ಐಟಿಎಫ್ ದಾವಣಗೆರೆ ಓಪನ್ ಟೆನಿಸ್: ಸಿಂಗಲ್ಸ್‌ನಲ್ಲಿ ಎಡವಿದ ಶ್ರೇಯಾಂಕಿತರು ದಾವಣಗೆರೆ: ಐಟಿಎಫ್ ದಾವಣಗೆರೆ ಓಪನ್ ಟೆನಿಸ್ ಟೂರ್ನಿಯಲ್ಲಿ ಗುರುವಾರ ನಡೆದ ಸಿಂಗಲ್ಸ್‌ ವಿಭಾಗದ ಪ್ರೀ ಕ್ವಾರ್ಟರ್ ‌ಫೈನಲ್ ಪಂದ್ಯಗಳಲ್ಲಿ ಶ್ರೇಯಾಂಕ ಆಟಗಾರರು ಸೋಲು ಕಂಡರು. ದಿಗ್ವಿಜಯ್ ಪ್ರತಾಪ್ ಸಿಂಗ್, ಎಸ್.ಡಿ.ಪ್ರಜ್ವಲ್ ದೇವ್, ರಿಷಭ್ ಅಗರ ವಾಲ್‌ ಹಾಗೂ ಫ್ರಾನ್ಸ್‌ನ ಫ್ಲೋರೆಂಟ್ ಬ್ಯಾಕ್ಸ್ ನಿರೀಕ್ಷೆ ಹುಸಿಗೊಳಿಸಿದರು. ಟೂರ್ನಿಯಲ್ಲಿ ಆರನೇ ಶ್ರೇಯಾಂಕ ಹೊಂದಿದ್ದ ಕನ್ನಡಿಗ ಪ್ರಜ್ವಲ್‌ ದೇವ್‌ 1–6, 4–6ರಿಂದ ಕರಣ್‌ ಸಿಂಗ್‌ ಅವರಿಗೆ ಶರಣಾದರು. ಮೊದಲ ಸೆಟ್‌ನ ಶುರುವಿನಲ್ಲೇ ಸರ್ವ್‌ ಕಳೆದುಕೊಂಡ ಪ್ರಜ್ವಲ್‌ 0–3 ಹಿನ್ನಡೆ ಅನುಭವಿಸಿದರು. ನಂತರವೂ ಹಲವು ತಪ್ಪುಗಳನ್ನು ಮಾಡಿ 30 ನಿಮಿಷಗಳಲ್ಲೇ ಸೆಟ್‌ ಕೈಚೆಲ್ಲಿದರು. ಎರಡನೇ ಸೆಟ್‌ನ ಮೂರು ಹಾಗೂ ಐದನೇ ಗೇಮ್‌ಗಳಲ್ಲೂ ಸರ್ವ್‌ ಕಾಪಾಡಿಕೊಳ್ಳಲಾಗದೆ 2–4ರಿಂದ ಹಿನ್ನಡೆ ಕಂಡರು. ಎದುರಾಳಿ ಆಟಗಾರನ ಮಿಂಚಿನ ಗತಿಯ ‘ಏಸ್‌’ಗಳು ಹಾಗೂ ‘ಬ್ಯಾಕ್‌ ಹ್ಯಾಂಡ್‌’ ಹೊಡೆತಗಳಿಂದ ತಬ್ಬಿಬ್ಬಾದಂತೆ ಕಂಡ ಅವರು ಸುಲಭವಾಗಿ ಸೋಲೊಪ್ಪಿಕೊಂಡರು. ಕ್ರೀಡಾಂಗಣದ ಮೂರನೇ ಅಂಗಳದಲ್ಲಿ ನಡೆದ ‘ಮ್ಯಾರಥಾನ್‌’ ಹೋರಾಟದಲ್ಲಿ (3 ಗಂಟೆ 13 ನಿಮಿಷ) ಭಾರತದ ಮಾಧ್ವಿನ್‌ ಕಾಮತ್‌ 7–6, 6–7, 6–4ರಿಂದ ನಾಲ್ಕನೇ ಶ್ರೇಯಾಂಕದ ಫ್ಲೋರೆಂಟ್‌ ಬ್ಯಾಕ್ಸ್‌ ಅವರಿಗೆ ಸೋಲಿನ ರುಚಿ ತೋರಿಸಿದರು. 