ಆಸ್ಟ್ರೇಲಿಯಾ ಓಪನ್‌: ಇಗಾಗೆ ಆಘಾತ ನೀಡಿದ ಲಿಂಡಾ ಮೆಲ್ಬರ್ನ್: ಅಗ್ರ ಶ್ರೇಯಾಂಕದ ಇಗಾ ಶ್ವಾಂಟೆಕ್ ಅವರು ಆಸ್ಟ್ರೇಲಿಯಾ ಓಪನ್‌ ಟೂರ್ನಿಯಿಂದ ಶನಿವಾರ ಹೊರಬಿದ್ದರು. ಮೊದಲ ಬಾರಿ ಈ ಟೂರ್ನಿಯಲ್ಲಿ ಆಡುತ್ತಿರುವ ಝೆಕ್‌ ರಿಪಬ್ಲಿಕ್‌ನ ಆಟಗಾರ್ತಿ ಲಿಂಡಾ ನೊಸ್ಕೊವಾ ಅವರು ಮೂರನೇ ಸುತ್ತಿನಲ್ಲಿ 3–6, 6–4, 6–4 ರಿಂದ ಇಗಾ ಅವರಿಗೆ ಮರೆಯಲಾಗದ ಆಘಾತ ನೀಡಿದರು. ಇದರಿಂದಾಗಿ ಮೊದಲ ಬಾರಿ ಮೆಲ್ಬರ್ನ್ ಪಾರ್ಕ್‌ನಲ್ಲಿ ಪ್ರಶಸ್ತಿ ಗೆಲ್ಲುವ ಪೋಲೆಂಡ್‌ ಆಟಗಾರ್ತಿಯ ಕನಸು ನುಚ್ಚುನೂರಾಯಿತು. 22 ವರ್ಷದ ಶ್ವಾಂಟೆಕ್‌ಗೆ ಟೂರ್ನಿಯ ಮೊದಲ ಎರಡು ಸುತ್ತುಗಳೂ ಪ್ರಯಾಸದಾಯಕವಾಗಿದ್ದವು. ಆರಂಭದ ಸುತ್ತಿನಲ್ಲಿ ಸೋಫಿಯಾ ಕೆನಿನ್ ವಿರುದ್ಧ ಒಂದು ಟೈಬ್ರೇಕರ್‌ನಲ್ಲಿ ಆಡಬೇಕಾಯಿತು. ಎರಡನೇ ಸುತ್ತಿನಲ್ಲಿ ಡೇನಿಯಲಿ ಕಾಲಿನ್ಸ್‌ ಎದುರೂ ಜಯಗಳಿಸಿದ್ದು ಕಷ್ಟಪಟ್ಟೇ. ನಾಲ್ಕು ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ಗೆದ್ದಿರುವ ಶ್ವಾಂಟೆಕ್‌ ಸೋಲಿನೊಡನೆ ಮಹಿಳಾ ವಿಭಾಗದ ಅಗ್ರ 10 ರಲ್ಲಿ ಏಳು ಮಂದಿ ಸವಾಲು ಬೇಗನೆ ಅಂತ್ಯಗೊಂಡಂತಾಗಿದೆ.‌ ‌‌19ರ ಹರೆಯದ ನೊಸ್ಕೊವಾ, ಈ ಹಿಂದೆ ವಿವಿಧ ಟೂರ್ನಿಗಳಲ್ಲಿ ಮೂವರು ಟಾಪ್‌ 10 ಆಟಗಾರ್ತಿಯರನ್ನು ಸೋಲಿಸಿ ಗಮನ ಸೆಳೆದಿದ್ದರು. ಆದರೆ ಶ್ವಾಂಟೆಕ್‌ ಮೊದಲ ಸೆಟ್‌ನಲ್ಲಿ ಹಿಡಿತ ಪಡೆದರು. ನಂತರ ಎದುರಾಳಿಯ ಶಕ್ತಿಶಾಲಿ ಹೊಡೆತಗಳ ಮುಂದೆ ನಿಯಂತ್ರಣ ಕಳೆದುಕೊಂಡು 2 ಗಂಟೆ 20 ನಿಮಿಷಗಳ ಪಂದ್ಯದಲ್ಲಿ ಸೋಲನುಭವಿಸಿದರು. ನೊಸ್ಕೊವಾ ಮೊದಲ ಬಾರಿ ಪ್ರಮುಖ ಟೂರ್ನಿಯೊಂದರ ನಾಲ್ಕನೇ ಸುತ್ತಿಗೆ ಮುನ್ನಡೆದರು. 