ಸೋತವರಿಗೆ ಗೆಲ್ಲುವ ಹುಮ್ಮಸ್ಸು ಸೇಂಟ್‌ ಪೀಟರ್ಸ್‌ಬರ್ಗ್: 21ನೇ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಅವಕಾಶ ಕಳೆದುಕೊಂಡಿರುವ ಬೆಲ್ಜಿಯಂ ಮತ್ತು ಇಂಗ್ಲೆಂಡ್‌ ತಂಡಗಳು ಈಗ ಮೂರನೇ ಸ್ಥಾನದ ಮೇಲೆ ಕಣ್ಣಿಟ್ಟಿವೆ. ಯೂರೋಪ್‌ನ ಪ್ರಬಲ ತಂಡಗಳ ನಡುವಣ ಈ ಪೈಪೋಟಿಗೆ ಸೇಂಟ್ ಪೀಟರ್ಸ್‌ ಬರ್ಗ್‌ ಕ್ರೀಡಾಂಗಣದಲ್ಲಿ ವೇದಿಕೆ ಸಿದ್ಧಗೊಂಡಿದೆ. ಬೆಲ್ಜಿಯಂ ಮತ್ತು ಇಂಗ್ಲೆಂಡ್‌ ವಿಶ್ವಕಪ್‌ನಲ್ಲಿ ನಾಲ್ಕನೇ ಬಾರಿ ಮುಖಾಮುಖಿಯಾಗುತ್ತಿವೆ. ಈ ಬಾರಿ ಗುಂಪು ಹಂತದಲ್ಲಿ ಉಭಯ ತಂಡಗಳು ಎದುರಾಗಿದ್ದವು. ಆಗ ಬೆಲ್ಜಿಯಂ ಗೆಲುವಿನ ಸಿಹಿ ಸವಿದಿತ್ತು. ಬೆಲ್ಜಿಯಂ ತಂಡ ವಿಶ್ವಕಪ್‌ನಲ್ಲಿ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ಈ ತಂಡ ಈ ಬಾರಿ ಮೂರನೇ ಸ್ಥಾನ ಗಳಿಸಿ ಇತಿಹಾಸ ನಿರ್ಮಿಸಲು ಉತ್ಸುಕವಾಗಿದೆ. ರಾಬರ್ಟ್‌ ಮಾರ್ಟಿನೆಜ್‌ ಅವರ ಗರಡಿಯಲ್ಲಿ ಪಳಗಿರುವ ಬೆಲ್ಜಿಯಂ ತಂಡದಲ್ಲಿ ಯುವ ಮತ್ತು ಅನುಭವಿ ಆಟಗಾರರಿದ್ದಾರೆ. ನಾಯಕ ಹಜಾರ್ಡ್‌, ರೊಮೆಲು ಲುಕಾಕು ಮತ್ತು ಕೆವಿನ್‌ ಡಿ ಬ್ರ್ಯೂನ್‌ ಅವರು ಎದುರಾಳಿ ತಂಡದ ರಕ್ಷಣಾ ಕೋಟೆಯನ್ನು ಭೇದಿಸಿ ಚುರುಕಾಗಿ ಚೆಂಡನ್ನು ಗುರಿ ಮುಟ್ಟಿಸುವ ಕಲೆ ಕರಗತ ಮಾಡಿಕೊಂಡಿದ್ದಾರೆ. ಆ್ಯಕ್ಸೆಲ್‌ ವಿಷೆಲ್‌, ಮರೌನ್‌ ಫೆಲೈನಿ, ಮೌಸಾ ಡೆಂಬೆಲ್‌ ಮತ್ತು ನೆಸೆರ್‌ ಚಾಡ್ಲಿ ಅವರೂ ಅದ್ಭುತ ಕಾಲ್ಚಳಕದ ಮೂಲಕ ಅಭಿಮಾನಿಗಳನ್ನು ಮೋಡಿ ಮಾಡಬಲ್ಲರು. ರಕ್ಷಣಾ ವಿಭಾಗದಲ್ಲಿ ಆಡುವ ಥಾಮಸ್‌ ವರ್ಮಲೆನ್‌, ವಿನ್ಸೆಂಟ್‌ ಕೊಂಪನಿ, ಜಾನ್‌ ವರ್ಟಾಂಗೆನ್‌ ಮತ್ತು ಥಾಮಸ್‌ ಮೆಯುನಿರ್‌ ಅವರ ಮೇಲೂ ಅಪಾರ ನಿರೀಕ್ಷೆ ಇದೆ. ಇಂಗ್ಲೆಂಡ್‌ಗೆ ಗೆಲುವಿನ ಛಲ: ಇಂಗ್ಲೆಂಡ್‌ ಕೂಡಾ ಗೆಲುವಿನ ಛಲದಲ್ಲಿದೆ. 24ರ ಹರೆಯದ ಹ್ಯಾರಿ ಕೇನ್‌ ಮತ್ತು ಜೋರ್ಡನ್‌ ಹೆಂಡರ್ಸನ್‌ ಅಭಿಮಾನಿಗಳ ಆಕರ್ಷಣೆಯ ಕೇಂದ್ರಬಿಂದುಗಳಾಗಿದ್ದಾರೆ. ಹ್ಯಾರಿ ಮಗೈರ್‌, ಜಾನ್‌ ಸ್ಟೋನೆಸ್‌, ಕೈಲ್‌ ವಾಕರ್‌ ಮತ್ತು ಡೆನ್ನಿ ರೋಸ್‌ ಅವರು ರಕ್ಷಣಾ ಕೋಟೆಯ ಆಧಾರ ಸ್ಥಂಭಗಳಾಗಿದ್ದಾರೆ. ಗಾಯಗೊಂಡಿರುವ ಕೀರನ್‌ ಟ್ರಿಪ್ಪಿಯರ್‌ ಈ ಪಂದ್ಯದಲ್ಲಿ ಆಡುವುದು ಇನ್ನೂ ಖಚಿತವಾಗಿಲ್ಲ. ಮಿಡ್‌ಫೀಲ್ಡರ್‌ಗಳಾದ ಎರಿಕ್‌ ಡಯರ್‌, ಜೆಸ್ಸೆ ಲಿಂಗಾರ್ಡ್‌, ಡೆಲೆ ಅಲಿ ಮತ್ತು ಮಾರ್ಕಸ್‌ ರ‍್ಯಾಶ್‌ಫೋರ್ಡ್‌ ಅವರೂ ಮಿಂಚುವ ಕಾತರದಲ್ಲಿದ್ದಾರೆ. ಪ್ರಮುಖ ಮಾಹಿತಿ * 1986ರ ವಿಶ್ವಕಪ್‌ ಟೂರ್ನಿಯಲ್ಲಿ ಬೆಲ್ಜಿಯಂ ತಂಡ ಫ್ರಾನ್ಸ್‌ ವಿರುದ್ಧ ಮೂರನೇ ಸ್ಥಾನದ ‘ಪ್ಲೇ ಆಫ್‌’ ಪಂದ್ಯದಲ್ಲಿ ಸೆಣಸಿತ್ತು. ಆ ಹಣಾಹಣಿಯಲ್ಲಿ ಫ್ರಾನ್ಸ್‌ 4–2 ಗೋಲುಗಳಿಂದ ಗೆದ್ದಿತ್ತು. * 1990ರಲ್ಲಿ ಇಂಗ್ಲೆಂಡ್‌ ತಂಡ ಮೂರನೇ ಸ್ಥಾನದ ‘ಪ್ಲೇ ಆಫ್‌’ ಹೋರಾಟದಲ್ಲಿ ಇಟಲಿ ವಿರುದ್ಧ ಸೋತಿತ್ತು. * ಬೆಲ್ಜಿಯಂ ಮತ್ತು ಫ್ರಾನ್ಸ್‌ ನಡುವಣ ಪಂದ್ಯದಲ್ಲಿ ಗೆದ್ದ ತಂಡ ವಿಶ್ವಕಪ್‌ನಲ್ಲಿ ಮೂರನೇ ಸ್ಥಾನ ಗಳಿಸಿದ ಯೂರೋಪ್‌ನ 10ನೇ ತಂಡ ಎಂಬ ಹೆಗ್ಗಳಿಕೆ ತನ್ನದಾಗಿಸಿಕೊಳ್ಳಲಿದೆ. * ಇಂಗ್ಲೆಂಡ್‌ನ ಹ್ಯಾರಿ ಕೇನ್‌, ಬೆಲ್ಜಿಯಂ ವಿರುದ್ಧ ಒಂದು ಗೋಲು ಗಳಿಸಿದರೆ ವಿಶ್ವಕಪ್‌ನಲ್ಲಿ ಹೊಸ ದಾಖಲೆ ನಿರ್ಮಾಣವಾಗಲಿದೆ. 