ಆಸ್ಟ್ರೇಲಿಯಾ ಓಪನ್‌: ಮರ್‍ರೆ ನಿರ್ಗಮನ ಮೆಲ್ಬರ್ನ್: ಅರ್ಜೆಂಟೀನಾದ ಯುವ ಆಟಗಾರ ಥಾಮಸ್ ಮಾರ್ಟಿನ್ ಎಟ್ಚೆವೆರಿ ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲಿ ಬ್ರಿಟನ್‌ನ ಅನುಭವಿ ಆಟಗಾರ ಆ್ಯಂಡಿ ಮರ‍್ರೆ ಅವರಿಗೆ ಸೋಲಿನ ಆಘಾತ ನೀಡಿದರು. ಸೋಮವಾರ ನಡೆದ ಪಂದ್ಯದಲ್ಲಿ 30ನೇ ಶ್ರೇಯಾಂಕದ ಥಾಮಸ್ 6-4, 6-2, 6-2 ರಿಂದ ಐದು ಬಾರಿಯ ಫೈನಲಿಸ್ಟ್ ಆಟಗಾರ ಮರ‍್ರೆಯನ್ನು ಸೋಲಿಸಿದರು. 36 ವರ್ಷದ ಆ್ಯಂಡಿ ಅವರು ಮೊದಲ ಗೇಮ್‌ನಲ್ಲಿ ಪ್ರತಿರೋಧ ತೋರಿದರು. ಆದರೆ, ಎರಡನೇ ಮತ್ತು ಮೂರನೇ ಗೇಮ್‌ನಲ್ಲಿ ಅರ್ಜೆಂಟೀನಾ ಆಟಗಾರ ಸಂಪೂರ್ಣ ಪಾರಮ್ಯ ಮೆರೆದರು. ‘ಆ್ಯಂಡಿಯಂತಹ ದಿಗ್ಗಜ ಆಟಗಾರನೊಂದಿಗೆ ಆಡುವುದು ನನಗೆ ತುಂಬಾ ಸವಾಲಾಗಿತ್ತು. ನನ್ನ ಆದರ್ಶ ವ್ಯಕ್ತಿಗಳಲ್ಲಿ ಅವರೂ ಒಬ್ಬರು. ಅವರ ವಿರುದ್ಧ ಜಯ ಸಾಧಿಸಿರುವುದು ಖುಷಿ ತಂದಿದೆ’ ಎಂದು 24 ವರ್ಷ ಥಾಮಸ್‌ ಪ್ರತಿಕ್ರಿಯಿಸಿದರು. ಕಳೆದ ವರ್ಷ ಫ್ರೆಂಚ್ ಓಪನ್ ಟೆನಿಸ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದ ಥಾಮಸ್‌, ಮುಂದಿನ ಸುತ್ತಿನಲ್ಲಿ ಫ್ರಾನ್ಸ್‌ನ ಗೇಲ್ ಮೊನ್ಫಿಲ್ಸ್ ಅವರನ್ನು ಎದುರಿಸಲಿದ್ದಾರೆ. ಅಲ್ಲಿ ಗೆದ್ದರೆ, ಮೂರನೇ ಸುತ್ತಿನಲ್ಲಿ ಸರ್ಬಿಯಾದ ಅಗ್ರಶ್ರೇಯಾಂಕದ ನೊವಾಕ್ ಜೊಕೊವಿಚ್‌ ಅವರು ಎದುರಾಗುವ ಸಾಧ್ಯತೆ ಇದೆ. 2023ರಲ್ಲೂ ನಿರಾಶಾದಾಯಕ ಪ್ರದರ್ಶನ ನೀಡಿದ್ದ ಆ್ಯಂಡಿ, ಲಯ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅವರು ಕಳೆದ ನಾಲ್ಕು ಟೂರ್ನಿಗಳಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿದ್ದಾರೆ. 2012ರಲ್ಲಿ ಅಮೆರಿಕ ಓಪನ್‌, 2013 ಮತ್ತು 2016ರಲ್ಲಿ ವಿಂಬಲ್ಡನ್ ಗೆದ್ದಿದ್ದರು. ಆಸ್ಟ್ರೇಲಿಯಾ ಓಪನ್‌ನಲ್ಲಿ ಐದು ಬಾರಿ ಫೈನಲ್‌ ಪ್ರವೇಶಿಸಿದ್ದರು. ಒಸಾಕಾಗೆ ಆಘಾತ: ಎರಡು ಬಾರಿ ಆಸ್ಟ್ರೇಲಿಯಾ ಓಪನ್‌ ಚಾಂಪಿಯನ್‌ ನವೊಮಿ ಒಸಾಕಾ ಅವರು ಮಹಿಳೆಯರ ಸಿಂಗಲ್ಸ್‌ನ ಆರಂಭಿಕ ಸುತ್ತಿನಲ್ಲಿ ಆಘಾತ ಅನುಭವಿಸಿದರು. ‌ನವೊಮಿ ಅವರು 4–6, 6–7 (2-7) ರಿಂದ ಫ್ರಾನ್ಸ್‌ನ ಕ್ಯಾರೊಲಿನ್ ಗಾರ್ಸಿಯಾ ಅವರಿಗೆ ಮಣಿದರು. ಅವರು 2019 ಮತ್ತು 2021ರಲ್ಲಿ ಇಲ್ಲಿ ಪ್ರಶಸ್ತಿ ಗೆದ್ದಿದ್ದರು. ಮತ್ತೊಂದೆಡೆ 2023ರ ವಿಂಬಲ್ಡನ್‌ ಪ್ರಶಸ್ತಿ ವಿಜೇತೆ ಜೆಕ್‌ ಗಣರಾಜ್ಯದ ಮಾರ್ಕೆಟಾ ವೊಂಡ್ರೊಸೊವಾ ಅವರೂ ಮೊದಲ ಸುತ್ತಿನಲ್ಲಿ ನಿರ್ಗಮಿಸಿದರು. ಅವರು ಉಕ್ರೇನ್‌ನ ಡಯಾನಾ ಯಾಸ್ಟ್ರೆಮ್ಸ್‌ಕಾ ವಿರುದ್ಧ 6-1, 6-2ರಿಂದ ಪರಾಭವಗೊಂಡರು. ಪುರುಷರ ಸಿಂಗಲ್ಸ್‌ನಲ್ಲಿ ಮೂರನೇ ಶ್ರೇಯಾಂಕದ ಡೇನಿಯಲ್ ಮೆಡ್ವೆಡೆವ್ ಅವರು ಎರಡನೇ ಸುತ್ತು ಪ್ರವೇಶಿಸಿದರು. ಅವರು 5-7, 6-2, 6-4, 1-0ರಿಂದ ಫ್ರಾನ್ಸಿನ ಟೆರೆನ್ಸ್ ಅಟ್ಮಾನೆ ಅವರನ್ನು ಮಣಿಸಿದರು. 2023ರ ಅಮೆರಿಕ ಓಪನ್ ವಿಜೇತೆ ಕೊಕೊ ಗಾಫ್ ಅವರು ಮಹಿಳೆಯರ ಸಿಂಗಲ್ಸ್‌ನ ಪಂದ್ಯದಲ್ಲಿ 6-3, 6-0ಯಿಂದ ಅನ್ನಾ ಕರೋಲಿನಾ ಅವರನ್ನು ಸೋಲಿಸಿ ಮುನ್ನಡೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.