ಇಂಗ್ಲೆಂಡ್‌–ಕೊಲಂಬಿಯಾ ಹಣಾಹಣಿ ಮಾಸ್ಕೊ: ಎಂಟರ ಘಟ್ಟದ ಮೇಲೆ ಕಣ್ಣಿಟ್ಟಿರುವ ಇಂಗ್ಲೆಂಡ್‌ ಹಾಗೂ ಕೊಲಂಬಿಯಾ ತಂಡಗಳು ಮಂಗಳವಾರ ಮುಖಾಮುಖಿಯಾಗಲಿವೆ. ಇಲ್ಲಿನ ಸ್ಪಾರ್ಟಕ್‌ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಬಲಿಷ್ಠ ತಂಡಗಳ ಹೋರಾಟ ನೋಡಲು ಫುಟ್‌ಬಾಲ್‌ ಅಭಿಮಾನಿಗಳು ಕಾತರರಾಗಿದ್ದಾರೆ. ಆಡಿದ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಜಯಿಸಿ ಒಂದರಲ್ಲಿ ಸೋತಿರುವ ಉಭಯ ತಂಡಗಳು ತಮ್ಮ ಶಿಸ್ತಿನ ಹೋರಾಟದಿಂದ ಫುಟ್‌ಬಾಲ್‌ ದಿಗ್ಗಜರ ಮನಸೆಳೆದಿವೆ. ‘ಬೆಲ್ಜಿಯಂ ಎದುರು ನಮ್ಮ ತಂಡವು ಉತ್ತಮವಾಗಿ ಆಡಿತು. ಆದರೆ, ಹೋರಾಟ ಜಿದ್ದಾಜಿದ್ದಿನಿಂದ ಕೂಡಿತ್ತು’ ಎಂದು ಗರೆತ್‌ ಅವರು ಹೇಳಿದ್ದಾರೆ. ಇನ್ನೂ, ಕೊಲಂಬಿಯಾ ತಂಡವು ಇಲ್ಲಿಯವರೆಗೂ ಸಂಘಟಿತ ಹೋರಾಟ ತೋರಿದೆ. ಕಳೆದ ವಿಶ್ವಕಪ್‌ನಲ್ಲಿ ಕ್ವಾರ್ಟರ್‌ಫೈನಲ್‌ ಹಂತ ಪ್ರವೇಶಿಸಿದ್ದ ಕೊಲಂಬಿಯಾ, ಈ ಬಾರಿಯೂ ತನ್ನ ಉತ್ತಮ ಸಾಮರ್ಥ್ಯವನ್ನು ಮುಂದುವರಿಸಿಕೊಂಡು ಹೋಗುವ ವಿಶ್ವಾಸದಲ್ಲಿದೆ. ಮೂರು ಪಂದ್ಯಗಳಿಂದ ಒಟ್ಟು ಐದು ಗೋಲುಗಳನ್ನು ಗಳಿಸಿ, ಎರಡು ಗೋಲುಗಳನ್ನು ಬಿಟ್ಟುಕೊಟ್ಟಿದೆ. ತಂಡದ ತಾರಾ ಆಟಗಾರ, ಹಿಂದಿನ ವಿಶ್ವಕಪ್‌ನ ಚಿನ್ನದ ಬೂಟು ಪ್ರಶಸ್ತಿ ವಿಜೇತ ಜೇಮ್ಸ್‌ ರಾಡ್ರಿಗಸ್‌ ಅವರು ಸೆನೆಗಲ್‌ ವಿರುದ್ಧದ ಲೀಗ್‌ ಪಂದ್ಯದಲ್ಲಿ ಗಾಯಗೊಂಡಿದ್ದರು. ಇದೇ ಕಾರಣದಿಂದ ಅವರು ಈ ಪಂದ್ಯದಲ್ಲೂ ಆಡುವ ಅನುಮಾನವಿದೆ. ಎರ‍್ರಿ ಮೀನಾ, ರಡೆಮೆಲ್‌ ಫಾಲ್ಕಾವೊ, ಜುವಾನ್‌ ಕ್ವಿಂಟೆರೊ, ಜುವಾನ್‌ ಕುದ್ರಾದೊ ಈ ವರೆಗೆ ತಂಡದ ಪರವಾಗಿ ಗೊಲು ದಾಖಲಿಸಿದ್ದಾರೆ. ಎರಡು ಬಾರಿ ಚೆಂಡನ್ನು ಗುರಿ ಮುಟ್ಟಿಸಿರುವ ಎರ‍್ರಿ ಮೀನಾ ಅವರು ಪಂದ್ಯದ ಪ್ರಮುಖ ಆಕರ್ಷಣೆ. ಇಂಗ್ಲೆಂಡ್‌ ತಂಡದ ರಕ್ಷಣಾ ಹಾಗೂ ಮುಂಚೂಣಿ ವಿಭಾಗಗಳು ಶಕ್ತವಾಗಿವೆ. ಮೂರು ಪಂದ್ಯಗಳಿಂದ ಒಟ್ಟು 8 ಗೋಲುಗಳನ್ನು ಗಳಿಸಿ, ಕೇವಲ ಮೂರು ಗೊಲುಗಳನ್ನು ಬಿಟ್ಟುಕೊಟ್ಟಿರುವುದೇ ಇದಕ್ಕೆ ಸಾಕ್ಷಿ. ತಂಡದ ಪರವಾಗಿ ಹ್ಯಾರಿ ಕೇನ್‌, ಜಾನ್‌ ಸ್ಟೋನ್ಸ್‌ ಹಾಗೂ ಜೆಸ್ಸಿ ಲಿಂಗಾರ್ಡ್‌ ಅವರು ಗೊಲು ಗಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.