ತವರಿನಲ್ಲಿ ಒಡಿಶಾಕ್ಕೆ ಮಣಿದ ಮುಂಬೈ ಸಿಟಿ ಮುಂಬೈ: ವೇಗ ಮತ್ತು ಚುರುಕಿನ ಆಟವಾಡಿದ ಒಡಿಶಾ ತಂಡ ಐಎಸ್‌ಎಲ್‌ ಟೂರ್ನಿಯ ಲೀಗ್‌ ಪಂದ್ಯದಲ್ಲಿ ಗುರುವಾರ ಮುಂಬೈ ಸಿಟಿ ತಂಡವನ್ನು ತವರಿನಲ್ಲೇ 4–2 ಗೋಲುಗಳಿಂದ ಸೋಲಿಸಿತು. ಇದು ಮೂರನೇ ಪಂದ್ಯ ಆಡುತ್ತಿರುವ ಒಡಿಶಾಕ್ಕೆ ಮೊದಲ ಗೆಲುವು. ಮುಂಬೈ ಫುಟ್‌ಬಾಲ್‌ ಅರೇನಾದಲ್ಲಿ ನಡೆದ ಈ ಪಂದ್ಯದಲ್ಲಿ ಒಡಿಶಾ ಆಟದೆದುರು ಮುಂಬೈ ರಕ್ಷಣೆ ಸಪ್ಪೆಯಾದಂತೆ ಕಂಡಿತು. ವಿರಾಮದ ವೇಳೆಯೇ ಒಡಿಶಾ 3–0 ಗೋಲುಗಳಿಂದ ಮುನ್ನಡೆದಿತ್ತು. ಸ್ಪ್ಯಾನಿಷ್‌ ಆಟಗಾರರಾದ ‌ಕ್ಸಿಸ್ಕೊ ಹರ್ನಾಂಡೆಝ್ (6ನೇ ನಿಮಿಷ), ಅರಿಡೇನ್‌ ಸಂಟಾನಾ (21 ಮತ್ತು 72ನೇ ನಿಮಿಷ) ಜೊತೆ ಜೆರಿ ಮೌಮಿಂಗ್‌ಥಂಗಾ (40ನೇ ನಿಮಿಷ) ಅವರು ಒಡಿಶಾ ತಂಡದ ಗೋಲು ಗಳಿಸಿದರು. ಮುಂಬೈ ತಂಡಕ್ಕೆ ಟ್ಯುನೀಷಿಯಾದ ಮೊಹಮದ್‌ ಲಾರ್ಬಿ (51ನೇ) ಮತ್ತು ಸ್ಪೇನ್‌ನ ಫ್ರಾನ್ಸಿಸ್ಕೊ ಡೊರನ್‌ಸೊರೊ (90+5) ನಿಮಿಷ ಗೋಲು ತಂದಿತ್ತರು. ಮುಂಬಾಕ್ಕೆ ಇದು ಮೊದಲ ಸೋಲು ಎನಿಸಿತು. ಮೊದಲ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್‌ ವಿರುದ್ಧ ಜಯಗಳಿಸಿದ್ದ ಮುಂಬಾ ನಂತರ ಚೆನ್ನೈಯಿನ್‌ ವಿರುದ್ಧ ಗೋಲಿಲ್ಲದೇ ಡ್ರಾ ಮಾಡಿಕೊಂಡಿತ್ತು. ಒಡಿಶಾ ಮೊದಲ ಎರಡು ಪಂದ್ಯಗಳಲ್ಲಿ ಜಮ್‌ಶೆಡ್‌ಪುರ ಎಫ್‌ಸಿ ಮತ್ತು ನಾರ್ತ್‌ಈಸ್ಟ್‌ ಯುನೈಟೆಡ್‌ ವಿರುದ್ಧ 1–2 ಗೋಲುಗಳ ಸಮಾನ ಅಂತರದಿಂದ ಸೋಲನುಭವಿಸಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.