ಐಟಿಎಫ್‌ ಮಹಿಳಾ ವಿಶ್ವ ಟೆನಿಸ್‌: ಪ್ರಶಸ್ತಿಗೆ ಝೀಲ್‌–ಶ್ರೀವಲ್ಲಿ ರಶ್ಮಿಕಾ ಸೆಣಸಾಟ ಬೆಂಗಳೂರು: ಅನುಭವಿ ಋತುಜಾ ಭೋಸಲೆ ವಿರುದ್ಧ ಸೋಲಿನ ಸುಳಿಯಿಂದ ಚೇತರಿಸಿ ಪಂದ್ಯ ಗೆದ್ದ ಝೀಲ್ ದೇಸಾಯಿ ಬೌರಿಂಗ್ ಇನ್‌ಸ್ಟಿಟ್ಯೂಟ್‌ ಐಟಿಎಫ್‌ ಮಹಿಳಾ ವಿಶ್ವ ಟೆನಿಸ್‌ ಟೂರ್‌ನಲ್ಲಿ ಅಮೋಘ ಯಶಸ್ಸಿನ ಓಟವನ್ನು ಮುಂದುವರಿಸಿದರು. ಅವರು ಭಾನುವಾರ ನಡೆಯುವ ಫೈನಲ್‌ನಲ್ಲಿ ರಾಷ್ಟ್ರೀಯ ಚಾಂಪಿಯನ್‌ ಶ್ರೀವಲ್ಲಿ ರಷ್ಮಿಕಾ ಭಮಿಡಪಾಟಿ ಅವರನ್ನು ಎದುರಿಸಲಿದ್ದಾರೆ. ಶನಿವಾರ ನಡೆದ ಸೆಮಿಫೈನಲ್ ಪಂದ್ಯಗಳ ಫಲಿತಾಂಶ ವಿಭಿನ್ನ ರೀತಿಯದ್ದಾಗಿದ್ದವು. ಝೀಲ್‌ ಹೋರಾಟ ತೋರಿ 3–6, 6–4, 7–5 ರಿಂದ ಮೂರನೇ ಶ್ರೇಯಾಂಕದ ಋತುಜಾ ಮೇಲೆ ಜಯಗಳಿಸಿದರೆ, ರಷ್ಮಿಕಾ ಇನ್ನೊಂದೆಡೆ ಎರಡನೆ ಶ್ರೇಯಾಂಕದ ಆಟ ಗಾರ್ತಿ, ಥಾಯ್ಲೆಂಡ್‌ನ ಲನ್ಲಾನಾ ತರಾರುದೀ ಅವರನ್ನು 6–2, 6–1 ರಿಂದ ನೇರ ಸೆಟ್‌ಗಳಲ್ಲಿ ಹಿಮ್ಮೆಟ್ಟಿಸಿದರು. ಏಷ್ಯನ್ ಗೇಮ್ಸ್‌ ಸ್ವರ್ಣ ವಿಜೇತೆ ರುತುಜಾ ಅವರು, ಶ್ರೇಯಾಂಕ ಆಟಗಾರ್ತಿಯರನ್ನು ಮಣಿಸಿ ಆತ್ಮವಿಶ್ವಾಸದಿಂದ ಇರುವ ಝೀಲ್ ವಿರುದ್ಧ ಮೊದಲ ಸೆಟ್‌ ಗೆದ್ದು, ಎರಡನೇ ಸೆಟ್‌ನಲ್ಲಿ 3–1 ಮುನ್ನಡೆ ಪಡೆದಿದ್ದರು. ಆದರೆ ಈ ಹಂತದಲ್ಲಿ ತಿರುಗೇಟು ನೀಡಿದ ಅಹಮದಾಬಾದ್ ಆಟಗಾರ್ತಿ, ಋತುಜಾ ದಣಿದಿದ್ದರ ಲಾಭ ಪಡೆದರು. ಏಳು ಮತ್ತು ಒಂಬತನೇ ಗೇಮ್‌ನಲ್ಲಿ ಎದುರಾಳಿಯ ಸರ್ವ್‌ ಬ್ರೇಕ್ ಸೇರಿದಂತೆ ಸತತ ನಾಲ್ಕು ಗೇಮ್‌ಗಳನ್ನು ಗೆದ್ದ ಝೀಲ್‌ ಎರಡನೇ ಸೆಟ್‌ ಹಿಡಿತಕ್ಕೆ ಪಡೆದರು. 