ಧಾರವಾಡ ಐಟಿಎಫ್‌ ಟೂರ್ನಿ: ಎಂಟೂ ಶ್ರೇಯಾಂಕದ ಆಟಗಾರರು ಕ್ವಾರ್ಟರ್‌ಗೆ! ಧಾರವಾಡ: ಅತಿ ವಿರಳ ಎಂಬಂತೆ ಎಲ್ಲಾ ಎಂಟೂ ಮಂದಿ ಶ್ರೇಯಾಂಕ ಆಟಗಾರರು, ಜಿಲ್ಲಾ ಲಾನ್‌ ಟೆನಿಸ್‌ ಸಂಸ್ಥೆಯ ಅಂಗಣದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಟೆನಿಸ್‌ ಟೂರ್ನಿಯಲ್ಲಿ (ಐಟಿಎಫ್‌) ಉತ್ತಮ ಪ್ರದರ್ಶನ ನೀಡಿ, ಗುರುವಾರ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಭಾರತದ ಆಟಗಾರರಾದ ಮೂರನೇ ಶ್ರೇಯಾಂಕದ ದಿಗ್ವಿಜಯ್‌ ಪ್ರತಾಪ್‌ ಸಿಂಗ್‌, ನಾಲ್ಕನೇ ಶ್ರೇಯಾಂಕದ ರಾಮಕುಮಾರ್ ರಾಮನಾಥನ್‌, ಏಳನೇ ಶ್ರೇಯಾಂಕದ ಸಿದ್ಧಾರ್ಥ ರಾವತ್‌, ಎಂಟನೇ ಶ್ರೇಯಾಂಕದ ಎಸ್‌.ಡಿ.ಪ್ರಜ್ವಲ್‌ ದೇವ್‌ ಇವರಲ್ಲಿ ಒಳಗೊಂಡಿದ್ದಾರೆ. ಅಗ್ರ ಶ್ರೇಯಾಂಕದ ನಿಕ್ ಚಾಪೆಲ್ (ಅಮೆರಿಕ) 6–4, 6–4 ರಲ್ಲಿ ನೇರ ಸೆಟ್‌ಗಳಿಂದ ಕರಣ್‌ ಸಿಂಗ್ ಅವರನ್ನು ಸೋಲಿಸಿದರೂ ಪೈಪೋಟಿ ಎದುರಿಸಿದರು. ಒಂದು ಹಂತದಲ್ಲಿ ಮೊದಲ ಸೆಟ್‌ ಸ್ಕೋರ್‌ 4–4ರಲ್ಲಿ ಸಮನಾಗಿತ್ತು. ಆದರೆ 9ನೇ ಗೇಮ್‌ಅನ್ನು ಸ್ವಯಂಕೃತ ತಪ್ಪುಗಳಿಂದ ಕಳೆದುಕೊಂಡ ಪರಿಣಾಮ, ಚಾಪೆಲ್ ಹಿಡಿತ ಸಾಧಿಸಿದರು. ಎರಡನೇ ಸೆಟ್‌ನಲ್ಲಿ ಒಮ್ಮೆ ಎದುರಾಳಿಯ ಸರ್ವ್ ಬ್ರೇಕ್ ಮಾಡಿದ್ದ ಕರಣ್‌ 3–0 ಮುನ್ನಡೆದಿದ್ದರು. ಆದರೆ ಅದೇ ಲಯವನ್ನು ಮುಂದುವರಿಸಲಿಲ್ಲ. ಇನ್ನೊಂದೆಡೆ ಚಾಪೆಲ್ ಸ್ಕೋರ್ ಸಮಮಾಡಿ, ಪಂದ್ಯವನ್ನು ನಿಯಂತ್ರಣಕ್ಕೆ ಪಡೆದರು. ದಶಕದ ಹಿಂದೆ ಇದೇ ಅಂಗಣದಲ್ಲಿ ಐಟಿಎಫ್‌ ಫ್ಯೂಚರ್ಸ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದ ರಾಮಕುಮಾರ ರಾಮನಾಥನ್‌ 88 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 7-6 (8–6), 6-3 ರಿಂದ ಇಷಾಕ್‌ ಇಕ್ಬಾಲ್‌ ಅವರನ್ನು ಸೋಲಿಸಿದರು. ಎರಡನೇ ಶ್ರೇಯಾಂಕದ ಬೋಗ್ದಾನ್ ಬೊಬ್ರೊವ್ 6–3, 6–3 