ಎಂಟರ ಘಟ್ಟಕ್ಕೆ ಬೋಪಣ್ಣ– ಎಬ್ಡೆನ್‌ ಮಯಾಮಿ ಗಾರ್ಡನ್ಸ್ (ಅಮೆರಿಕ): ಭಾರತದ ರೋಹನ್ ಬೋಪಣ್ಣ ಮತ್ತು ಅವರ ಆಸ್ಟ್ರೇಲಿಯನ್ ಜೊತೆಗಾರ ಮ್ಯಾಥ್ಯೂ ಎಬ್ಡೆನ್ ಅವರು ಮಯಾಮಿ ಓಪನ್ ಟೆನಿಸ್‌ ಟೂರ್ನಿಯಲ್ಲಿ ಪುರುಷರ ಡಬಲ್ಸ್ ಕ್ವಾರ್ಟರ್‌ಫೈನಲ್ ತಲುಪಿದರು. ಅಗ್ರ ಶ್ರೇಯಾಂಕದ ಬೋಪಣ್ಣ– ಎಬ್ಡೆನ್ ಜೋಡಿ ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ 7–5, 7–6 (3) ರಿಂದ ಹ್ಯೂಗೊ ನಿಸ್ ಮತ್ತು ಯಾನ್ ಝಿಲಿನ್‌ಸ್ಕಿ ಅವರನ್ನು ಒಂದು ಗಂಟೆ 39 ನಿಮಿಷಗಳ ಹೋರಾಟದಲ್ಲಿ ಸೋಲಿಸಿದರು. ಆಸ್ಟ್ರೇಲಿಯನ್ ಓಪನ್‌ನಲ್ಲಿ ವಿಜೇತರಾಗಿದ್ದ ಈ ಜೋಡಿ ನಾಲ್ಕು ಏಸ್‌ಗಳ ಜೊತೆಗೆ ಶೇ 84 ಮೊದಲ ಸರ್ವ್‌ನಲ್ಲಿ ಯಶಸ್ಸು ಕಂಡಿತು. ಭಾರತ –ಆಸ್ಟ್ರೇಲಿಯನ್ ಆಟಗಾರರ ಜೋಡಿ ಮುಂದಿನ ಸುತ್ತಿನಲ್ಲಿ ಆಸ್ಟ್ರೇಲಿಯಾದ ಜಾನ್‌ ಪ್ಯಾಟ್ರಿಕ್ ಸ್ಮಿತ್– ನೆದರ್ಲೆಂರ್ಡ್ಸ್‌ನ ಸೆಮ್‌ ವೆರ್ಬ್ರೀಕ್ ಜೋಡಿಯನ್ನು ಎದುರಿಸಲಿದೆ. ಶ್ವಾಂಟೆಕ್‌ ನಿರ್ಗಮನ: ಅಗ್ರ ಶ್ರೇಯಾಂಕದ ಇಗಾ ಶ್ವಾಂಟೆಕ್ ಮತ್ತು ಅಮೆರಿಕ ಓಪನ್ ಚಾಂಪಿಯನ್ ಕೊಕೊ ಗಾಫ್‌ ಅವರು ಮಹಿಳೆಯರ ಸಿಂಗಲ್ಸ್‌ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಹೊರಬಿದ್ದರು. ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಎಕಟೆರಿನಾ ಅವರು ಸೋಲಿಸಿದರು. ರಷ್ಯಾದ ಎಕಟೆರಿನಾ ಅಲೆಕ್ಸಾಂಡ್ರೋವಾ ಅವರು 6–4, 6–2 ರಿಂದ ಶ್ವಾಂಟೆಕ್ ಅವರನ್ನು ನೇರ ಸೆಟ್‌ಗಳಿಂದ ಹಿಮ್ಮೆಟ್ಟಿಸಿರು. ಇದಕ್ಕೆ ಕೆಲವೇ ಗಂಟೆಗಳ ಮೊದಲು ಮೂರನೇ ಶ್ರೇಯಾಂಕದ ಗಾಫ್ ಕೂಡ ನಿರ್ಗಮಿಸಿದ್ದರು. ಎಕಟೆರಿನಾ ಕ್ವಾರ್ಟರ್‌ಫೈನಲ್‌ನಲ್ಲಿ ಜೆಸ್ಸಿಕಾ ಪೆಗುಲಾ ವಿರುದ್ಧ ಆಡಲಿದ್ದಾರೆ. 23ನೇ ಕ್ರಮಾಂಕದ ಕೆರೊಲಿನ್ ಗಾರ್ಸಿಯಾ 6–3, 1–6, 6–2 ರಿಂದ ಅಮೆರಿಕದ ಗಾಫ್ ಮೇಲೆ ಜಯಗಳಿಸಿ ಎಂಟರ ಘಟ್ಟ ತಲುಪಿದರು. ಗಾರ್ಸಿಯಾ ಮೊದಲ ಸುತ್ತಿನಲ್ಲಿ ಜಪಾನ್‌ನ ನವೊಮಿ ಒಸಾಕ ಅವರನ್ನು ಪರಾಭವಗೊಳಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.