ಫುಟ್‌ಬಾಲ್ ಆಟಗಾರ ಕ್ರಿಸ್ಟಿ ನಿಧನ ಬೆಂಗಳೂರು: ಅಂತರರಾಷ್ಟ್ರೀಯ ಫುಟ್‌ಬಾಲ್ ಆಟಗಾರರಾಗಿದ್ದ ಜೆ.ಜೋಸೆಫ್ ಕ್ರಿಸ್ಟಿ (90) ಬುಧವಾರ ರಾತ್ರಿ ನಗರದ ಫ್ರೇಜರ್ ಟೌನ್‌ನ ವಿಲ್ಲನ್ ಗಾರ್ಡನ್‌ನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. ಅವರಿಗೆ ಇಬ್ಬರು ಪುತ್ರರು ಮತ್ತು ಪುತ್ರಿ ಇದ್ದಾರೆ. ಮಿಡ್‌ಫೀಲ್ಡರ್ ಆಗಿದ್ದ ಕ್ರಿಸ್ಟಿ 1960ರಲ್ಲಿ ರಷ್ಯಾ ಪ್ರವಾಸ ಕೈಗೊಂಡ ಭಾರತ ತಂಡದಲ್ಲಿ ಆಡಿದ್ದರು. ಅದೇ ವರ್ಷ ಸಂತೋಷ್ ಟ್ರೋಫಿ ಟೂರ್ನಿಯಲ್ಲಿ ‘ಮೈಸೂರು ರಾಜ್ಯ’ ತಂಡದಲ್ಲಿದ್ದರು. ಪೊಲೀಸ್ ಇಲಾಖೆ ಸೇರಿದ ನಂತರ ಸುಲಿವಾನ್ ಪೊಲೀಸ್ ತಂಡವನ್ನು ಪ್ರತಿನಿಧಿಸಿದ್ದರು. 1979ರಲ್ಲಿ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಲ್ಲಿ ಕೋಚಿಂಗ್ ತರಬೇತಿ ಪೂರ್ಣಗೊಳಿಸಿದ್ದರು. ‌ಗುರುವಾರ ಸಂಜೆ ಅಂತ್ಯ ಸಂಸ್ಕಾರ ನಡೆಯಿತು ಎಂದು ರಾಜ್ಯ ಫುಟ್‌ಬಾಲ್ ಸಂಸ್ಥೆ ತಿಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.