ಮೆಸ್ಸಿ, ರೋಜೊ ಮತ್ತು 90 ನಿಮಿಷಗಳು.. ಸೇಂಟ್ ಪೀಟರ್ಸ್‌ಬರ್ಗ್‌ (ಎಎಫ್‌ಪಿ): ವಿಶ್ವ ಫುಟ್‌ಬಾಲ್‌ನ ದಿಗ್ಗಜ ಅರ್ಜೆಂಟೀನಾದ ಲಯೊನೆಲ್‌ ಮೆಸ್ಸಿ ಅವರ ಬದುಕಿನ ಅತ್ಯಂತ ಉದ್ವೇಗಕಾರಿ 90 ನಿಮಿಷಗಳು ಮಂಗಳವಾರ ರಾತ್ರಿ ಕಳೆದುಹೋದವು. ವಿಶ್ವಕಪ್‌ ಟೂರ್ನಿಯ ಗುಂಪು ಹಂತದ ಅಂತಿಮ ಪಂದ್ಯದಲ್ಲಿ ನೈಜೀರಿಯಾ ಎದುರು ಸೆಣಸಿದ ಸಂದರ್ಭದಲ್ಲಿ ಅನುಭವಿಸಿದ ಆತಂಕ, ಉದ್ವೇಗವನ್ನು ತಮ್ಮ ಬದುಕಿನಲ್ಲಿ ಎಂದಿಗೂ ಅನುಭವಿಸರಲಿಲ್ಲ. ಮುಂದೆಯೂ ಇಂತಹದನ್ನು ನಿರೀಕ್ಷಿಸಲಾರೆ ಎಂದು ಮೆಸ್ಸಿ ಅವರೇ ಹೇಳಿದ್ದಾರೆ. ಸೇಂಟ್ ಪೀಟರ್ಸ್‌ಬರ್ಗ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದ ಮೊದಲಾರ್ಧದಲ್ಲಿ 1–0ಯಿಂದ ಮುನ್ನಡೆ ಸಾಧಿಸಿದ್ದ ಅರ್ಜೆಂಟೀನಾ 51ನೇ ನಿಮಿಷದ ನಂತರ ಆತಂಕಕ್ಕೆ ಒಳಗಾಯಿತು. ಪೆನಾಲ್ಟಿ ಅವಕಾಶದಲ್ಲಿ ವಿಕ್ಟರ್ ಮೋಸೆಸ್ ಗಳಿಸಿದ ಗೋಲಿನ ಮೂಲಕ ನೈಜೀರಿಯಾ ಸಮಬಲ ಸಾಧಿಸಿದ್ದರಿಂದ ಮೆಸ್ಸಿ ಬಳಗದ ಕನಸು ಭಗ್ನವಾಗುವ ಆತಂಕ ಎದುರಾಗಿತ್ತು. ಆದರೆ 86ನೇ ನಿಮಿಷದಲ್ಲಿ ಮಾರ್ಕೋಸ್ ರೋಜೊ ಗಳಿಸಿದ ಗೋಲಿನ ಬಲದಿಂದ ಅರ್ಜೆಂಟೀನಾ ಗೆಲುವು ಸಾಧಿಸಿತು. ಈ ಜಯ ಅರ್ಜೆಂಟೀನಾ ತಂಡವನ್ನು ಪ್ರೀ ಕ್ವಾರ್ಟರ್ ಫೈನಲ್‌ ಘಟ್ಟಕ್ಕೆ ತಲುಪಿಸಿತು. ಮೆಸ್ಸಿ ಮೊದಲ ಗೋಲು: ಮೆಸ್ಸಿ ಅವರು ಮೊದಲ ಎರಡು ಪಂದ್ಯಗಳಲ್ಲಿ ಒಂದೂ ಗೋಲು ಗಳಿಸಿರಲಿಲ್ಲ. ಐಸ್‌ಲ್ಯಾಂಡ್ ಎದುರಿನ ಪಂದ್ಯದಲ್ಲಿ ಪೆನಾಲ್ಟಿ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಲು ಮೆಸ್ಸಿ ವಿಫಲರಾದ ಕಾರಣ ಪಂದ್ಯ ಡ್ರಾ ಆಗಿತ್ತು. ಕ್ರೊವೇಷ್ಯಾ ಎದುರಿನ ಪಂದ್ಯದಲ್ಲಿ ಮೂರು ಗೋಲು ಬಿಟ್ಟುಕೊಟ್ಟ ಅರ್ಜೆಂಟೀನಾಗ ಗೋಲಿನ ಖಾತೆ ತೆರೆಯಲೂ ಆಗಿರಲಿಲ್ಲ. ಮಂಗಳವಾರ ಐದು ಬದಲಾವಣೆಗಳೊಂದಿಗೆ ಕಣಕ್ಕೆ ಇಳಿದ ತಂಡ ಯಶಸ್ಸು ಕಂಡಿತು. ಪಂದ್ಯದ 14ನೇ ನಿಮಿಷದಲ್ಲಿಯೇ ಮೆಸ್ಸಿ ಜಾದೂ ನಡೆಯಿತು. ಈವರ್‌ ಬನೇಗಾ ಅವರು ನೀಡಿದ ಚೆಂಡನ್ನು ತೊಡೆಯಲ್ಲಿ ತಡೆದು ನಿಯಂತ್ರಿಸಿದ ಮೆಸ್ಸಿ, ಎದುರಾಳಿ ರಕ್ಷಣಾ ವಿಭಾಗವನ್ನು ಗಲಿಬಿಲಿಗೊಳಿಸಿ ಚೆಂಡನ್ನು ಗುರಿ ಮುಟ್ಟಿಸಿದರು. ಬಲಗಾಲಿನಿಂದ ಒದ್ದ ಚೆಂಡನ್ನು ತಡೆಯಲು ಗೋಲ್‌ಕೀಪರ್ ನಡೆಸಿದ ಶ್ರಮಕ್ಕೆ ಫಲ ಸಿಗಲಿಲ್ಲ. ಮುನ್ನಡೆಯ ನಂತರ ಪೆನಾಲ್ಟಿ ಅವಕಾಶ ಲಭಿಸಿದರೂ ಅದರಲ್ಲಿ ಗೋಲು ಗಳಿಸಲು ಅರ್ಜೆಂಟೀನಾಗೆ ಸಾಧ್ಯವಾಗಲಿಲ್ಲ. ಈ ನಡುವೆ ಮೋಸೆಸ್ ಗಳಿಸಿದ ಗೋಲು ಅರ್ಜೆಂಟೀನಾಗೆ ಆಘಾತ ನೀಡಿತು. ಆದರೆ ಗ್ಯಾಬ್ರಿಯೆಲ್‌ ಮೆರ್ಕಾಡೊ ಅವರ ಕ್ರಾಸ್‌ನಿಂದ ರೋಜೊ ಗಳಿಸಿದ ಗೋಲು ತಂಡದಲ್ಲಿ ಸಂಭ್ರಮ ಉಕ್ಕಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.