: ಸೆಮಿಫೈನಲ್‌ಗೆ ಬೋಪಣ್ಣ ಲಗ್ಗೆ, ನಂ.1 ರ‍್ಯಾಂಕ್‌ ಖಚಿತ ಮೆಲ್ಬರ್ನ್: ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಮ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಜೋಡಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಆ ಮೂಲಕ ಪುರುಷರ ಡಬಲ್ಸ್ ರ‍್ಯಾಂಕಿಂಗ್‌ನಲ್ಲಿ ಬೋಪಣ್ಣ ನಂ.1 ಸ್ಥಾನಕ್ಕೆ ಲಗ್ಗೆ ಇಡಲಿದ್ದಾರೆ. 43 ವರ್ಷದ ಬೋಪಣ್ಣ, ಪುರುಷರ ಡಬಲ್ಸ್ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಪಡೆದ ಅತಿ ಹಿರಿಯ ಆಟಗಾರ ಎನಿಸಿಕೊಳ್ಳಲಿದ್ದಾರೆ. ಈ ಕುರಿತು ಸೋಮವಾರ ಅಧಿಕೃತ ಪ್ರಕಟಣೆ ಹೊರಬೀಳಲಿದೆ. ಕ್ವಾರ್ಟರ್ ಫೈನಲ್‌ನಲ್ಲಿ ಬೋಪಣ್ಣ-ಎಬ್ಡೆನ್‌ ಜೋಡಿ, ಆರನೇ ಶ್ರೇಯಾಂಕಿತ ಅರ್ಜೆಂಟೀನಾದ ಮ್ಯಾಕ್ಸಿಮೊ ಗೊನ್ಜಾಲೆಜ್ ಮತ್ತು ಆಂಡ್ರೆಸ್ ಮೊಲ್ಟೆನಿ ವಿರುದ್ಧ 6-4, 7-6 (5)ರ ಅಂತರದಲ್ಲಿ ಜಯ ಗಳಿಸಿತು. ಟೂರ್ನಿಯಲ್ಲಿ ಎರಡನೇ ಶ್ರೇಯಾಂಕಿತರಾಗಿರುವ ಬೋಪಣ್ಣ-ಎಬ್ಡೆನ್ ಜೋಡಿ, ಸೆಮಿಫೈನಲ್‌ ಪಂದ್ಯದಲ್ಲಿ ಶ್ರೇಯಾಂಕರಹಿತ ಜೋಡಿ ಥಾಮಸ್ ಮಾಚಾಕ್ ಮತ್ತು ಝಿಚೆನ್ ಜಾಂಗ್ ಸವಾಲನ್ನು ಎದುರಿಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.