ಫಿಫಾ: ಫ್ರಾನ್ಸ್‌-ಅರ್ಜೆಂಟೀನಾ ಹಣಾಹಣಿ ಕಜಾನ್ : ವಿಶ್ವಕಪ್‌ನ ಮೊದಲ ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಫ್ರಾನ್ಸ್ ಮತ್ತು ಅರ್ಜೆಂಟೀನಾ ತಂಡಗಳು ಶನಿವಾರ ಸೆಣಸಲಿವೆ. ಒಂದು ಬಾರಿ ವಿಶ್ವಕಪ್ ಪ್ರಶಸ್ತಿ ಗೆದ್ದಿರುವ ಮತ್ತು ಒಮ್ಮೆ ರನ್ನರ್ ಅಪ್ ಆಗಿರುವ ಫ್ರಾನ್ಸ್‌ ಈ ಟೂರ್ನಿಯಲ್ಲಿ ಒಮ್ಮೆಯೂ ಅರ್ಜೆಂಟೀನಾ ವಿರುದ್ಧ ಗೆದ್ದಿಲ್ಲ. ತಲಾ ಎರಡು ಬಾರಿ ಚಾಂಪಿಯನ್‌ ಮತ್ತು ರನ್ನರ್ ಅಪ್‌ ಆಗಿರುವ ಅರ್ಜೆಂಟೀನಾ ಈ ಬಾರಿ ಪ್ರಯಾಸಪಟ್ಟು 16ರ ಘಟ್ಟಕ್ಕೆ ಪ್ರವೇಶಿಸಿರುವುದರಿಂದ ಫ್ರಾನ್ಸ್‌ ತಂಡದ ಜಯದ ಆಸೆ ಗರಿಗೆದರಿದೆ. ಕಜಾನ್ ಅರೆನಾದಲ್ಲಿ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಫ್ರಾನ್ಸ್‌ನ ಪಾಲ್ ಪೊಗ್ಬಾ, ಆಂಟೋಯ್ನ್‌ ಗ್ರೀಜ್ಮನ್‌ ಮತ್ತು ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ, ಏಂಜೆಲ್‌ ಡಿ ಮಾರಿಯಾ ಮೇಲೆ ಫುಟ್‌ಬಾಲ್‌ ಪ್ರಿಯರು ಕಣ್ಣು ನೆಟ್ಟಿದ್ದಾರೆ. ಮೊದಲ ಎರಡು ಪಂದ್ಯಗಳಲ್ಲಿ ನಿರಾಸೆ ಮೂಡಿಸಿದ್ದ ಮೆಸ್ಸಿ ಮೂರನೇ ಪಂದ್ಯದಲ್ಲಿ ಮಿಂಚಿನ ಆಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ತಂಡ ಪ್ರೀ ಕ್ವಾರ್ಟರ್ ಫೈನಲ್ ತಲುಪಲು ನೈಜೀರಿಯಾ ವಿರುದ್ಧ ಅವರು ಗಳಿಸಿದ ಅಮೋಘ ಗೋಲು ಕಾರಣವಾಗಿತ್ತು. ಶನಿವಾರದ ಪಂದ್ಯದಲ್ಲೂ ಇದೇ ರೀತಿಯ ಸಾಮರ್ಥ್ಯ ತೋರಲು ಅವರಿಗೆ ಸಾಧ್ಯವಾಗಲಿದೆ ಎಂಬ ಭರವಸೆಯಲ್ಲಿದ್ದಾರೆ ಅಭಿಮಾನಿಗಳು. ಅತಿ ಹೆಚ್ಚು ಪಂದ್ಯಗಳಲ್ಲಿ ತಂಡವನ್ನು ಮನ್ನಡೆಸಿದ ನಾಯಕ ಹ್ಯೂಗೊ ಲಾರಿಸ್‌ ಬಳಗ ಈ ಬಾರಿಯ ಟೂರ್ನಿಯಲ್ಲಿ ಈ ವರೆಗೆ ಬಲಿಷ್ಠ ತಂಡಗಳನ್ನು ಎದುರಿಸಲಿಲ್ಲ. ಈಗ ತಂಡಕ್ಕೆ ನಿಜವಾದ ಸವಾಲು ಎದುರಾಗಿದೆ. ಗುಂಪು ಹಂತದ ಪಂದ್ಯಳಗಳಲ್ಲಿ ನಿಜವಾದ ಸಾಮರ್ಥ್ಯ ಹೊರಗೆಡವಲು ಆಗದಿದ್ದರೂ ಅರ್ಜೆಂಟೀನಾ ತಂಡ ನಾಕೌಟ್ ಹಂತದಲ್ಲಿ ಫ್ರಾನ್ಸ್‌ಗೆ ಪ್ರಬಲ ಪೈಪೋಟಿ ನೀಡಬಲ್ಲುದು. ಬಲಿಷ್ಠ ಆಟಗಾರರ ಪಡೆ: ಡೈಡಿಯರ್ ದೇಶ್ಚಾಂಪ್ಸ್‌ ಗರಡಿಯಲ್ಲಿ ಪಳಗಿರುವ ಫ್ರಾನ್ಸ್ ತಂಡ ಬಲಿಷ್ಠ ಆಟಗಾರರನ್ನು ಹೊಂದಿದೆ. ಆಂಟೋಯ್ನ್ ಗ್ರೀಜ್ಮನ್‌, ಕಲಿಯಾನ್ ಬಾಪೆ, ಓಲಿವರ್‌ ಗಿರೌಡ್ ಮುಂತಾದವರು ಗುಂಪು ಹಂತದ ಪಂದ್ಯಗಳಲ್ಲಿ ನೈಜ ಸಾಮರ್ಥ್ಯ ಹೊರಗೆಡವಲು ವಿಫಲರಾಗಿದ್ದಾರೆ. ಆದರೆ ಯಾವುದೇ ಕ್ಷಣದಲ್ಲಿ ಪುಟಿದೇಳುವ ಸಾಮರ್ಥ್ಯ ಇವರಿಗೆ ಇರುವುದರಿಂದ ಅರ್ಜೆಂಟೀನಾಗೆ ಸವಾಲಾಗಬಲ್ಲರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.