ಮಹಿಳೆಯರ ಐಟಿಎಫ್ ಟೂರ್ನಿ: ದಾರ್ಜಾಗೆ ಕಿರೀಟ ಬೆಂಗಳೂರು: ಅಗ್ರಶ್ರೇಯಾಂಕದ ಆಟಗಾರ್ತಿ, ಲಾಟ್ವಿಯಾದ ದಾರ್ಜಾ ಸೆಮಿನಿಸ್ಟಾಜಾ ಅವರು ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ ಕೋರ್ಟ್‌ನಲ್ಲಿ ನಡೆದ ಕೆಪಿಬಿ ಟ್ರಸ್ಟ್ ಮಹಿಳೆಯರ ಐಟಿಎಫ್ ಟೂರ್ನಿಯ ಪ್ರಶಸ್ತಿ ಗೆದ್ದುಕೊಂಡರು. ಭಾನುವಾರ ನಡೆದ ಫೈನಲ್‌ ಪಂದ್ಯದ ಎರಡನೇ ಸೆಟ್‌ನಲ್ಲಿ ದಾರ್ಜಾ ಅವರ ವಿರುದ್ಧ ಕಣದಲ್ಲಿದ್ದ ಆರನೇ ಶ್ರೇಯಾಂಕದ ಕ್ಯಾರೊಲ್ ಮಾನೆಟ್ ಗಾಯಗೊಂಡು ಹಿಂದೆ ಸರಿದರು. ಇದರಿಂದಾಗಿ 6–1, 3–0ಯಿಂದ ಮುನ್ನಡೆಯಲ್ಲಿದ್ದ ದಾರ್ಜಾಗೆ ಕಿರೀಟ ಒಲಿಯಿತು. ಫ್ರಾನ್ಸ್‌ನ ಕ್ಯಾರೊಲ್ ಅವರು ಬೆನ್ನುನೋವಿನಿಂದ ಬಳಲಿದರು. 21 ವರ್ಷದ ದಾರ್ಜಾ ಅವರಿಗೆ ವೃತ್ತಿಜೀವನದಲ್ಲಿ ಇದು 15ನೇ ಪ್ರಶಸ್ತಿಯಾಗಿದೆ. ಶನಿವಾರ ಅವರು ಡಬಲ್ಸ್‌ನಲ್ಲಿಯೂ ವಿಜೇತರಾಗಿದ್ದರು. ‘ಬೆಂಗಳೂರು ನನಗೆ ಅದೃಷ್ಟದ ತಾಣ. ಇಲ್ಲಿಂದ ಎರಡು ಪ್ರಶಸ್ತಿಗಳನ್ನು ಗೆದ್ದುಕೊಂಡು ಹೋಗುತ್ತಿರುವುದು ಅಪಾರ ಸಂತಸ ತಂದಿದೆ’ ಎಂದು ದಾರ್ಜಾ ಸುದ್ದಿಗಾರರ ಮುಂದೆ ಸಂತಸ ವ್ಯಕ್ತಪಡಿಸಿದರು. ಅವರಿಗೆ ₹ 5 ಲಕ್ಷದ ಚೆಕ್ ಮತ್ತು ರನ್ನರ್ ಅಪ್ ಕ್ಯಾರೊಲ್‌ಗೆ ₹ 3 ಲಕ್ಷದ ಚೆಕ್ ಕೂಡ ನೀಡಲಾಯಿತು. ದಾರ್ಜಾ 50 ಹಾಗೂ ಕ್ಯಾರೊಲ್ 33 ಡಬ್ಲ್ಯುಟಿಎ ಅಂಕಗಳನ್ನು ಗಳಿಸಿದರು. ರಜೆ ದಿನವಾದ ಭಾನುವಾರ ಫೈನಲ್ ಪಂದ್ಯ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಇಬ್ಬರೂ ತಮ್ಮ ಕಳೆದ ಪಂದ್ಯಗಳಲ್ಲಿ ಉತ್ತಮವಾಗಿ ಆಡಿದ್ದರಿಂದ ಫೈನಲ್ ಹಣಾಹಣಿಯು ರೋಚಕವಾಗುವ ನಿರೀಕ್ಷೆ ಇತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.