ಡೀಗೊ ಕೋಸ್ಟಾ ಮಿಂಚು: ಸ್ಪೇನ್‌ಗೆ ಜಯ ಕಜಾನ್‌, ರಷ್ಯಾ: ಡೀಗೊ ಕೋಸ್ಟಾ ಆಟದಲ್ಲಿ ಅರಳಿದ ಏಕೈಕ ಗೋಲಿನ ನೆರವಿನಿಂದ ಸ್ಪೇನ್‌ನ ತಂಡ 21ನೇ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಮೊದಲ ಜಯದ ಸಿಹಿ ಸವಿದಿದೆ. ಕಜಾನ್‌ ಅರೆನಾದಲ್ಲಿ ಬುಧವಾರ ರಾತ್ರಿ ನಡೆದ ‘ಬಿ’ ಗುಂಪಿನ ಹಣಾಹಣಿಯಲ್ಲಿ ಸರ್ಜಿಯೊ ರಾಮೊಸ್‌ ನೇತೃತ್ವದ ಸ್ಪೇನ್‌ 1–0 ಗೋಲಿನಿಂದ ಇರಾನ್‌ ತಂಡವನ್ನು ಪರಾಭವಗೊಳಿಸಿತು. ಈ ಬಾರಿ ಆಡಿದ ಮೊದಲ ಪಂದ್ಯದಲ್ಲಿ ಪೋರ್ಚುಗಲ್‌ ಎದುರು ಡ್ರಾ ಮಾಡಿಕೊಂಡಿದ್ದ ರಾಮೋಸ್‌ ಬಳಗ, ನಾಕೌಟ್‌ ಕನಸು ಜೀವಂತವಾಗಿಟ್ಟುಕೊಳ್ಳುವ ನಿಟ್ಟಿನಲ್ಲಿ ಇರಾನ್‌ ಎದುರು ಗೆಲ್ಲಲೇಬೇಕಿತ್ತು. ಹೀಗಾಗಿ ಸ್ಪೇನ್‌ ಆಟಗಾರರು ಆರಂಭದಿಂದಲೇ ವೇಗದ ಆಟಕ್ಕೆ ಅಣಿಯಾದರು. ಎಹಸಾನ್‌ ಹಾಜಿ ಸಾಫಿ ಸಾರಥ್ಯದ ಇರಾನ್‌ ಕೂಡ ಪರಿಣಾಮಕಾರಿ ಆಟ ಆಡಿ ಗಮನ ಸೆಳೆಯಿತು. ಸಾಫಿ ಪಡೆಯ ರಕ್ಷಣಾ ವಿಭಾಗದ ಆಟಗಾರರು ಸ್ಪೇನ್‌ ತಂಡದ ಆಟಗಾರರನ್ನು ಆವರಣ ಪ್ರವೇಶಿಸದಂತೆ ನಿಯಂತ್ರಿಸುವಲ್ಲಿ ಸಫಲರಾದರು. ಹೀಗಾಗಿ 45 ನಿಮಿಷಗಳ ಆಟ ಗೋಲು ರಹಿತವಾಗಿತ್ತು. ಹೆಚ್ಚುವರಿಯಾಗಿ ನೀಡಿದ್ದ ಮೂರು ನಿಮಿಷಗಳಲ್ಲೂ ಸಮಬಲದ ಪೈ‍ಪೋಟಿ ಕಂಡುಬಂತು. ದ್ವಿತೀಯಾರ್ಧದಲ್ಲಿ ಸ್ಪೇನ್‌ ತಂಡ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಶುರುವಿನಲ್ಲೇ ತಂಡಕ್ಕೆ ಖಾತೆ ತೆರೆಯುವ ಅವಕಾಶ ಸಿಕ್ಕಿತ್ತು. 