ಫುಟ್‌ಬಾಲ್‌: ಸನ್‌ರೈಸ್‌ ತಂಡಕ್ಕೆ ಪ್ರಶಸ್ತಿ ಬೆಂಗಳೂರು: ಪೆನಾಲ್ಟಿ ಅವಕಾಶದಲ್ಲಿ ಗೋಲು ಗಳಿಸಲು ಯಶಸ್ವಿಯಾದ ಸನ್‌ರೈಸ್‌ ಎಫ್‌ಸಿ ತಂಡವು ಬೆಂಗಳೂರು ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ (ಬಿಡಿಎಫ್‌ಎ) ಆಶ್ರಯದ ‘ಸಿ’ ಡಿವಿಷನ್‌ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದಿದೆ. ಅಶೋಕ ನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಫೈನಲ್‌ ಹಣಾಹಣಿಯಲ್ಲಿ ಸನ್‌ರೈಸ್‌ ಎಫ್‌ಸಿಯು ಪೆನಾಲ್ಟಿಯಲ್ಲಿ 4–3 ಗೋಲುಗಳಿಂದ ಗೋವನ್ಸ್‌ ಎಫ್‌ಸಿಯ ಸವಾಲು ಮೀರಿತು. ಉಭಯ ತಂಡಗಳು ನಿಗದಿತ ಅವಧಿಯಲ್ಲಿ ತಲಾ ಮೂರು ಗೋಲುಗಳನ್ನು ದಾಖಲಿಸಿದ್ದವು. ಸನ್‌ರೈಸ್‌ ಪರ ಜೋಶುವಾ (5 ಮತ್ತು 10ನೇ ನಿಮಿಷ) ಎರಡು ಬಾರಿ ಚೆಂಡನ್ನು ಗುರಿ ಮುಟ್ಟಿಸಿದರು. 44ನೇ ನಿಮಿಷದಲ್ಲಿ ಗೋವನ್ಸ್‌ ತಂಡದ ಶೆರ್ವಿನ್‌ ತಮ್ಮದೇ ಗೋಲುಪೆಟ್ಟಿಗೆಯೊಳಗೆ ಚೆಂಡನ್ನು ಒದ್ದರು. ಹೀಗಾಗಿ ಸನ್‌ರೈಸ್‌ ಖಾತೆಗೆ ‘ಉಡುಗೊರೆ’ ರೂಪದಲ್ಲಿ ಮೂರನೇ ಗೋಲು ಸೇರ್ಪಡೆಯಾಯಿತು. ಗೋವನ್ಸ್‌ ತಂಡದ ಕ್ಲಿಂಟನ್‌ (7 ಮತ್ತು 21ನೇ ನಿ.) ಎರಡು ಹಾಗೂ ಸಚಿನ್‌ (61ನೇ ನಿ.) ಒಂದು ಗೊಲು ಬಾರಿಸಿದರು. ಆದರೆ, ಹೆಚ್ಚುವರಿ ಅವಧಿಯಲ್ಲಿ ಎರಡೂ ತಂಡಗಳು ಗೋಲುಗಳಿಸಲು ವಿಫಲವಾದವು. ಹೀಗಾಗಿ ವಿಜೇತರನ್ನು ನಿರ್ಧರಿಸಲು ಪೆನಾಲ್ಟಿ ಮೊರೆ ಹೋಗಬೇಕಾಯಿತು. ಪೆನಾಲ್ಟಿ ಅವಕಾಶದಲ್ಲಿ ಡಿ. ಶೆರ್ವಿನ್‌, ರೋಷನ್‌, ರಕ್ಷಿತ್‌ ಹಾಗೂ ನಿಕ್ಸನ್‌ ಅವರು ಚೆಂಡನ್ನು ಗುರಿ ತಲುಪಿಸಿ ಸನ್‌ರೈಸ್‌ ಪಾಳಯದಲ್ಲಿ ಸಂಭ್ರಮ ಮೂಡಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.