ಅಂತರರಾಷ್ಟ್ರೀಯ ಟೆನಿಸ್‌ ಟೂರ್ನಿ: ನಿಕ್‌ ಚಾಪೆಲ್‌, ಪ್ರಜ್ವಲ್‌ ದೇವ್‌ ಜಯ ಧಾರವಾಡ: ಅಗ್ರ ಶ್ರೇಯಾಂಕದ ಆಟಗಾರ ಅಮೆರಿಕದ ನಿಕ್‌ ಚಾಪೆಲ್‌, ಅಂತರರಾಷ್ಟ್ರೀಯ ಟೆನಿಸ್‌ ಟೂರ್ನಿಯ ಎರಡನೇ ದಿನವಾದ ಬುಧವಾರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನಲ್ಲಿ ದಕ್ಷಿಣ ಕೊರಿಯಾದ ವೂಬಿನ್‌ ಶಿನ್‌ ಅವರನ್ನು 6–3, 6–3 ರಲ್ಲಿ ನೇರ ಸೆಟ್‌ಗಳಿಂದ ಸೋಲಿಸಿದರು. ಮೊದಲ ದಿನ ಅನಿರೀಕ್ಷಿತ ಫಲಿತಾಂಶಗಳೇನೂ ಇಲ್ಲದೇ ಶ್ರೇಯಾಂಕ ಆಟಗಾರರು ಮುನ್ನಡೆದರು. ಅಂತರರಾಷ್ಟ್ರೀಯ ಆಟಗಾರ, ನಾಲ್ಕನೇ ಶ್ರೇಯಾಂಕದ ರಾಮಕುಮಾರ್‌ ರಾಮನಾಥನ್ ಅವರಿಗೆ ಫೈಸಲ್‌ ಖಮರ್‌ ಅವರು ಉತ್ತಮ ಪೈಪೋಟಿ ನೀಡಿದರು. ಮೊದಲ ಸೆಟ್‌ಅನ್ನು ಟೈಬ್ರೇಕರ್‌ನಲ್ಲಿ ಗೆದ್ದ ರಾಮಕುಮಾರ್‌ ಅಂತಿಮವಾಗಿ 7–6 (3), 6–2ರಿಂದ ಗೆಲುವು ಸಾಧಿಸಿದರು. ಎರಡನೇ ಶ್ರೇಯಾಂಕದ ಬೊಗ್ದಾನ್‌ ಬೊಬ್ರೊವ್ 6–2, 6–4ರಿಂದ ಕ್ವಾಲಿಫೈಯರ್ ಅಭಿನವ್ ಸಂಜೀವ್ ಷಣ್ಮುಗಂ ಅವರನ್ನು ಹಿಮ್ಮೆಟ್ಟಿಸಿದರು. ಮೂರು ದಿನಗಳ ಹಿಂದೆ ಅಹಮದಾಬಾದಿನಲ್ಲಿ ನಡೆದ ಐಟಿಎಫ್‌ ಟೂರ್ನಿಯಲ್ಲಿ ವಿಜೇತರಾಗಿದ್ದ ಫ್ಲೊರೆಂಟ್‌ ಬಾಕ್ಸ್‌ 6–2, 2–0ಯಿಂದ ಮುಂದಿದ್ದಾಗ ಅವರ ಎದುರಾಳಿ ಸ್ಟಿಯಿನ್ ಪೆಲ್ (ನೆದರ್ಲೆಂಡ್ಸ್‌) ಪಂದ್ಯ ಬಿಟ್ಟುಕೊಟ್ಟರು. ಫ್ಲೊರೆಂಟ್‌ ಇಲ್ಲಿ ಆರನೇ ಶ್ರೇಯಾಂಕ ಪಡೆದದ್ದಾರೆ. ಐದನೇ ಶ್ರೇಯಾಂಕದ ಆಟಗಾರ ಜಪಾನ್‌ನ ಕಜುಕಿ ನಿಶಿವಾಕಿ, ಎಂಟನೇ ಶ್ರೇಯಾಂಕದ ಆಟಗಾರ, ಎಸ್‌.ಡಿ.ಪ್ರಜ್ವಲ್‌ ದೇವ್‌ (ಮೈಸೂರು), ಏಳನೇ ಶ್ರೇಯಾಂಕದ ಸಿದ್ಧಾರ್ಥ್‌ ರಾವತ್‌, ರಿಷಬ್ ಅಗರವಾಲ್‌, ಇಟಲಿಯ ಎನ್ರಿಕೊ ಜಿಯಾಕೊಮಿನಿ, ರಣಜಿತ್‌ ವಿರಾಲಿ ಮುರಗೇಶನ್, ಸೂರಜ್ ಆರ್‌.ಪ್ರಬೋಧ್ ಅವರೂ ಎರಡನೇ ಸುತ್ತನ್ನು ತಲುಪಿದರು. ಅರ್ಹತಾ ಸುತ್ತಿನಿಂದ ಬಂದಿದ್ದ ಮಾಧ್ವಿನ್‌ ಕಾಮತ್‌ ಯಶಸ್ಸಿನ ಓಟ ಮುಂದುವರಿಸಿ, ವೈಲ್ಡ್‌ ಕಾರ್ಡ್‌ ಪ್ರವೇಶ ಪಡೆದಿದ್ದ ಮನೀಷ್‌ ಗಣೇಶ್‌ ಅವರನ್ನು 6–3, 6–4ರಿಂದ ಪರಾಭವಗೊಳಿಸಿದರು. ಪಂದ್ಯ ಸ್ಥಗಿತ: ಡಬಲ್ಸ್‌ ವಿಭಾಗದಲ್ಲಿ ಪುರವ್‌ ರಾಜಾ ಮತ್ತು ರಾಮಕುಮಾರ್‌ ರಾಮನಾಥನ್‌ ಜೋಡಿ ಹಾಗೂ ದಿಗ್ವಿಜಯ್‌ ಪ್ರತಾಪ್‌ ಸಿಂಗ್‌ ಹಾಗೂ ಕರಣ್‌ ಸಿಂಗ್‌ ಜೋಡಿ ನಡುವಿನ ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯವನ್ನು ಸ್ಥಗಿತಗೊಳಿಸಲಾಗಿದೆ. ಈ ಹಂತದಲ್ಲಿ ದಿಗ್ವಿಜಯ್‌ ಸಿಂಗ್‌ ಹಾಗೂ ಕರಣ್‌ ಸಿಂಗ್‌ 7–6ರಿಂದ ಮುಂದಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.