ಆ್ಯಂಡ್ರೆ ಐನೆಸ್ಟಾ ವಿದಾಯ ಮಾಸ್ಕೊ: ಸ್ಪೇನ್‌ನ ಮಿಡ್‌ಪೀಲ್ಡರ್‌ ಆ್ಯಂಡ್ರೆ ಐನೆಸ್ಟಾ ಅವರು ಅಂತರರಾಷ್ಟ್ರೀಯ ಫುಟ್‌ಬಾಲ್‌ ಬದುಕಿಗೆ ವಿದಾಯ ಹೇಳಿದ್ದಾರೆ. ಭಾನುವಾರ ರಷ್ಯಾ ವಿರುದ್ದ ನಡೆದ ರೋಚಕ ಪ್ರೀ ಕ್ವಾರ್ಟರ್‌ಫೈನಲ್‌ ಪಂದ್ಯದ ನಂತರ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಪೆನಾಲ್ಟಿ ಅವಕಾಶದಲ್ಲಿ ರಷ್ಯಾ ತಂಡವು ಸ್ಪೇನ್‌ ಅನ್ನು 4–3ರಿಂದ ಮಣಿಸಿ ಫುಟ್‌ಬಾಲ್‌ ಅಭಿಮಾನಿಗಳ ಹುಬ್ಬೇರಿಸಿತ್ತು. ಸ್ಪೇನ್‌ ತಂಡದ ಮಿಡ್‌ಫೀಲ್ಡ್‌ ವಿಭಾಗದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿದ್ದ ಐನೆಸ್ಟಾ ಅವರು 2010ರ ಫಿಫಾ ವಿಶ್ವಕಪ್‌ನಲ್ಲಿ ಅಮೋಘ ಸಾಮರ್ಥ್ಯ ಮೆರೆದಿದ್ದರು. ಸ್ಪೇನ್‌ ತಂಡವು ಆ ವಿಶ್ವಕಪ್‌ ಗೆಲ್ಲಲು ಐನೆಸ್ಟಾ ಅವರು ಪ್ರಮುಖ ಕಾರಣರಾಗಿದ್ದರು. ಆ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಅವರು ಜಯದ ಗೋಲು ಗಳಿಸಿದ್ದರು. ‘ಟಿಕಿ–ಟಾಕಾ’ (ಶಾರ್ಟ್‌ ಪಾಸ್‌ಗಳ ಮೂಲಕ ಗೊಲು ಗಳಿಸುವ ತಂತ್ರ) ಎಂಬ ಆಟದ ಶೈಲಿಯನ್ನು ಜನಪ್ರಿಯಗೊಳಿಸಿದ ಪ್ರಮುಖ ಆಟಗಾರ ಎಂಬ ಹೆಗ್ಗಳಿಕೆಯೂ ಇವರ ಹೆಸರಲ್ಲಿದೆ. ಇತ್ತೀಚೆಗಷ್ಟೇ ಐನೆಸ್ಟಾ ತಾವು ಆಡುತ್ತಿದ್ದ ಬಾರ್ಸಿಲೋನಾ ಕ್ಲಬ್‌ಗೆ ವಿದಾಯ ಹೇಳಿದ್ದರು. ಸದ್ಯ ಅವರು ಜಪಾನ್‌ನ ವಿಸ್ಸೆಲ್‌ ಕೋಬ್‌ ಕ್ಲಬ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ರಷ್ಯಾ ಎದುರಿನ ಪಂದ್ಯದ ನಂತರ ಮಾತನಾಡಿದ ಐನೆಸ್ಟಾ, ‘ವಿಶ್ವಕಪ್‌ ಟೂರ್ನಿಯಿಂದ ತಂಡ ಹೊರಬಿದ್ದಿದೆ.ವೃತ್ತಿ ಬದುಕಿನ ಅತ್ಯಂತ ನೋವಿನ ದಿನವಿದು. ನನ್ನ ರಾಷ್ಟ್ರದ ತಂಡದೊಂದಿಗೆ ಆಡಿದ ಕೊನೆಯ ಪಂದ್ಯವಿದು. ಫುಟ್‌ಬಾಲ್‌ ಜಗತ್ತಿನಲ್ಲಿ ಸ್ಪೇನ್‌ ತಂಡವು ಉತ್ತುಂಗದ ಘಟ್ಟದಲ್ಲಿದ್ದ ಕಾಲದಲ್ಲಿ ನಾನು ಅದರ ಪರವಾಗಿ ಆಡಿದ್ದೇನೆ. ಈ ಬಗ್ಗೆ ನನಗೆ ಹೆಮ್ಮೆ ಇದೆ’ ಎಂದು ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.