ಬೆಲ್ಜಿಯಂ ತಂಡದ ಚಾರಿತ್ರಿಕ ಸಾಧನೆ ಸೇಂಟ್ ಪೀಟರ್ಸ್‌ಬರ್ಗ್‌: ನಾಯಕ ಈಡನ್‌ ಹಜಾರ್ಡ್‌ ಮತ್ತು ಮೆಯುನಿಯರ್‌ ಕಾಲ್ಚಳಕದಲ್ಲಿ ಅರಳಿದ ತಲಾ ಒಂದು ಗೋಲುಗಳ ಬಲದಿಂದ ಬೆಲ್ಜಿಯಂ 21ನೇ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಮೂರನೇ ಸ್ಥಾನ ಗಳಿಸಿದೆ. ಈ ಮೂಲಕ ಚಾರಿತ್ರಿಕ ಸಾಧನೆ ಮಾಡಿದೆ. ಸೇಂಟ್‌ ಪೀಟರ್ಸ್‌ಬರ್ಗ್‌ ಕ್ರೀಡಾಂಗಣದಲ್ಲಿ ಶನಿವಾರ ಮೂರು ಮತ್ತು ನಾಲ್ಕನೇ ಸ್ಥಾನ ನಿರ್ಧರಿಸಲು ನಡೆದ ಹಣಾಹಣಿಯಲ್ಲಿ ಬೆಲ್ಜಿಯಂ 2–0 ಗೋಲುಗಳಿಂದ ಇಂಗ್ಲೆಂಡ್‌ ತಂಡವನ್ನು ಪರಾಭವಗೊಳಿಸಿತು ಐದು ಬದಲಾವಣೆಗಳೊಂದಿಗೆ ಇಂಗ್ಲೆಂಡ್ ಕಣಕ್ಕೆ ಇಳಿದಿತ್ತು. ಈ ತಂಡದ ಕೋಚ್‌ ರಕ್ಷಣಾ ವಿಭಾಗಕ್ಕೆ ಫಿಲ್ ಜೋನ್ಸ್ ಅವರನ್ನು ಕರೆಸಿಕೊಂಡು ಡ್ಯಾನಿ ರೋಸ್, ಫಾಬಿಯನ್‌ ಡೆಲ್ಫ್, ಎರಿಕ್ ಡೈಯರ್‌, ರುಬೆನ್‌ ಲಾಫ್ಟಸ್‌ ಅವರನ್ನು ಮಿಡ್‌ಫೀಲ್ಡ್ ವಿಭಾಗದಲ್ಲಿ ಆಡಿಸಿದ್ದರು. ಆದರೆ ಚುರುಕಿನ ಪಾಸಿಂಗ್ ಮೂಲಕ ಇಂಗ್ಲೆಂಡ್ ತಂಡವನ್ನು ತಬ್ಬಿಬ್ಬುಗೊಳಿಸಿದ ಬೆಲ್ಜಿಯಂ ನಾಲ್ಕನೇ ನಿಮಿಷದಲ್ಲಿ ಯಶಸ್ಸು ಕಂಡಿತು. ಅಮಾನತಿಗೆ ಒಳಗಾಗಿ ಸೆಮಿಫೈನಲ್‌ ಪಂದ್ಯದಲ್ಲಿ ಆಡದೇ ಇದ್ದ ಥಾಮಸ್‌ ಮೆಯುನಿಯರ್‌ ಚೆಂಡನ್ನು ಗುರಿ ಸೇರಿಸಿ ಬೆಲ್ಜಿಯಂಗೆ ಮುನ್ನಡೆ ಗಳಿಸಿಕೊಟ್ಟರು. ನೆಸೆರ್ ಚಾಡ್ಲಿ ನೀಡಿದ ಕ್ರಾಸ್‌ ನಿಯಂತ್ರಿಸಿ ಡ್ಯಾನಿ ರೋಸ್‌ ಅವರನ್ನು ವಂಚಿಸಿ ಮುನ್ನಡೆದ ಥಾಮಸ್‌ ಚೆಂಡನ್ನು ಸುಲಭವಾಗಿ ಗುರಿ ಸೇರಿಸಿದರು. ಹಜಾರ್ಡ್‌ 82ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು. ಎರಡೂ ತಂಡಗಳು ಹಿಂದೆ ಎರಡು ಬಾರಿ ಮೂರನೇ ಸ್ಥಾನಕ್ಕಾಗಿ ಆಡಿದ್ದವು. 1986ರಲ್ಲಿ ನಡೆದ ಪಂದ್ಯದಲ್ಲಿ ಬೆಲ್ಜಿಯಂ ತಂಡ ಫ್ರಾನ್ಸ್ ಎದುರು 2–4ರಿಂದ ಸೋತಿತ್ತು. ಇಂಗ್ಲೆಂಡ್‌ ತಂಡ 1990ರಲ್ಲಿ ಇಟಲಿ ವಿರುದ್ಧ 1–2ರಿಂದ ಸೋತಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.