ಆಸ್ಟ್ರೇಲಿಯನ್ ಓಪನ್: ಜೊಕೊವಿಚ್‌ ಶುಭಾರಂಭ ಮೆಲ್ಬರ್ನ್, ಆಸ್ಟ್ರೇಲಿಯಾ: ಸರ್ಬಿಯಾದ ನೊವಾಕ್ ಜೊಕೊವಿಚ್ ಅವರು ಭಾನುವಾರ ಶುರುವಾದ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಜಯದ ಆರಂಭ ಮಾಡಿದರು. ಇಲ್ಲಿ ನಡೆದ ಪಂದ್ಯದಲ್ಲಿ ಜೊಕೊ ವಿಚ್ 6-2, 6-7 (5), 6-3, 6-4 ಸೆಟ್‌ಗಳಿಂದ ಕ್ರೊವೇಷ್ಯಾದ ಡಿನೋ ಪ್ರಿಜ್ಮಿಕ್ ಅವರನ್ನು ಮಣಿಸಿದರು. ಡಿನೊ ಅವರಿಗೆ ಇದು ಚೊಚ್ಚಲ ಗ್ರ್ಯಾನ್‌ಸ್ಲಾಮ್ ಪಂದ್ಯವಾಗಿತ್ತು. 18 ವರ್ಷದ ಡಿನೋ ಅವರನ್ನು ಸೋಲಿಸಲು ಜೊಕೊವಿಚ್ 4 ತಾಸು ಸೆಣಸಾಡಿದರು. ಈ ಪಂದ್ಯದ ಮೊದಲ ಸೆಟ್ ನಿರೀಕ್ಷೆಯಂತೆ ನಡೆಯಿತು. ಜೊಕೊವಿಚ್ ಸುಲಭವಾಗಿ ಗೆದ್ದರು. ಆದರೆ ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಿದ ಡಿನೋ ಗೆದ್ದರು. ಬಳಿಕ ಎರಡು ಸೆಟ್‌ಗಳನ್ನು ಗೆಲ್ಲುವುದರೊಂದಿಗೆ ಜೊಕೊವಿಚ್ ಪ್ರಾಬ್ಯಲ್ಯ ಮುಂದುವರಿಯಿತು. ದಿನದ ಇನ್ನುಳಿದ ಪಂದ್ಯಗಳಲ್ಲಿ ಐದನೇ ಶ್ರೇಯಾಂಕದ ಆಂಡ್ರೆ ರುಬ್ಲೆವ್ 7-5, 6-4, 3-6, 4-6, 7-6 (6) ಸೆಟ್ ಗಳಿಂದ ಥಿಯಾಗೊ ಸೆಬೊತ್ ವೈಲ್ಡ್ ಅವರನ್ನು ಸೋಲಿಸಿದರು. ಪಾದದ ಗಾಯದಿಂದ ಚೇತರಿಸಿಕೊಂಡ 12ನೇ ಶ್ರೇಯಾಂಕದ ಟೇಲರ್ ಫ್ರಿಟ್ಜ್ ಅವರು ಫಕುಂಡೊ ಡಯಾಜ್ ಅಕೋಸ್ಟಾ ಅವರನ್ನು 4-6, 6-3, 3-6, 6-2, 6-4 ಸೆಟ್ ಗಳಿಂದ ಸೋಲಿಸಿದರು. ಮಹಿಳೆಯರ ವಿಭಾಗದಲ್ಲಿ ಹಾಲಿ ಚಾಂಪಿಯನ್, ಎರಡನೇ ಶ್ರೇಯಾಂಕದ ಆರ್ನಾ ಸಬಲೆಂಕಾ ತಮ್ಮ ಎದುರಾಳಿ ಜರ್ಮನಿಯ ಎಲಾ ಸೀಡೆಲ್ ಅವ ರನ್ನು 6-0, 6-1ರ ಸೆಟ್‌ಗಳಿಂದ ಸೋಲಿಸಿ ದರು. ಮಾರಿಯಾ ಸಕರಿ ಅವರು ಜಪಾನ್ ನ ನಾವೊ ಹಿಬಿನೊ ಅವರನ್ನು 6-4, 6-1 ಸೆಟ್ ಗಳಿಂದ ಸೋಲಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.