50ನೇ ಕ್ರಮಾಂಕದ ಲಿಂಡಾ ಮುಂದಿನ ಸುತ್ತಿನಲ್ಲಿ 19ನೇ ಶ್ರೇಯಾಂಕದ ಎಲಿನಾ ಸ್ವಿಟೊಲಿನಾ ಅವರನ್ನು ಎದುರಿಸಲಿದ್ದಾರೆ. ಇನ್ನೊಂದು ಪಂದ್ಯದಲ್ಲಿ ವಿಕ್ಟೋರಿಯಾ ಅಜರೆಂಕಾ 6–1, 7–5 ರಿಂದ 11ನೇ ಶ್ರೇಯಾಂಕದ ಯಲೆನಾ ಒಸ್ಟಪೆಂಕೊ (ಲಾತ್ವಿಯಾ) ವಿರುದ್ಧ ಜಯಗಳಿಸಿದರು. ಅಲ್ಕರಾಝ್ ಮುನ್ನಡೆ: ಆದರೆ ಪುರುಷರ ವಿಭಾಗದಲ್ಲಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಪ್ರಮುಖರು ನಾಲ್ಕನೇ ಸುತ್ತಿಗೆ ಮುನ್ನಡೆದರು. ಕಾರ್ಲೊಸ್‌ ಅಲ್ಕರಾಝ್, ಡೇನಿಯಲ್‌ ಮೆಡ್ವೆಡೇವ್ ಮತ್ತು ಅಲೆಕ್ಸಾಂಡರ್‌ ಜ್ವರೇವ್ ಟೂರ್ನಿಯ ಏಳನೇ ದಿನ ತಮ್ಮ ಪಂದ್ಯಗಳನ್ನು ಗೆದ್ದುಕೊಂಡರು. ಮೂರನೇ ಶ್ರೇಯಾಂಕದ ಮೆಡ್ವೆಡೇವ್‌ 6–3, 6–4, 6–3 ರಿಂದ ಕೆನಡಾದ ಫೆಲಿಕ್ಸ್‌ ಆಗರ್ ಅಲಿಸಿಮೆ ವಿರುದ್ಧ ಜಯಗಳಿಸಿ ಅಂತಿಮ 16ರ ಘಟ್ಟ ತಲುಪಿದರು. ಮೆಡ್ವೆಡೇವ್ ಇಲ್ಲಿ ಎರಡು ಬಾರಿ ರನ್ನರ್ ಅಪ್‌ ಆಗಿದ್ದಾರೆ. ಎರಡನೇ ಶ್ರೇಯಾಂಕದ ಕಾರ್ಲೋಸ್ ಅಲ್ಕರಾಝ್ (ಸ್ಪೇನ್‌) ಸಹ 6–1, 6–1, 1–0 ಯಿಂದ ಶಾಂಗ್‌ ಜುನ್‌ಚೆಂಗ್ (ಚೀನಾ) ಅವರನ್ನು ಸೋಲಿಸಿದರು. ಶಾಂಗ್‌ ಮೂರನೇ ಸೆಟ್‌ನ ಆರಂಭದಲ್ಲಿ ತೊಡೆನೋವಿನಿಂದ ಪಂದ್ಯ ಬಿಟ್ಟುಕೊಟ್ಟರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.