ಆಸ್ಟ್ರೇಲಿಯಾ ಓಪನ್‌: ನಗಾಲ್‌ಗೆ ದಾಖಲೆ ಜಯ ಮೆಲ್ಬರ್ನ್‌: ಚುರುಕಿನ ಆಟವಾಡಿದ ಭಾರತದ ಸುಮಿತ್‌ ನಗಾಲ್‌ ಅವರು ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್‌ನ ಆರಂಭಿಕ ಸುತ್ತಿನಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದರು. ವಿಶ್ವದ 137ನೇ ಕ್ರಮಾಂಕದ ನಗಾಲ್‌ ಅವರು, 27ನೇ ಕ್ರಮಾಂಕದ ಅಲೆಕ್ಸಾಂಡರ್ ಬುಬ್ಲಿಕ್ ಅವರಿಗೆ ಆಘಾತ ನೀಡಿ, ಎರಡನೇ ಸುತ್ತಿಗೆ ಲಗ್ಗೆ ಹಾಕಿದರು. ಮಂಗಳವಾರ ನಡೆದ ಪಂದ್ಯದಲ್ಲಿ 26 ವರ್ಷದ ನಗಾಲ್‌ ಅವರು 6-4, 6-2, 7-6(5)ರಿಂದ ಕಜಕಸ್ತಾನದ 31ನೇ ಶ್ರೇಯಾಂಕದ ಆಟಗಾರನನ್ನು ಹಿಮ್ಮೆಟ್ಟಿಸಿದರು. ಇದು ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ 35 ವರ್ಷಗಳ ಬಳಿಕ ಶ್ರೇಯಾಂಕಿತ ಆಟಗಾರನ ವಿರುದ್ಧ ಭಾರತದ ಆಟಗಾರರೊಬ್ಬರಿಗೆ ದೊರೆತ ಮೊದಲ ಜಯವಾಗಿದೆ. 1989ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಭಾರತದ ರಮೇಶ್‌ ಕೃಷ್ಣನ್‌ ಅವರು ಅಂದಿನ ವಿಶ್ವದ ನಂಬರ್‌ ಒನ್ ಮತ್ತು ಚಾಂಪಿಯನ್‌ ಆಗಿದ್ದ ಸ್ವೀಡನ್‌ನ ಮ್ಯಾಟ್ಸ್ ವಿಲಾಂಡರ್ ಅವರನ್ನು ಸೋಲಿಸಿ, ದಾಖಲೆ ನಿರ್ಮಿಸಿದ್ದರು. ಅದಾದ ಬಳಿಕ ಭಾರತದ ಆಟಗಾರರಿಗೆ ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ ಶ್ರೇಯಾಂಕಿತ ಆಟಗಾರರ ವಿರುದ್ಧ ಗೆಲುವು ದಕ್ಕಿರಲಿಲ್ಲ. 2020ರ ಅಮೆರಿಕ ಓಪನ್‌ನಲ್ಲಿ ಎರಡನೇ ಸುತ್ತು ಪ್ರವೇಶಿಸಿದ್ದ ನಗಾಲ್‌, ಎರಡನೇ ಶ್ರೇಯಾಂಕ ಹೊಂದಿದ್ದ ಡಾಮಿನಿಕ್ ಥೀಮ್ (ಆಸ್ಟ್ರಿಯಾ) ವಿರುದ್ಧ ಸೋತು ನಿರ್ಗಮಿಸಿದ್ದರು. 2021ರ ಆಸ್ಟ್ರೇಲಿಯನ್ ಓಪನ್‌ನ ಆರಂಭಿಕ ಸುತ್ತಿನಲ್ಲಿ ರಿಕಾರ್ಡಾಸ್ ಬೆರಾಂಕಿಸ್ ವಿರುದ್ಧ ಪರಾಭವಗೊಂಡಿದ್ದ ಭಾರತದ ಆಟಗಾರ, ಇಲ್ಲಿ ಮೊದಲ ಬಾರಿಗೆ ಎರಡನೇ ಸುತ್ತು ಪ್ರವೇಶಿಸಿದ್ದಾರೆ. ಎರಡು ಗಂಟೆ 38 ನಿಮಿಷಗಳ ಹೋರಾಟದಲ್ಲಿ ನಗಾಲ್‌ ನೇರ ಸೆಟ್‌ಗಳ ಮೂಲಕ ಗೆಲುವು ಸಾಧಿಸಿದರು. ಎರಡನೇ ಸುತ್ತಿನಲ್ಲಿ ವಿಶ್ವದ 140ನೇ ಕ್ರಮಾಂಕದ ಚೀನಾದ ಜುಂಚೆಂಗ್ ಶಾಂಗ್ ಅವರನ್ನು ಎದುರಿಸಲಿದ್ದಾರೆ. ಅರ್ಹತಾ ಸುತ್ತಿನಲ್ಲಿ ಮೂರು ಪಂದ್ಯಗಳನ್ನು ಗೆದ್ದು ಸುಮಾರು ₹ 35 ಲಕ್ಷ ಬಹುಮಾನ ಗಳಿಸಿದ್ದ ನಗಾಲ್‌, ಮುಖ್ಯಸುತ್ತಿನ ಮೊದಲ ಪಂದ್ಯದಲ್ಲಿ ಜಯಗಳಿಸಿ ಮತ್ತೆ ₹65 ಲಕ್ಷ ಖಚಿತಪಡಿಸಿಕೊಂಡಿದ್ದಾರೆ. 