ಕ್ವಾರ್ಟರ್‌ ಫೈನಲ್‌ಗೆ ಫ್ರಾನ್ಸ್ ಲಗ್ಗೆ ಕಜಾನ್‌ (ಎಎಫ್‌ಪಿ): ಅರ್ಜೆಂಟೀನಾ ರಕ್ಷಣಾ ವಿಭಾಗದ ದೌರ್ಬಲ್ಯದ ಲಾಭ ಪಡೆದುಕೊಂಡ ಫ್ರಾನ್ಸ್‌ ತಂಡ ವಿಶ್ವಕಪ್ ಟೂರ್ನಿಯ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇರಿಸಿತು. ಕಜಾನ್ ಅರೆನಾದಲ್ಲಿ ಶನಿವಾರ ರಾತ್ರಿ ನಡೆದ ಮೊದಲ ಪ್ರೀ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಈ ತಂಡ 4–3 ರಿಂದ ಗೆದ್ದಿತು. ಅಂಟೋಯ್ನ್‌ ಗ್ರೀಜ್‌ಮನ್‌ ಮತ್ತು ಬೆಂಜಮಿನ್ ಪವಾರ್ಡ್ ಗಳಿಸಿಕೊಟ್ಟ ಮುನ್ನಡೆಯ ಬಲದಿಂದ ಕಿಲಿಯನ್‌ ಬಾಪೆ ಗಳಿಸಿದ ಎರಡು ಗೋಲುಗಳು ಫ್ರಾನ್ಸ್‌ನ ಗೆಲುವಿಗೆ ಕಾರಣವಾದವು. ಐದನೇ ನಿಮಿಷದಲ್ಲೇ ಅರ್ಜೆಂಟೀನಾ ಪ್ರಬಲ ಆಕ್ರಮಣ ನಡೆಸಿತು. ಫ್ರಾನ್ಸ್‌ನ ರಕ್ಷಣಾ ವಿಭಾಗದ ಆಟಗಾರರನ್ನು ವಂಚಿಸಿ ಮುನ್ನಡೆದ ಡಿ ಮಾರಿಯಾ ಬಲಭಾಗದಿಂದ ಚೆಂಡನ್ನು ಬಲವಾಗಿ ಒದ್ದರು. ಆದರೆ ಚೆಂಡು ಗೋಲು ಪೆಟ್ಟಿಗೆಯ ಮೇಲ್ಭಾಗದಿಂದ ಹೊರಗೆ ಚಿಮ್ಮಿತು. ಒಂಬತ್ತನೇ ನಿಮಿಷದಲ್ಲಿ ಫ್ರಾನ್ಸ್‌ಗೆ ಮುನ್ನಡೆ ಸಾಧಿಸಲು ಅಪೂರ್ವ ಅವಕಾಶ ಲಭಿಸಿತು. ಆದರೆ ಫ್ರೀ ಕಿಕ್‌ನಲ್ಲಿ ಗೋಲು ಗಲಿಸಲು ಅಂಟೋಯ್ನ್‌ ಗ್ರೀಜ್‌ಮನ್‌ಗೆ ಸಾಧ್ಯವಾಗಲಿಲ್ಲ. ಇದರ ನಂತರ ಈ ತಂಡದ ಆಟ ಚುರುಕು ಪಡೆದುಕೊಂಡಿತು. ಇದಕ್ಕೆ 13ನೇ ನಿಮಿಷದಲ್ಲಿ ಫಲ ಸಿಕ್ಕಿತು. ಮಾರ್ಕೋಸ್‌ ರೋಜೊ ಎಸಗಿದ ತಪ್ಪಿಗೆ ಅರ್ಜೆಂಟೀನಾ ಬೆಲೆ ತೆತ್ತಿತು. ತಂಡದ ಆವರಣದಲ್ಲಿ ಮಾಪೆ ಅವರನ್ನು ಮಾರ್ಕೋಸ್‌ ತಳ್ಳಿ ನೆಲಕ್ಕೆ ಕೆಡವಿದರು. ರೆಫರಿ ಒಂದು ಕ್ಷಣವೂ ಯೋಚಿಸದೆ ಪೆನಾಲ್ಟಿ ವಿಧಿಸಿದರು. ಫ್ರೀ ಕಿಕ್‌ನಲ್ಲಿ ವಿಫಲರಾದ ಗ್ರೀಜ್‌ಮನ್‌ ಪೆನಾಲ್ಟಿಯಲ್ಲಿ ಯಶಸ್ಸು ಕಂಡರು. ಅವರು ಎಡಗಾಲಿನಿಂದ ಒದ್ದ ಚೆಂಡನ್ನು ತಡೆಯಲು ಗೋಲ್ ಕೀಪರ್‌ ಎಡ ಬದಿಗೆ ಜಿಗಿದರು. ಆದರೆ ಚೆಂಡು ಬಲಭಾಗದಿಂದ ನುಗ್ಗಿ ಗುರಿ ಸೇರಿತು. ಕಿಲಿಯನ್ ಬಾಪೆ ಅವರ ಆಕ್ರಮಣಕಾರಿ ಆಟಕ್ಕೆ ಬೆರಗಾದ ಅರ್ಜೆಂಟೀನಾ 19ನೇ ನಿಮಿಷದಲ್ಲಿ ಮತ್ತೊಂದು ಎಡವಟ್ಟು ಮಾಡಿತು. ತಗ್ಲಾಫಿಕೊ ಎಸಗಿದ ತಪ್ಪಿನಿಂದಾಗಿ ಫ್ರೀ ಕಿಕ್ ಅವಕಾಶವನ್ನು ಬಿಟ್ಟುಕೊಟ್ಟಿತು. ಆದರೆ ಪಾಲ್ ಪೊಗ್ಬಾ ಮಿಂಚಿನ ವೇಗದಲ್ಲಿ ಒದ್ದ ಚೆಂಡು ಗೋಲುಪೆಟ್ಟಿಗೆಯ ಮೇಲ್ಭಾಗದಿಂದ ಹೊರಗೆ ಸಾಗಿತು. ತಿರುಗೇಟು ನೀಡಿದ ಅರ್ಜೆಂಟೀನಾ ಮೊದಲಾರ್ಧದ ಮುಕ್ತಾಯಕ್ಕೆ ನಾಲ್ಕು ನಿಮಿಷಗಳು ಬಾಕಿ ಇರುವಾಗ ತಿರುಗೇಟು ನೀಡಿದ ಅರ್ಜೆಂಟೀನಾ, ಸಮಬಲದೊಂದಿಗೆ ವಿರಾಮಕ್ಕೆ ತೆರಳಿತು. ಚೆಂಡನ್ನು ಪಾಸ್ ಮಾಡುತ್ತ ಎದುರಾಳಿ ತಂಡದ ಆವರಣಕ್ಕೆ ನುಗ್ಗಿದ ಮೆಸ್ಸಿ ಬಳಗದ ಆಟಗಾರರು ಬಲಭಾಗದಲ್ಲಿ ರಕ್ಷಣಾ ವಿಭಾಗವನ್ನು ತಬ್ಬಿಬ್ಬುಗೊಳಿಸಿದರು. ನಂತರ ಚೆಂಡನ್ನು ಮಧ್ಯಭಾಗದಲ್ಲಿದ್ದ ಏಂಜೆಲ್‌ ಡಿ ಮಾರಿಯೊಗೆ ಲಾಫ್ಟ್ ಮಾಡಿದರು. 25 ಗಜ ದೂರದಿಂದ ಮಾರಿಯೊ ಒದ್ದ ಚೆಂಡು ನಿಖರವಾಗಿ ಗುರಿ ಸೇರಿತು; ಅರ್ಜೆಂಟೀನಾ ಬಳಗದಲ್ಲಿ ಸಂಭ್ರಮ ಮನೆ ನಾಡಿತು. ಮಧ್ಯಂತರ ಅವಧಿಯ ನಂತರದ ಮೂರೇ ನಿಮಿಷದಲ್ಲಿ ಗ್ಯಾಬ್ರಿಯೆಲ್‌ ಮರ್ಕಾಡೊ ಗಳಿಸಿದ ಗೋಲಿನ ಮೂಲಕ ಅರ್ಜೆಂಟೀನಾ ಮುನ್ನಡೆ ಸಾಧಿಸಿತು. ಆದರೆ ನಂತರ ಪಂದ್ಯದ ಗತಿಯೇ ಬದಲಾಯಿತು. 64 ಮತ್ತು 68ನೇ ನಿಮಿಷದಲ್ಲಿ ಮಿಂಚಿನ ಗೋಲು ಗಳಿಸಿದ ಬಾಪೆ ಅವರು ಫ್ರಾನ್ಸ್‌ಗೆ ಅಮೋಘ ಮುನ್ನಡೆ ಗಳಿಸಿಕೊಟ್ಟರು. 90+3ನೇ ನಿಮಿಷದಲ್ಲಿ ಕುನ್ ಅಗೆರೊ ಗೋಲು ಗಳಿಸಿ ಪಂದ್ಯವನ್ನು ರೋಚಕ ಘಟ್ಟಕ್ಕೆ ಕೊಂಡೊಯ್ದರು. ಕೊನೆಗೂ ಅರ್ಜೆಂಟೀನಾ ನಿರಾಸೆಗೆ ಒಳಗಾಯಿತು. ಆರು ಬದಲಾವಣೆ:ಕಳೆದ ಪಂದ್ಯದಲ್ಲಿ ಆಡದೇ ಇದ್ದ ಬಾಪೆ ಮತ್ತು ಪೊಗ್ಬಾ ಅವರಿಗೆ ಅವಕಾಶ ನೀಡಿದ ಫ್ರಾನ್ಸ್ ಒಟ್ಟು ಆರು ಬದಲಾವಣೆಗಳೊಂದಿಗೆ ಕಣಕ್ಕೆ ಇಳಿದಿತ್ತು. ಗೊನ್ಜಾಲೊ ಹಿಗ್ಯುನ್ ಬದಲಿಗೆ ಕ್ರಿಸ್ಟಿಯನ್ ಪಾವೊನ್‌ಗೆ ಅರ್ಜೆಂಟೀನಾ ಅವಕಾಶ ನೀಡಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.