ಗರಿಷ್ಠ ಪಂದ್ಯ ಆಡಿದ ಸುನಿಲ್‌ ಚೆಟ್ರಿ ಬುರಿರಾಮ್‌ (ಪಿಟಿಐ): ಭಾರತದ ಅನುಭವಿ ಫುಟ್‌ಬಾಲ್‌ ಆಟಗಾರ ಸುನಿಲ್‌ ಚೆಟ್ರಿ ಬುಧವಾರ ಮಹತ್ವದ ಮೈಲುಗಲ್ಲು ಸ್ಥಾಪಿಸಿದರು. ಭಾರತದ ಪರ ಅತ್ಯಧಿಕ ಅಂತರರಾಷ್ಟ್ರೀಯ ಪಂದ್ಯಗಳನ್ನು(108) ಆಡಿದ ಕೀರ್ತಿ ಅವರ ಪಾಲಾಯಿತು. ಆದರೆ ಕ್ಯುರಸೊವ್‌ ತಂಡದ ವಿರುದ್ಧ ಇಲ್ಲಿ ನಡೆದ ಕಿಂಗ್ಸ್‌ ಕಪ್‌ ಟೂರ್ನಿಯಲ್ಲಿ ಭಾರತ 1–3 ರಿಂದ ಸೋತಿತು. ಚೆಟ್ರಿ ಅವರು ಭಾರತದ ಪರ 31ನೇ ನಿಮಿಷದಲ್ಲಿ ಏಕೈಕ ಗೋಲು ಹೊಡೆದರು. ಇದು ಅವರು ಹೊಡೆದ ಒಟ್ಟು 68ನೇ ಗೋಲು. ಭಾರತದ ಪರ ಈ ಹಿಂದೆ ಬೈಚುಂಗ್‌ ಭುಟಿಯಾ ಅತ್ಯಧಿಕ ಪಂದ್ಯಗಳನ್ನು ಆಡಿದ ಸಾಧನೆಗೆ ಭಾಜನರಾಗಿದ್ದರು. ಅವರು 107 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. ಪಂದ್ಯದಲ್ಲಿ ಕ್ಯುರಸೊವ್‌ ಪರ ರೋಲಿ ಬೋನೆವೆಸಿಯಾ(16ನೇ ನಿಮಿಷ), ಎಲ್ಸನ್‌ ಹೂಯ್‌ (18ನೇ ನಿಮಿಷ) ಹಾಗೂ ಲಿಯಾಂಡ್ರೊ ಬಾಕುನಾ (33ನೇ ನಿಮಿಷ) ಗೋಲು ಹೊಡೆದರು. ಭಾರತ ತನ್ನ ಮುಂದಿನ ಪಂದ್ಯದಲ್ಲಿ, ಥಾಯ್ಲೆಂಡ್‌ ಹಾಗೂ ವಿಯೆಟ್ನಾಂ ಮಧ್ಯೆ ನಡೆಯುವ ಪಂದ್ಯದಲ್ಲಿ ಸೋತ ತಂಡವನ್ನು ಎದುರಿಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.