ರೊನಾಲ್ಡೊ ಹೀಗೊಂದು ಕೊಲಾಜ್ ಸ್ಟಾರ್ಟ್: ಹುಡುಗ ಶಿಕ್ಷಕರತ್ತ ಕುರ್ಚಿ ತೂರಿದ. ಅವರಿಗೆ ಎಲ್ಲಿ ತಗುಲಿತೋ ಎಂದು ಗೊತ್ತಾಗುವಷ್ಟರಲ್ಲಿ ಅವನು ಅಲ್ಲಿಂದ ದೌಡು –ಕಟ್. ಸ್ಟಾರ್ಟ್: ಹೃದಯದ ಶಸ್ತ್ರಚಿಕಿತ್ಸೆ ಮಾಡಿಸಿ ಕೊಂಡಾಗ ವಯಸ್ಸಿನ್ನೂ ಹದಿನಾರು. ಕೆಲವೇ ದಿನಗಳ ನಂತರ ಮತ್ತೆ ಅಂಗಳದಲ್ಲಿ ಆಡುತ್ತಿದ್ದ–ಕಟ್. ಸ್ಟಾರ್ಟ್: ಉದ್ಯಾನದಲ್ಲಿ ಮಾಲಿ ಕೆಲಸ ಮಾಡುತ್ತಿದ್ದ ಅಪ್ಪನಿಗೆ ಮಗ ಹಾದಿ ಬಿಟ್ಟಾನೋ ಎಂಬ ಚಿಂತೆ. ನಾಲ್ಕು ಮಕ್ಕಳ ತುಂಬು ಕುಟುಂಬ. ಕೊನೆಯ ಮಗನ ಕುಚೇಷ್ಟೆಗಳಿಗೆ ಹಲವರಿಂದ ಆಕ್ಷೇಪಗಳು ಬಂದಿದ್ದವು. ಯಾರ‍್ಯಾರದೋ ಮನೆಯಲ್ಲಿ ಅಡುಗೆ ಮಾಡಿ ಬರುತ್ತಿದ್ದ ಅಮ್ಮನಿಗೂ ಕೊನೆಯ ಮಗನದ್ದೇ ಚಿಂತೆ-–ಕಟ್. ಸ್ಟಾರ್ಟ್: ಪೋರ್ಚುಗಲ್ ನ ಮ್ಯಾಡೀರಾದ ‘ನ್ಯಾಷನಲ್’ ಕ್ಲಬ್ ಸೇರಿದಾಗ ಇನ್ನೂ ಹತ್ತು ವರ್ಷ. ಹದಿನಾಲ್ಕು ಆಗುವಷ್ಟರಲ್ಲಿ ವೃತ್ತಿಪರ ಫುಟ್‌ಬಾಲ್ ಆಟಗಾರ ಆಗಿಯೇ ತೀರುವ ಸಂಕಲ್ಪ ಮಾಡಿದ. ಮುಂದಿನ ಜಿಗಿತ ‘ಸ್ಪೋರ್ಟಿಂಗ್ ಸಿಪಿ’ ಎಂಬ ಪ್ರತಿಷ್ಠಿತ ಕ್ಲಬ್‌ಗೆ-ಕಟ್. ಸ್ಟಾರ್ಟ್: 2002ರಲ್ಲಿ ‘ಸೀನಿಯರ್’ ಎನಿಸಿಕೊಳ್ಳುವ ಮೊದಲು 16 ವರ್ಷದೊಳಗಿನವರ, 17 ವರ್ಷದೊಳಗಿನವರ, 18 ವರ್ಷದೊಳಗಿನವರ ಹಾಗೂ ಬಿ–ತಂಡಗಳಲ್ಲಿ ಕಾಲು, ತಲೆ ಪಳಗಿಸಿಕೊಂಡ (ತಲೆಯಿಂದ ಚೆಂಡನ್ನು ತಳ್ಳಿ ಗೋಲು ಗಳಿಸುವುದು ಇವನ ಕಲೆ). ಸೀನಿಯರ್ ಆಗಿ ಕಾಲಿಟ್ಟ ಮೊದಲ ಲೀಗ್ ನಲ್ಲೇ ಎರಡು ಗೋಲು–ಕಟ್. ಸ್ಟಾರ್ಟ್: ಯುಇಎಫ್ಎ ಚಾಂಪಿಯನ್ಸ್ ಲೀಗ್‌ನಲ್ಲಿ ಮಾಂಚೆಸ್ಟರ್ ಯುನೈಟೆಡ್ ತಂಡದ ಎದುರು ಆಡಿದಾಗ ವಯಸ್ಸಿನ್ನೂ ಹದಿನೆಂಟು. ಮ್ಯಾಂಚೆಸ್ಟರ್ ಯುನೈಟೆಡ್‌ನ ತರಬೇತುದಾರ ಸರ್ ಅಲೆಕ್ಸ್ ಫರ್ಗ್ಯೂಸನ್ ಕಣ್ಣು ಈ ಚಿನಕುರುಳಿ ಮೇಲೆ ಬಿತ್ತು. ಸೀದಾ ಅವನನ್ನು ಕೊಂಡುಕೊಂಡರು–ಕಟ್. ಸ್ಟಾರ್ಟ್: ಫುಟ್‌ಬಾಲ್‌ನಲ್ಲಿ ಕ್ಲಬ್‌ಗಳು ಹೀಗೆ ಆಟಗಾರರನನ್ನು ಕೊಂಡುಕೊಳ್ಳುವುದು ಮಾಮೂಲು. ‘ಅವನನ್ನು ಕೊಳ್ಳೋಣ’, ‘ಕೊಂಡುಕೊಂಡೆವು’ ಎಂದು ಸಹಜವಾಗಿಯೇ ಹೇಳುತ್ತಾರೆ. ಆತ್ಮಾಭಿಮಾನದ ತತ್ವ ಮಾತನಾಡುವವರಿಗೆ ‘ಖರೀದಿಸುವುದೆಂದರೆ’ ಅಪಥ್ಯ ಇರಬಹುದು. ಆದರೆ, ಫುಟ್‌ಬಾಲ್‌ನಲ್ಲಿ ಅದು ಮುಕ್ತ ಮುಕ್ತ ಮುಕ್ತ–ಕಟ್. ಸ್ಟಾರ್ಟ್: ಮ್ಯಾಂಚೆಸ್ಟರ್ ಕ್ಲಬ್ ಪರವಾಗಿ ಮೊದಲ ಋತುವಿನಲ್ಲಿ ಮೂರು ಗೋಲು, ಎಫ್‌ಎ ಕಪ್ ಫೈನಲ್‌ನಲ್ಲಿ ವಿಜಯದಕ್ಕಿಸಿಕೊಟ್ಟು ಬೀಗಿದ್ದಾಯಿತು. ವರ್ಷದ ನಂತರ ಪೋರ್ಚುಗಲ್ ತಂಡದ ಪರ ಯುರೋಪಿಯನ್ ಚಾಂಪಿಯನ್‌ಷಿಪ್‌ನಲ್ಲಿ ಎರಡು ಗೋಲು ಹೊಡೆಯಲೂ ಅದುವೇ ಪ್ರೇರಣೆ. ಆಗ ತಂಡ ರನ್ನರ್ ಅಪ್ ಆಯಿತು–-ಕಟ್. ಸ್ಟಾರ್ಟ್: ಆರು ವರ್ಷ ಮ್ಯಾಂಚೆಸ್ಟರ್ ಕ್ಲಬ್‌ನಲ್ಲಿ ಗುರು ಫರ್ಗ್ಯೂಸನ್ ಕಲಿಸಿದ ಪಾಠಗಳ ದರ್ಶನ. 196 ಪಂದ್ಯಗಳಲ್ಲಿ 84 ಗೋಲು ಜಮೆ ಮಾಡಿಕೊಂಡಿದ್ದು ಸಾಧನೆ–ಕಟ್. ಸ್ಟಾರ್ಟ್: 2006ರ ವಿಶ್ವಕಪ್‌ನಲ್ಲಿ ಪೋರ್ಚುಗಲ್ ಸೆಮಿಫೈನಲ್ ಪ್ರವೇಶಿಸಿತಲ್ಲ; ಆ ಟೂರ್ನಿಯಲ್ಲಿ ಗಳಿಸಿದ್ದು ಒಂದೇ ಗೋಲು. 2010ರಲ್ಲಿ ಇನ್ನೊಂದು–ಕಟ್. ಸ್ಟಾರ್ಟ್: ಹೋದ ವಿಶ್ವಕಪ್ ಫುಟ್‌ಬಾಲ್‌ನಲ್ಲಿ ಪೋರ್ಚುಗಲ್ ಮೊದಲ ಸುತ್ತಿನಲ್ಲೇ ಹೊರಹೋಯಿತಲ್ಲ; ಆಗಲೂ ಒಂದುಗೋಲು ಗಳಿಸಿದ ಧೀಮಂತ ಇವನು. 