27 ವರ್ಷದ ಋತುಜಾ ಅವರಿಗೆ ಟೂರ್ನಿಯ ಆರಂಭದಲ್ಲೇ ಜ್ವರ ಕಾಣಿಸಿಕೊಂಡಿತ್ತು. ನಿರ್ಣಾಯಕ ಮೂರನೇ ಸೆಟ್‌ನಲ್ಲಿ ಮಹಾರಾಷ್ಟ್ರದ ಆಟಗಾರ್ತಿ ಕೆಲವು ಉತ್ತಮ ಪಾಸಿಂಗ್‌ ಹೊಡೆತಗಳ ಮೂಲಕ ಬೇಗನೇ 3–1 ಮುನ್ನಡೆ ಪಡೆದರು. ಅಷ್ಟೇ ಅಲ್ಲ, ನಂತರ ಎರಡು ಬಾರಿ ಗೆಲುವಿನ ಅವಕಾಶ ಕೈಚೆಲ್ಲಿದರು. ಝೀಲ್ 2–5 ರಲ್ಲಿ ಹಿನ್ನಡೆಯಲ್ಲಿದ್ದು ಏಳನೇ ಗೇಮ್‌ನಲ್ಲಿ 30–40ರಲ್ಲಿದ್ದು ಸೋಲಿನ ಭೀತಿಯಲ್ಲಿದ್ದರು. ಈ ಹಂತದಲ್ಲಿ ಅಮೋಘವಾಗಿ ಚೇತರಿಕೆಯ ಆಟವಾಡಿದ ಝೀಲ್ ಗೇಮ್ ಗೆದ್ದರು. ಋತುಜಾ ಮತ್ತೊಮ್ಮೆ 5–3ರಲ್ಲಿದ್ದಾಗ ಗೆಲುವಿನ ಅವಕಾಶ ಪಡೆದಿದ್ದರು. ಆದರೆ ನಾಲ್ಕು ಬಾರಿ ಡಬಲ್‌ ಫಾಲ್ಟ್ ಮಾಡಿದ್ದು ದುಬಾರಿಯಾಯಿತು. ಹಿಡಿತ ಕಳೆದುಕೊಂಡಂತೆ ತಪ್ಪುಗಳನ್ನೂ ಎಸಗಿದರು. ಈ ಅವಕಾಶವನ್ನು 24 ವರ್ಷದ ಝೀಲ್ ಚೆನ್ನಾಗಿ ಬಳಸಿಕೊಂಡು ಸೆಟ್‌ ಮತ್ತು ಪಂದ್ಯ ಗೆದ್ದರು. ಇಟಲಿ– ಜರ್ಮನಿ ಜೋಡಿಗೆ ಡಬಲ್ಸ್‌ ಪ್ರಶಸ್ತಿ: ಇಟಲಿಯ ಡಿಲೆಟ್ಟಾ ಚೆರುಬಿನಿ ಮತ್ತು ಜರ್ಮನಿಯ ಅಂಟೊನಿಯಾ ಶ್ಮಿಟ್‌ ಅವರು ಮೊದಲ ಸೆಟ್‌ ಹಿನ್ನಡೆಯಿಂದ ಪುಟಿದೆದ್ದು ಮಹಿಳಾ ಡಬಲ್ಸ್‌ ಪ್ರಶಸ್ತಿ ಗೆದ್ದುಕೊಂಡರು. ಡಿಲೆಟ್ಟಾ– ಅಂಟೋನಿಯಾ ಜೋಡಿ 4–6, 7–5, 10–4 ರಿಂದ ಥಾಯ್ಲೆಂಡ್‌ನ ಪುನ್ನಿನ್ ಕೊವಾಪಿಟುಕ್ಟೆಡ್– ರಷ್ಯಾದ ಅನ್ನಾ ಉರೆಕೆ ಜೋಡಿಯನ್ನು ಸೋಲಿಸಿತು. ವಿಜೇತ ಜೋಡಿ ₹1.20 ಲಕ್ಷ ಬಹುಮಾನ ಮತ್ತು 50 ಡಬ್ಲ್ಯುಟಿಎ ಪಾಯಿಂಟ್‌ಗಳನ್ನು ಪಡೆಯಿತು. ರನ್ನರ್ ಅಪ್ ಜೋಡಿ ₹60,000 ಮತ್ತು 30 ಡಬ್ಲ್ಯುಟಿಎ ಪಾಯಿಂಟ್‌ಗಳನ್ನು ಪಡೆಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.