತಿಯಾದ ಜಬೇರ್‌ಗೆ ಆ ದೇಶದ ‘ಟೆನಿಸ್‌ ರಾಣಿ’ ಎನ್ನುವ ಗರಿಮೆಯಂತೂ ಇದ್ದೇ ಇದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.