2013ರಲ್ಲಿ ಲೆಕ್ಕ ಹಾಕಿದಾಗ ಚಾಂಪಿಯನ್ಸ್ ಲೀಗ್‌ನಲ್ಲಿ 17 ಗೋಲುಗಳನ್ನು ಗಳಿಸಿದ್ದು ಗೊತ್ತಾಯಿತು–ಕಟ್. ಸ್ಟಾರ್ಟ್: 2009ರಲ್ಲಿ ಸ್ಪೇನ್‌ನ ರಿಯಲ್ ಮ್ಯಾಡ್ರಿಡ್ ಕ್ಲಬ್ ಈ ಪ್ರತಿಭಾವಂತನನ್ನು ಕೊಂಡುಕೊಂಡಿದ್ದು ಎಂಟು ಕೋಟಿ ಪೌಂಡ್ (ಈಗಿನ ರೂಪಾಯಿಗಳಲ್ಲಿ 716.6 ಕೋಟಿಗೂ ಹೆಚ್ಚು) ನೀಡಿ. ಅದುವರೆಗೆ ನೀರೆರೆದು ಪ್ರತಿಭೆ ಪೋಷಿಸಿದ ಮ್ಯಾಂಚೆಸ್ಟರ್ ಕ್ಲಬ್‌ಗೆ ಆ ಹಣದ ಲಾಭ–ಕಟ್. ಸ್ಟಾರ್ಟ್: 2013ರಲ್ಲಿ ಎಣಿಸಿದರೆ 51 ಗೋಲುಗಳನ್ನು ಈ ಸಾಧಕ ಹೊಡೆದಾಗಿತ್ತು–ಕಟ್. ಈ ಎಲ್ಲ ದೃಶ್ಯಗಳನ್ನು ಜೋಡಿಸಿದರೆ ಕ್ರಿಸ್ಟಿಯಾನೊ ರೊನಾಲ್ಡೊ ಸಂಕ್ಷಿಪ್ತ ವ್ಯಕ್ತಿಚಿತ್ರ ಸಿಗುತ್ತದೆ. ಈ ಸಲ ರಷ್ಯಾದಲ್ಲಿ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಸ್ಪೇನ್ ವಿರುದ್ಧ ಹ್ಯಾಟ್ರಿಕ್ ಗೋಲು ಗಳಿಸಿ, ಆಮೇಲೆ ಮೊರೊಕ್ಕೊ ಎದುರು ತಲೆಯ ಚಳಕದಿಂದಲೇ ಒಂದು ಗೋಲು ದಾಖಲಿಸಿದ ಈ ತಂತ್ರಗಾರ ತುಂಟನೂ ಹೌದು. ಆಗೀಗ ಬೀಳುವ, ಕಾಲು ನೋವಿನ ನಾಟಕವಾಡುವ, ಸಣಕಲನಂತೆ ಕಂಡೂ ಚಿರತೆಯಂತೆ ಜಿಗಿಯುವ (ಎನ್‌ಬಿಎ ಬ್ಯಾಸ್ಕೆಟ್‌ಬಾಲ್ ಆಟಗಾರರು ಜಿಗಿಯುವ ಸರಾಸರಿ ಎತ್ತರಕ್ಕಿಂತ ಹೆಚ್ಚು ಈತ ಫುಟ್‌ಬಾಲ್ ಅಂಗಳದಲ್ಲಿ ಜಿಗಿಯಬಲ್ಲ) ರೊನಾಲ್ಡೊ 51 ಸಲ ಹ್ಯಾಟ್ರಿಕ್ ಗೋಲುಗಳನ್ನು ಗಳಿಸಿದ್ದಾನೆ. ಒಬ್ಬನ ಪ್ರತಿಭೆಯನ್ನೇ ನೆಚ್ಚಿಕೊಂಡು ಉಸಿರಾಡುವ ಪೋರ್ಚುಗಲ್ ತಂಡಕ್ಕೀಗ ರೊನಾಲ್ಡೊ ಜಪ ಬಿಟ್ಟರೆ ಬೇರೇನೂ ಕಾಣುತ್ತಿಲ್ಲ. ಐರೋಪ್ಯ ರಾಷ್ಟ್ರಗಳಲ್ಲಿ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಗೋಲು (85) ಗಳಿಸಿದ ಶ್ರೇಷ್ಠ ಎಂಬ ಗರಿ ಈಗ ತಲೆ ಮೇಲೆ. 33ರ ಹರೆಯದಲ್ಲೂ ಶಾಲೆಯಲ್ಲಿ ಕುರ್ಚಿ ಎಸೆದ ಮೊದಲ ‘ಶಾಟ್’ ಅನ್ನು ರೊನಾಲ್ಡೊ ಆಗೀಗ ನೆನಪಿಸಿಕೊಳ್ಳುತ್ತಿರುತ್ತಾನೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.