ಟಂಪೆರೆ ಓಪನ್‌ ಟೆನಿಸ್‌: ಫೈನಲ್‌ಗೆ ಸುಮಿತ್‌ ನಗಾಲ್ ಟಂಪೆರೆ(ಫಿನ್ಲೆಂಡ್‌): ಭಾರತದ ಸುಮಿತ್‌ ನಗಾಲ್, ಟಂಪೆರೆ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಶ್ರೇಯಾಂಕರಹಿತ ಆಟಗಾರ ಡೇನಿಯಲ್‌ ರಿನ್‌ಕಾನ್‌ ಅವರ ಸ್ಫೂರ್ತಿಯುತ ಸವಾಲನ್ನು ಬದಿಗೊತ್ತಿ ಫೈನಲ್ ತಲುಪಿದರು. ಏಳನೇ ಶ್ರೇಯಾಂಕದ ಸುಮಿತ್‌ ಶನಿವಾರ ನಡೆದ ಸೆಮಿಫೈನಲ್‌ನಲ್ಲಿ 4–6, 6–3, 6–2 ರಿಂದ ಗೆಲುವು ಪಡೆದರು. ಈ ಗೆಲುವಿನ ಮೂಲಕ, 25 ವರ್ಷದ ಸುಮಿತ್‌ ಐದನೇ ಬಾರಿ ಚಾಲೆಂಜರ್‌ ಮಟ್ಟದ ಟೂರ್ನಿಯ ಫೈನಲ್ ತಲುಪಿದಂತಾಗಿದೆ. ಅವರು ಭಾನುವಾರ ನಡೆಯುವ ಫೈನಲ್‌ನಲ್ಲಿ ಜೆಕ್‌ ರಿಪಬ್ಲಿಕ್‌ನ ದಲಿಬೋರ್ ಸ್ವಿರ್ಸಿನ ಅವರನ್ನು ಎದುರಿಸಲಿದ್ದಾರೆ. ಐದನೇ ಶ್ರೇಯಾಂಕದ ದಲಿಬೋರ್‌ ಇನ್ನೊಂದು ಸೆಮಿಫೈನಲ್‌ನಲ್ಲಿ ಜರ್ಮನಿಯ ಹೆನ್ರಿ ಸ್ವ್ಕಿರ್‌ ಅವರನ್ನು ಸೋಲಿಸಿದರು. ಈ ವರ್ಷ ಎರಡನೇ ಟೂರ್ನಿಯಲ್ಲಿ ಫೈನಲ್‌ ತಲುಪಿದ್ದಾರೆ. ರೋಮ್‌ನಲ್ಲಿ ನಡೆದ ಗಾರ್ಡನ್‌ ಓಪನ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದರು. ಫೈನಲ್‌ನಲ್ಲಿ ಅವರು ನೆದರ್ಲೆಂಡ್ಸ್‌ನ ಜೆಸ್ಪರ್‌ ಡಿ ಜಾಂಗ್ ಮೇಲೆ ನೇರ ಸೆಟ್‌ಗಳ ಜಯಗಳಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.