2002ರ ನಂತರ ಟೂರ್ನಿಯೊಂದರಲ್ಲಿ ಅತಿ ಹೆಚ್ಚು (7) ಗೋಲು ಬಾರಿಸಿದ ಮೊದಲ ಆಟಗಾರ ಎಂಬ ಹಿರಿಮೆ ಕೇನ್‌ ಅವರದ್ದಾಗಲಿದೆ. ಸಂಭಾವ್ಯ ತಂಡಗಳು ಬೆಲ್ಜಿಯಂ: ಥಿಬೌಟ್‌ ಕರ್ಟೊಯಿಸ್‌ (ಗೋಲ್‌ಕೀಪರ್‌), ಡಿಫೆಂಡರ್ಸ್‌: ವಿನ್ಸೆಂಟ್‌ ಕೊಂಪನಿ, ಥಾಮಸ್‌ ಮೆಯುನಿಯರ್‌, ಟಾಬಿ ಅಲ್ಡರ್‌ವೀರೆಲ್ಡ್‌. ಮಿಡ್‌ಫೀಲ್ಡರ್ಸ್‌: ಆ್ಯಕ್ಸೆಲ್‌ ವಿಷೆಲ್‌, ಮರೌನ್‌ ಫೆಲೈನಿ, ನೆಸೆರ್‌ ಚಾಡ್ಲಿ, ಕೆವಿನ್‌ ಡಿ ಬ್ರ್ಯೂನ್‌. ಫಾರ್ವರ್ಡ್ಸ್‌: ಈಡನ್‌ ಹಜಾರ್ಡ್‌ (ನಾಯಕ), ರೊಮೆಲು ಲುಕಾಕು, ಮಿಷಿ ಬತ್ಸುವಾಯಿ ಇಂಗ್ಲೆಂಡ್‌: ಜೋರ್ಡನ್‌ ಪಿಕ್‌ಫೋರ್ಡ್‌ (ಗೋಲ್‌ಕೀಪರ್‌). ಡಿಫೆಂಡರ್ಸ್‌: ಗ್ಯಾರಿ ಕಾಹಿಲ್‌, ಜಾನ್‌ ಸ್ಟೋನೆಸ್‌, ಹ್ಯಾರಿ ಮಗುಯೆರ್‌, ಡ್ಯಾನಿ ರೋಸ್‌, ಟ್ರೆಂಟ್‌ ಅಲೆಕ್ಸಾಂಡರ್‌ ಅರ್ನಾಲ್ಡ್‌. ಮಿಡ್‌ಫೀಲ್ಡರ್ಸ್‌: ಎರಿಕ್‌ ಡೆಯರ್‌, ಲಾಫ್ಟಸ್‌ ಚೀಕ್‌, ಡೆಲೆ ಅಲಿ, ಜೆಸ್ಸೆ ಲಿಂಗಾರ್ಡ್‌. ಫಾರ್ವರ್ಡ್‌: ಹ್ಯಾರಿ ಕೇನ್ (ನಾಯಕ). ಸ್ಥಳ: ಸೇಂಟ್‌ ಪೀಟರ್ಸ್‌ಬರ್ಗ್‌ ಕ್ರೀಡಾಂಗಣ, ಸೇಂಟ್‌ ಪೀಟರ್ಸ್‌ಬರ್ಗ್‌. ಆರಂಭ: ರಾತ್ರಿ 7.30. ನೇರ ‍ಪ್ರಸಾರ: ಸೋನಿ ನೆಟ್‌ವರ್ಕ್‌. **** **** ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.