21 ವರ್ಷದ ಮಾಧ್ವಿನ್‌, ‘ಟೈ ಬ್ರೇಕರ್‌’ನಲ್ಲಿ ಮೊದಲ ಸೆಟ್‌ ಗೆದ್ದರು. ಎರಡನೇ ಸೆಟ್‌ ಕೂಡಾ ‘ಟೈ ಬ್ರೇಕರ್‌’ಗೆ ಸಾಗಿದಾಗ ನೆಟ್‌ನ ಸಮೀಪ ಚೆಂಡನ್ನು ಡ್ರಾಪ್‌ ಮಾಡುವ ತಂತ್ರ ಅನುಸರಿಸಿದ ಫ್ಲೋರೆಂಟ್‌ ಜಯಿಸುವಲ್ಲಿ ಯಶಸ್ವಿಯಾದರು. ಮೂರನೇ ಸೆಟ್‌ನಲ್ಲಿ ಕೆಚ್ಚೆದೆಯ ಆಟ ಆಡಿದ ಮಾಧ್ವಿನ್‌, ಗೆಲುವಿನ ಸಿಹಿ ಸವಿದರು. ಮೂಲತಃ ಕನ್ನಡಿಗರಾದ ಮಾಧ್ವಿನ್ ಗುಜರಾತ್‌ನಲ್ಲಿ ನೆಲೆಸಿದ್ದಾರೆ. ಮೂರನೇ ಶ್ರೇಯಾಂಕಿತ ದಿಗ್ವಿಜಯ್‌ 6–7, 6–7ರಿಂದ ಮನೀಷ್‌ ಸುರೇಶ್‌ಕುಮಾರ್‌ ಎದುರು ಪರಾಭವಗೊಂಡರು. ಕಾಲಿಗೆ ಗಾಯ ವಾಗಿದ್ದರೂ ಕಣಕ್ಕಿಳಿದಿದ್ದ ದಿಗ್ವಿಜಯ್‌, ಸೋತರೂ ಎಲ್ಲರ ಮನಗೆದ್ದರು. 7ನೇ ಶ್ರೇಯಾಂಕದ ರಿಷಭ್‌ ಅಗರವಾಲ್‌ 0–6, 3–6ರಿಂದ ರಾಮಕುಮಾರ್‌ ರಾಮನಾಥನ್‌ ಎದುರು ಮಣಿದರು. ನಿಕಿ ಪೂಣಚ್ಚ 7–6, 7–6ರಿಂದ ವಿಷ್ಣುವರ್ಧನ್‌ ಎದುರು, ಅಮೆರಿಕದ ನಿಕ್‌ ಚಾಪೆಲ್‌ 6–4, 6–4ರಿಂದ ದೇವ್‌ ಜಾವಿಯಾ ಎದುರು, ರಷ್ಯಾದ ಬೊಗ್ಡಾನ್‌ ಬೊಬ್ರೊವ್‌ 6–4, 7–6ರಿಂದ ಮಲೇಷ್ಯಾದ ಮಿತ್ಸುಕಿ ವೀ ಕಾಂಗ್‌ ಲಿಯೊಂಗ್‌ ಎದುರು, ಸಿದ್ದಾರ್ಥ್‌ ರಾವತ್‌ 6–2, 6–3ರಿಂದ ಆದಿಲ್‌ ಕಲ್ಯಾಣ್‌ಪುರ್‌ ಎದುರು ಗೆದ್ದು ಕ್ವಾರ್ಟರ್‌ ಫೈನಲ್‌ಗೆ ಕಾಲಿಟ್ಟರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.