100ನೇ ಅಂತರರಾಷ್ಟ್ರೀಯ ಪಂದ್ಯ ಆಡಿದ ಗೆರಾರ್ಡ್‌ ಪೀಕೆ, ಎದುರಾಳಿ ಆವರಣ ಬಲತುದಿಯಿಂದ ಒದ್ದು ಕಳುಹಿಸಿದ ಚೆಂಡನ್ನು ಸರ್ಜಿಯೊ ಬುಸಕ್ವೆಟ್ಸ್‌ ಗುರಿ ಮುಟ್ಟಿಸಲು ವಿಫಲರಾದರು. 53ನೇ ನಿಮಿಷದಲ್ಲಿ ಇರಾನ್‌ ತಂಡಕ್ಕೆ ಗೋಲು ಗಳಿಸುವ ಅವಕಾಶ ಲಭ್ಯವಾಗಿತ್ತು. ಕರೀಮ್‌ ಅನ್ಸಾರಿಫಾರ್ದ್‌ ಬಾರಿಸಿದ ಚೆಂಡು ಸ್ಪೇನ್ ತಂಡದ ಗೋಲುಪೆಟ್ಟಿಗೆಯ ಮೇಲಿನಿಂದ ಸಾಗಿ ಅಂಗಳದ ಆಚೆ ಬಿತ್ತು. ಇದರ ಬೆನ್ನಲ್ಲೇ (54) ಮುಂಚೂಣಿ ವಿಭಾಗದ ಆಟಗಾರ ಡೀಗೊ ಕೋಸ್ಟಾ ಸ್ಪೇನ್‌ ಪಾಳಯದಲ್ಲಿ ಸಂಭ್ರಮ ಮೇಳೈಸುವಂತೆ ಮಾಡಿದರು. ಆ್ಯಂಡ್ರೆಸ್‌ ಐನೆಸ್ಟಾ ತಮ್ಮತ್ತ ಒದ್ದು ಕಳುಹಿಸಿದ ಚೆಂಡಿನ ಮೇಲೆ ಚುರುಕಾಗಿ ನಿಯಂತ್ರಣ ಸಾಧಿಸಿದ ಕೋಸ್ಟಾ ಅದನ್ನು ಗುರಿ ಸೇರಿಸಲು ಮುಂದಾದರು. ಆಗ ಅವರತ್ತ ಧಾವಿಸಿದ ಇರಾನ್‌ ತಂಡದ ಡಿಫೆಂಡರ್‌ ರಮಿನ್‌ ರೆಜಾಯೆಯಿನ್‌ ಚೆಂಡನ್ನು ಸಹ ಆಟಗಾರನತ್ತ ತಳ್ಳಲು ಮುಂದಾದರು. ರಮಿನ್‌ ಒದ್ದ ಚೆಂಡು ಕೋಸ್ಟಾ ಅವರ ಬಲಗಾಲಿನಮಂಡಿಗೆ ತಾಗಿ ನೇರವಾಗಿ ಇರಾನ್‌ ತಂಡದ ಗೋಲುಪೆಟ್ಟಿಗೆಯೊಳಗೆ ಬಿತ್ತು. ನಂತರ ಇರಾನ್‌ ತಂಡದಮಿಡ್‌ಫೀಲ್ಡರ್‌ ಸಯೀದ್‌ ಎಜತೋಲಾಹಿ ಚೆಂಡನ್ನು ಗುರಿ ಮುಟ್ಟಿಸಿ ಸಂಭ್ರಮಿಸಿದರು. ಅವರು ಬಾರಿಸಿದ ಚೆಂಡು ‘ಆಫ್‌ ಸೈಡ್‌’ ಆಗಿರುವುದು ಖಚಿತವಾಗಿದ್ದರಿಂದ ಪಂದ್ಯದ ರೆಫರಿ ಗೋಲು ಮಾನ್ಯ ಮಾಡಲಿಲ್ಲ. ನಂತರದ ಅವಧಿಯಲ್ಲಿ ಸ್ಪೇನ್‌ ತಂಡ ಎಚ್ಚರಿಕೆಯ ಆಟ ಆಡಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.