ರಿಂದ ರಣಜಿತ್‌ ವಿರಾಲಿ ಮುರುಗೇಶನ್‌ ಅವರನ್ನು ಸೋಲಿಸಿದರು. ಇತರ ಫಲಿತಾಂಶಗಳು ಸಿಂಗಲ್ಸ್‌ ಪ್ರಿಕ್ವಾರ್ಟರ್‌ಫೈನಲ್ಸ್‌: ದಿಗ್ವಿಜಯ ಪ್ರತಾಪ್ ಸಿಂಗ್ 6–4, 6–2 ರಿಂದ ರಿಷಬ್ ಅಗರವಾರ್‌ ಅವರನ್ನು, ಏಳನೇ ಶ್ರೇಯಾಂಕದ ಸಿದ್ಧಾರ್ಥ ರಾವತ್ 6-3, 7-5ರಿಂದ ನಿತಿನ್‌ಕುಮಾರ್ ಸಿನ್ಹಾ ಅವರನ್ನು; ಐದನೇ ಶ್ರೇಯಾಂಕದ ಖಜೂಕಿ ನಿಶಿವಾಕಿ (ಜಪಾನ್‌) 6–4 6–4ರಿಂದ ಕ್ವಾಲಿಫೈಯರ್ ಮಾಧ್ವಿನ್‌ ಕಾಮತ್‌ ಅವರನ್ನು; ಮೈಸೂರಿನ ಪ್ರಜ್ವಲ್‌ ದೇವ್‌ ಅವರು 6-3, 6-1ರಿಂದ ಸೂರಜ್‌ ಆರ್‌ ಪ್ರಬೋಧ್‌ ಅವರನ್ನು ಸೋಲಿಸಿದರು. ಆರನೇ ಶ್ರೇಯಾಂಕದ ಫ್ಲೊರೆಂಟ್‌ ಬಾಕ್ಸ್‌ (ಫ್ರಾನ್ಸ್) 6–4, 6–0 ಯಿಂದ ಎನ್ರಿಕೊ ಗಿಯಾಕೊಮಿನಿ (ಇಟಲಿ) ಮೇಲೆ ಜಯ ಪಡೆದರು. ಡಬಲ್ಸ್‌ (ಕ್ವಾರ್ಟರ್‌ ಫೈನಲ್ಸ್‌): ಸಿದ್ಧಾಂತ ಬಂಥಿಯಾ-ವಿಷ್ಣುವರ್ಧನ ಜೋಡಿಗೆ 6–3, 7–6 ರಿಂದ ಮನಿಷ್‌ ಗಣೇಶ್‌- ಸೂರಜ್‌ ಆರ್‌.ಪ್ರಬೋಧ್‌ ಜೋಡಿ ವಿರುದ್ಧ ಜಯ; ಸಾಯಿ ಕಾರ್ತಿಕ್‌ ರೆಡ್ಡಿ ಗಂಟಾ- ಮನಿಶ್‌ ಸುರೇಶಕುಮಾರ್‌ ಜೋಡಿಗೆ 6–3, 7–6 ರಲ್ಲಿ ರಿಷಭ್‌ ಅಗರವಾಲ್‌- ಪ್ಲೋರೆಂಟ್‌ ಬಾಕ್ಸ್‌ ಜೋಡಿ ವಿರುದ್ಧ ಜಯ. ಎಸ್‌.ಡಿ. ಪ್ರಜ್ವಲ್‌ ದೇವ್‌- ನಿತಿನ್‌ಕುಮಾರ್‌ ಸಿನ್ಹಾ ಜೋಡಿಗೆ 6-2, 4-6, 10-5 ರಿಂದ ಇಷಾಕ್‌ ಇಕ್ಬಾಲ್‌-ಫೈಸಲ್‌ ಖಮರ್‌ ಜೋಡಿ ವಿರುದ್ಧ ಜಯ. ಅಚ್ಚರಿಯ ಸೋಲು: ಬೆಳಿಗ್ಗೆ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ದಿಗ್ವಿಜಯ್ ಪ್ರತಾಪ್ ಸಿಂಗ್ – ಕರಣ್ ಸಿಂಗ್ ಜೋಡಿ 7–6 (3), 3–6, 10–6 ರಿಂದ ಅಗ್ರ ಶ್ರೇಯಾಂಕದ ಪುರವ್ ರಾಜಾ– ರಾಮಕುಮಾರ್ ರಾಮನಾಥನ್ ಜೋಡಿಯನ್ನು ಸೋಲಿಸಿ ಅನಿರೀಕ್ಷಿತ ಫಲಿತಾಂಶ ನೀಡಿತು. ಪುರವ್, ರಾಮನಾಥನ್ ಇಬ್ಬರೂ ಅಂತರರಾಷ್ಟ್ರೀಯ ಆಟಗಾರರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.