ಲಖನೌದಲ್ಲಿ ರಣಬಿಸಿಲು: ಡೇವಿಸ್‌ ಕಪ್‌ ಪಂದ್ಯಗಳ ಸಮಯ ಬದಲು ಲಖನೌ: ಭಾರತ ಮತ್ತು ಮೊರೊಕ್ಕೊ ತಂಡಗಳ ನಡುವಣ ಡೇವಿಸ್‌ ಕಪ್‌ ಟೆನಿಸ್‌ ಟೂರ್ನಿಯ ವಿಶ್ವ ಗುಂಪು–2ರ ಪಂದ್ಯಗಳ ಸಮಯವನ್ನು ಅತಿಯಾದ ತಾಪಮಾನದ ಕಾರಣ ಪರಿಷ್ಕರಿಸಲಾಗಿದೆ. ಸೆ.16 ಮತ್ತು 17ರಂದು ನಡೆಯುವ ಪಂದ್ಯಕ್ಕಾಗಿ ಅಭ್ಯಾಸ ನಡೆಸುತ್ತಿರುವ ಭಾರತ ತಂಡದ ಆಟಗಾರರು ಗುರುವಾರ ಇಲ್ಲಿನ ಸುಡುಬಿಸಿಲಿಗೆ ಬಸವಳಿದರು. ಶನಿವಾರದ ಪಂದ್ಯಗಳನ್ನು ಮಧ್ಯಾಹ್ನ 12ರ ಬದಲು 2 ಗಂಟೆಗೆ ಹಾಗೂ ಭಾನುವಾರದ ಪಂದ್ಯಗಳನ್ನು ಬೆಳಿಗ್ಗೆ 11ರ ಬದಲು ಮಧ್ಯಾಹ್ನ 1ಕ್ಕೆ ಆರಂಭಿಸಲು ನಿರ್ಧರಿಸಲಾಗಿದೆ. ಅಭ್ಯಾಸದ ವೇಳೆ ವಿಪರೀತ ಬೆವರುತ್ತಿದ್ದ ರೋಹನ್ ಬೋಪಣ್ಣ, ‘ತಾಲೀಮು ಅವಧಿಯಲ್ಲಿ ಈ ರೀತಿಯಲ್ಲಿ ಬೆವರುತ್ತಿದೆ ಎಂದಾದರೆ, ಏನೋ ಗಂಭೀರ ಸಮಸ್ಯೆ ಇದೆ ಎಂದರ್ಥ’ ಎಂದು ಹೇಳಿದ್ದಾರೆ. ಯೂಕಿ ಭಾಂಬ್ರಿ ಮತ್ತು ಸಾಕೇತ್‌ ಮೈನೇನಿ ಕೂಡಾ ಸೆಕೆಯ ಪರಿಸ್ಥಿತಿಗೆ ಹೊಂದಿಕೊಳ್ಳಲು ಹರಸಾಹಸಪಟ್ಟರು. ತಾಪಮಾನ 33 ಡಿಗ್ರಿ ಸೆಲ್ಸಿಯಸ್‌ ಇದೆಯಾದರೂ, ಅದು 43 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ ಎಂದು ಭಾಸವಾಗುತ್ತಿದೆ. ಕೆಲ ದಿನಗಳ ಹಿಂದೆ ಇಲ್ಲಿ ಮಳೆ ಸುರಿದದ್ದು ಇಂತಹ ಪರಿಸ್ಥಿತಿಗೆ ಕಾರಣ. ಅಂಕಣದಿಂದ ಏಳುವ ಬಿಸಿಯೂ ಆಟಗಾರರಿಗೆ ಇನ್ನಷ್ಟು ಸವಾಲಾಗಿ ಪರಿಣಮಿಸಿದೆ. ‘ಇಂತಹ ಸೆಕೆಯ ಪರಿಸ್ಥಿತಿಯಲ್ಲಿ ಆಡುವಾಗ ಆಟಗಾರನ ದೇಹದಿಂದ ಪ್ರತಿ ಗಂಟೆಗೆ 2 ರಿಂದ 3 ಲೀ.ನಷ್ಟು ನೀರು ಬೆವರಿನ ರೂಪದಲ್ಲಿ ಹೊರಹೋಗುತ್ತದೆ. ಅಷ್ಟೇ ಪ್ರಮಾಣದ ನೀರು ಕುಡಿಯದಿದ್ದರೆ, 30 ನಿಮಿಷಗಳ ಒಳಗಾಗಿ ದೈಹಿಕ ಸಾಮರ್ಥ್ಯ ಕುಗ್ಗುತ್ತದೆ. ಅಂತಿಮವಾಗಿ ಮಾಂಸಖಂಡದ ಸೆಳೆತಕ್ಕೆ ಒಳಗಾಗುವರು’ ಎಂದು ಭಾರತ ತಂಡದ ಫಿಸಿಯೊ ಯಶ್‌ ಪಾಂಡೆ ಎಚ್ಚರಿಸಿದ್ದಾರೆ. ‘ಪಂದ್ಯ ಆರಂಭದ ಸಮಯವನ್ನು ಬದಲಾವಣೆ ಮಾಡಿರುವುದು ದಿನದ ಎರಡನೇ ಸಿಂಗಲ್ಸ್‌ ಪಂದ್ಯ ಆಡುವ ಆಟಗಾರರಿಗೆ ನೆರವಾಗಲಿದೆ. ಏಕೆಂದರೆ ಮಧ್ಯಾಹ್ನ 2ಕ್ಕೆ ಆರಂಭವಾಗಬೇಕಿದ್ದ ಪಂದ್ಯ ಸಂಜೆ 4ಕ್ಕೆ ಶುರುವಾಗಲಿದೆ. ಇಲ್ಲಿನ ಪರಿಸ್ಥಿತಿ ಉಭಯ ತಂಡಗಳಿಗೂ ಸವಾಲಾಗಿ ಪರಿಣಮಿಸಲಿದೆ. ಆಟಗಾರರ ಫಿಟ್‌ನೆಸ್‌ ಕೂಡಾ ಫಲಿತಾಂಶದ ಮೇಲೆ ನಿರ್ಣಾಯಕ ಪರಿಣಾಮ ಬೀರುವ ಸಾಧ್ಯತೆಯಿದೆ’ ಎಂದು ಭಾರತ ತಂಡದ ಕೋಚ್‌ ಜೀಶಾನ್‌ ಅಲಿ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.