ಟೆನಿಸ್‌: ಪ್ರಧಾನ ಸುತ್ತಿಗೆ ವೈದೇಹಿ ಬೆಂಗಳೂರು: ಭಾರತದ ವೈದೇಹಿ ಚೌಧರಿ ಅವರು ಇಲ್ಲಿನ ಕೆಎಸ್‌ಎಲ್‌ಟಿಎ ಕ್ರೀಡಾಂಗಣದಲ್ಲಿ ಮಂಗಳವಾರ ಆರಂಭವಾಗಲಿರುವ ಕೆಪಿಬಿ ಟ್ರಸ್ಟ್ ಐಟಿಎಫ್ ಮಹಿಳಾ ಓಪನ್‌ ಟೆನಿಸ್ ಟೂರ್ನಿಯ ಪ್ರಧಾನ ಸುತ್ತು ಪ್ರವೇಶಿಸಿದರು. 23 ವರ್ಷದ ವೈದೇಹಿ ಸೋಮವಾರ ನಡೆದ ಮಹಿಳಾ ಸಿಂಗಲ್ಸ್‌ನ ಕ್ವಾಲಿಫೈಯರ್‌ನ ಅಂತಿಮ ಸುತ್ತಿನಲ್ಲಿ 6-2, 6-2ರಿಂದ ಥಾಯ್ಲೆಂಡ್‌ನ ಥಾಸಪೋರ್ನ್ ನಕ್ಲೊ ಅವರನ್ನು ಮಣಿಸಿ ಮುನ್ನಡೆದರು. ಆದರೆ, ಭಾರತದ ಶ್ರೀವಲ್ಲಿ ರಶ್ಮಿಕಾ ಭಮಿಡಪಾಟಿ ಮತ್ತು ಝೀಲ್ ದೇಸಾಯಿ ಅವರು ಮುಖ್ಯಸುತ್ತು ಪ್ರವೇಶಿಸಲು ವಿಫಲವಾದರು. ಕ್ವಾಲಿಫೈಯರ್‌ನಿಂದ ಎಂಟು ಮಂದಿ ಮುಖ್ಯಸುತ್ತಿಗೆ ಅರ್ಹತೆ ಪಡೆದಿದ್ದು, ಅದರಲ್ಲಿ ವೈದೇಹಿ ಮಾತ್ರ ಭಾರತದ ಆಟಗಾರ್ತಿಯಾಗಿದ್ದಾರೆ. ಈ ಮಧ್ಯೆ ಭಾರತದ ಅಂಕಿತಾ ರೈನಾ ಅವರು 8ನೇ ಶ್ರೇಯಾಂಕದೊಂದಿಗೆ ಪ್ರಧಾನ ಸುತ್ತಿನಲ್ಲಿ ಕಣಕ್ಕೆ ಇಳಿಯಲಿದ್ದಾರೆ. ಉಳಿದಂತೆ ಭಾರತದ ಸೋಹಾ ಸಾದಿಕ್, ಋತುಜಾ ಭೋಸ್ಲೆ, ಸಹಜಾ ಯಮಲಪಲ್ಲಿ ಮತ್ತು ಸುಹಿತಾ ಮರೂರಿ ವೈಲ್ಡ್‌ಕಾರ್ಡ್‌ ಮೂಲಕ ಪ್ರವೇಶ ಪಡೆದಿದ್ದಾರೆ. ಲಾಟ್ವಿಯಾದ ದರ್ಜಾ ಸೆಮೆನಿಸ್ಟಾಜಾ ಅವರಿಗೆ ಅಗ್ರ ಶ್ರೇಯಾಂಕ ದೊರಕಿದ್ದು, ಫ್ರಾನ್ಸ್‌ನ ಕ್ಲೋಯ್ ಪ್ಯಾಕ್ವೆಟ್ 2ನೇ ಶ್ರೇಯಾಂಕ ಪಡೆದಿದ್ದಾರೆ. ರಷ್ಯಾದ ಎಕಟೆರಿನಾ ಮಕರೋವಾ ಮತ್ತು ಮೊಯುಕಾ ಉಚಿಜಿಮಾ ಕ್ರಮವಾಗಿ ಮೂರು ಮತ್ತು ನಾಲ್ಕನೇ ಶ್ರೇಯಾಂಕವನ್ನು ಗಳಿಸಿದ್ದಾರೆ. ಅರ್ಹತಾ ಪಂದ್ಯಗಳ ಫಲಿತಾಂಶ: ಜಪಾನ್‌ನ ಮೇ ಯಮಗುಚಿ 1-6, 6-2, 6-2ರಿಂದ ಲಾಕ್ವಿಯಾದ ಡಯಾನಾ ಮಾರ್ಸಿಂಕೆವಿಕಾ ವಿರುದ್ಧ; ಆಸ್ಟ್ರೇಲಿಯಾದ ಟೀನಾ ನಡಿನ್ ಸ್ಮಿತ್ 6-2, 7-5ರಿಂದ ಭಾರತದ ಶ್ರೀವಲ್ಲಿ ರಶ್ಮಿಕಾ ಭಮಿಡಪಾಟಿ ವಿರುದ್ಧ; ಜಪಾನ್‌ನ ನಹೋ ಸಾಟೊ 6-2, 6-2ರಿಂದ ಥಾಯ್ಲೆಂಡ್‌ನ ಪುನ್ನಿನ್ ಕೊವಾಪಿಟುಕ್ಟೆಡ್ ವಿರುದ್ಧ; ಜರ್ಮನಿಯ ಲೀನಾ ಪಪಡಕಿಸ್ 6-4, 6-1ರಿಂದ ಜಪಾನ್‌ನ ರಿನಾ ಸೈಗೊ ವಿರುದ್ಧ; ಜಪಾನ್‌ನ ಎರಿ ಶಿಮಿಜು 6-4, 6-0ಯಿಂದ ಸ್ವದೇಶದ ಮನ ಕವಾಮುರಾ ವಿರುದ್ಧ; ಭಾರತದ ವೈದೇಹಿ ಚೌಧರಿ 6-2, 6-2ರಿಂದ ಥಾಯ್ಲೆಂಡ್‌ನ ಥಾಸಪೋರ್ನ್ ನಕ್ಲೊ ವಿರುದ್ಧ; ಜೆಕ್‌ ಗಣರಾಜ್ಯದ ಅನ್ನಾ ಸಿಸ್ಕೋವಾ 6-1, 6-2ರಿಂದ ಝೀಲ್ ದೇಸಾಯಿ ವಿರುದ್ಧ ಗೆಲುವು ದಾಖಲಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.