2023ರ ಋತುವಿನ ಅಂತ್ಯದಲ್ಲಿ ಹಣಕಾಸಿನ ಬವಣೆಯನ್ನು ತೋಡಿಕೊಂಡಿದ್ದ ನಗಾಲ್‌, ತಮ್ಮ ಬಳಿ ಲಕ್ಷ ರೂಪಾಯಿ ಕೂಡ ಇಲ್ಲವೆಂದು ಹೇಳಿದ್ದರು. ನಂತರ ಅವರಿಗೆ ನೆರವು ಹರಿದುಬಂದಿತ್ತು. ಬುಬ್ಲಿಕ್ ವಿರುದ್ಧದ ಪಂದ್ಯದಲ್ಲಿ ನಗಾಲ್‌ ಉತ್ತಮ ಆರಂಭ ಪಡೆದರು. ಮೊದಲ ಎರಡು ಸೆಟ್‌ಗಳಲ್ಲಿ ನಿಖರ ಆಟದ ಮೂಲಕ ಹಿಡಿತ ಸಾಧಿಸಿ, ಎದುರಾಳಿಗೆ ಮುನ್ನಡೆ ಸಾಧಿಸಲು ಅವಕಾಶ ನೀಡಲಿಲ್ಲ. ಆದರೆ, ಮೂರನೇ ಸೆಟ್‌ನಲ್ಲಿ ಪುಟಿದೆದ್ದ ಕಜಕಸ್ತಾನದ ಆಟಗಾರ ಪ್ರತಿರೋಧ ತೋರಿದರು. ಟೈ ಬ್ರೇಕರ್‌ನಲ್ಲಿ ನಗಾಲ್ ಗೆದ್ದರು. ಬಾಂಬ್ರಿ- ಹಾಸ್ ಜೋಡಿಗೆ ಸೋಲು: ಪುರುಷರ ಡಬಲ್ಸ್‌ನಲ್ಲಿ ಭಾರತದ ಯೂಕಿ ಬಾಂಬ್ರಿ ಮತ್ತು ಡಚ್‌ ಆಟಗಾರ ರಾಬಿನ್ ಹಾಸ್ ಜೋಡಿ ಮೊದಲ ಸುತ್ತಿನಲ್ಲಿ ನಿರಾಸೆ ಅನುಭವಿಸಿತು. ಈ ಜೋಡಿಯು 6-1, 6-7 (8-10), 6-7 (7-10)ರಿಂದ ಕೊಲಂಬಿಯಾದ ನಿಕೋಲಸ್ ಬ್ಯಾರಿಯೆಂಟೋಸ್ ಮತ್ತು ಬ್ರೆಜಿಲ್‌ನ ರಾಫೆಲ್ ಮಾಟೋಸ್ ಅವರಿಗೆ ಮಣಿಯಿತು. ಅಲ್ಕರಾಜ್‌, ಇಗಾ ಶ್ವಾಂಟೆಕ್‌ಗೆ ಮುನ್ನಡೆ ಸ್ಪೇನ್‌ನ ಕಾರ್ಲೊಸ್‌ ಅಲ್ಕರಾಜ್‌ ಮತ್ತು ಪೋಲೆಂಡ್‌ನ ಇಗಾ ಶ್ವಾಂಟೆಕ್‌ ಅವರು ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್‌ನಲ್ಲಿ ಎರಡನೇ ಸುತ್ತಿಗೆ ಮುನ್ನಡೆದರು. ವಿಶ್ವದ ಎರಡನೇ ಕ್ರಮಾಂಕದ ಅಲ್ಕರಾಜ್‌ ಅವರು ಪ್ರಸಕ್ತ ಋತುವಿನ ಮೊದಲ ಪಂದ್ಯದಲ್ಲಿ 7-6 (7–5), 6-1, 6-2 ರಿಂದ ಫ್ರಾನ್ಸ್‌ನ ಅನುಭವಿ ಆಟಗಾರ ರಿಚರ್ಡ್ ಗ್ಯಾಸ್ಕೆಟ್ ಅವರನ್ನು ಸೋಲಿಸಿದರು. ಮಹಿಳೆಯರ ಸಿಂಗಲ್ಸ್‌ನಲ್ಲಿ ವಿಶ್ವದ ಅಗ್ರಕ್ರಮಾಂಕದ ಇಗಾ ಅವರು ಆರಂಭಿಕ ಸುತ್ತಿನಲ್ಲಿ 7-6 (7–2), 6-2ರಿಂದ ಆಸ್ಟ್ರೇಲಿಯನ್ ಓಪನ್ ಮಾಜಿ ಚಾಂಪಿಯನ್ ಸೋಫಿಯಾ ಕೆನಿನ್ ವಿರುದ್ಧ ಜಯ ಸಾಧಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.