ಏಷ್ಯಾಕಪ್‌ ಟೂರ್ನಿಗೆ ಚೀನಾ ಆತಿಥ್ಯ ಪ್ಯಾರಿಸ್‌ (ಎಎಫ್‌ಪಿ): 2023ರ ಏಷ್ಯಾಕಪ್‌ ಫುಟ್‌ಬಾಲ್‌ ಟೂರ್ನಿಯ ಆತಿಥ್ಯ ಚೀನಾ ಮಡಿಲಿಗೆ ಬಿದ್ದಿದೆ. ಟೂರ್ನಿಯ ಆಯೋಜನೆಗೆ ಬಿಡ್‌ ಸಲ್ಲಿಸಿದ್ದ ಎಲ್ಲ ದೇಶಗಳು ಹಿಂದೆ ಸರಿದಿದ್ದರಿಂದ ಚೀನಾಗೆ ಈ ಅವಕಾಶ ದೊರೆತಿದೆ ಎಂದು ಏಷ್ಯನ್‌ ಫುಟ್‌ಬಾಲ್‌ ಒಕ್ಕೂಟ ಖಚಿತಪಡಿಸಿದೆ. ಚೀನಾ ಎರಡನೇ ಬಾರಿ ಈ ಟೂರ್ನಿಯ ಆತಿಥ್ಯ ವಹಿಸಿಕೊಳ್ಳಲಿದೆ 2004ರ ಆವೃತ್ತಿಯನ್ನು ಆಯೋಜಿಸಿದ್ದ ಅದು, ಜಪಾನ್‌ ತಂಡದ ವಿರುದ್ಧ ಫೈನಲ್‌ನಲ್ಲಿ ಸೋತು ರನ್ನರ್‌ಅಪ್‌ ಆಗಿತ್ತು. ಈ ಮೊದಲು ಟೂರ್ನಿ ಆಯೋಜಿಸಲು ಥಾಯ್ಲೆಂಡ್‌ ಹಾಗೂ ಇಂಡೋನೇಷ್ಯಾ ಆಸಕ್ತಿ ತೋರಿದ್ದವು. ಆದರೆ ಅಷ್ಟೇ ವೇಗವಾಗಿ ನಿರಾಸಕ್ತಿ ತಳೆದಿದ್ದವು. ಹೋದ ತಿಂಗಳು ದಕ್ಷಿಣ ಕೊರಿಯಾ ಕೂಡ ಬಿಡ್‌ನಿಂದ ಹಿಂದೆ ಸರಿದಿತ್ತು. ಹೀಗಾಗಿಏಕೈಕ ಸ್ಪರ್ಧಿಯಾಗಿ ಉಳಿದುಕೊಂಡಿದ್ದ ಚೀನಾ ಸಹಜವಾಗಿಯೇ ಆತಿಥ್ಯಕ್ಕೆ ಸಜ್ಜಾಗಿದೆ. 2002ರಲ್ಲಿ ಒಮ್ಮೆ ಮಾತ್ರ ಚೀನಾ ತಂಡ ವಿಶ್ವಕಪ್‌ ಟೂರ್ನಿಗೆ ಅರ್ಹತೆ ಪಡೆದಿತ್ತು. ವಿಶ್ವ ಫಿಫಾ ಕ್ರಮಾಂಕದಲ್ಲಿ ಅದು 74ನೇ ಸ್ಥಾನದಲ್ಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.