ವಿಶ್ವಕಪ್ ಕನಸಿಗೆ ಟಿಟಿ ಬಲ ಸೇಂಟ್‌ ಪೀಟರ್ಸ್‌ಬರ್ಗ್‌: ಎಲ್ಲರ ನೋಟ ಇದ್ದದ್ದು ಫಾರ್ವರ್ಡ್‌ ಆಟಗಾರರಾದ ಕೈಲಿಯನ್‌ ಬಾಪೆ ಮತ್ತು ಆಂಟೋನ್ ಗ್ರೀಜ್‌ಮನ್‌ ಅವರತ್ತ. ಮಿಡ್‌ಫೀಲ್ಡರ್‌ಗಳಾದ ರಾಫೆಲ್‌ ವಾರೇನ್‌, ಪಾಲ್ ಪೊಗ್ಬಾ ಅವರ ಮೇಲೆಯೂ ನಿರೀಕ್ಷೆಯ ಭಾರ ಇತ್ತು. ಆದರೆ ಮಂಗಳವಾರ ರಾತ್ರಿ ಇಲ್ಲಿನ ಸೇಂಟ್ ಪೀಟರ್ಸ್‌ಬರ್ಗ್‌ ಕ್ರೀಡಾಂಗ ಣದಲ್ಲಿ ಮಿಂಚಿನ ಆಟದ ಮೂಲಕ ಫ್ರಾನ್ಸ್‌ಗೆ ಜಯ ಗಳಿಸಿಕೊಟ್ಟವರು ಡಿಫೆಂಡರ್‌ ಸ್ಯಾಮ್ಯುಯೆಲ್‌ ಟಿಟಿ. ಅಮೋಘ ಜಯಕ್ಕೆ ಕಾರಣರಾದ ಅವರು ರಾತ್ರಿ ಬೆಳಗಾಗುವುದರೊಳಗೆ ಅಭಿಮಾನಿಗಳ ಕಣ್ಮಣಿಯಾದರು. ಬೆಲ್ಜಿಯಂ ಎದುರಿನ ವಿಶ್ವಕಪ್ ಫುಟ್‌ಬಾಲ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಟಿಟಿ ಅವರ ಹೆಡರ್‌ನಲ್ಲಿ ಅರಳಿದ ಗೋಲು ಫ್ರಾನ್ಸ್‌ ತಂಡವನ್ನು ಮೂರನೇ ಬಾರಿ ಫೈನಲ್‌ಗೆ ತಲುಪಿಸಿತು. ಬೆಲ್ಜಿಯಂ ವಿರುದ್ಧ 1–0ಯಿಂದ ತಂಡ ಗೆದ್ದ ಕೂಡಲೇ ಪ್ಯಾರಿಸ್‌ನ ಬೀದಿಗಳಲ್ಲೂ ಸಂಭ್ರಮ ಮನೆ ಮಾಡಿತು. ಜನರು ಕುಣಿದು ಕುಪ್ಪಳಿಸಿ ಗೆಲುವಿನ ಖುಷಿಯನ್ನು ಹಂಚಿಕೊಂಡರು. ಟಿಟಿ ಮತ್ತು ಎದುರಾಳಿ ತಂಡದ ಮುನ್ನಡೆಗೆ ತಡೆಗೋಡೆಯಾದ ಗೋಲ್‌ ಕೀಪರ್‌ ಹ್ಯೋಗೊ ಲಾರಿಸ್‌ ಅವರನ್ನು ಕೊಂಡಾಡಿದರು. ಆರಂಭದಿಂದಲೇ ಎಚ್ಚರಿಕೆಯ ಆಟ ಆಡಿದ ಫ್ರಾನ್ಸ್ ಮತ್ತು ಬೆಲ್ಜಿಯಂ ತಂಡದವರು ಯಾವುದೇ ಲೋಪಗಳಿಗೆ ಎಡೆಮಾಡಿಕೊಡಲಿಲ್ಲ. ಮೊದಲ ಮೂರು ನಿಮಿಷ ಫ್ರಾನ್ಸ್ ಆಟಗಾರರ ಬಳಿಯಿಂದ ಚೆಂಡು ವಶಪಡಿಸಿಕೊಳ್ಳಲು ಪರದಾಡಿದ ಬೆಲ್ಜಿಯಂ ನಂತರ ಸಮಬಲದ ಹೋರಾಟ ನಡೆಸಿತು. ಹೀಗಾಗಿ ಮಧ್ಯಂತರ ಅವಧಿಯಲ್ಲಿ ಉಭಯ ತಂಡಗಳ ಗಳಿಕೆ ಶೂನ್ಯವಾಗಿತ್ತು. ದ್ವಿತೀಯಾರ್ಧದಲ್ಲಿ ಫ್ರಾನ್ಸ್‌ ಕನಸಿಗೆ ಟಿಟಿ ಬಣ್ಣ ತುಂಬಿದರು. 51ನೇ ನಿಮಿಷದಲ್ಲಿ ಎಡ ಭಾಗದಲ್ಲಿ ತಂಡಕ್ಕೆ ಕಾರ್ನರ್‌ ಕಿಕ್‌ ಲಭಿಸಿತು. ಎದುರಾಳಿಗಳ ಗೋಲು ಆವರಣದ ಮಧ್ಯಕ್ಕೆ ಚೆಂಡು ತೇಲಿ ಬಂತು. ಅಲ್ಲಿ ಕಾಯುತ್ತಿದ್ದ ಉಮ್ತಿತಿ ಹೆಡರ್ ಮೂಲಕ ಶರವೇಗದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು. ‌ ಟೂರ್ನಿಯ ಆರಂಭದಲ್ಲಿ ಲಯ ಕಂಡುಕೊಳ್ಳಲು ಪರದಾಡಿದ ಫ್ರಾನ್ಸ್‌ ತಂಡ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಲಯೊನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾವನ್ನು 4–3ರಿಂದ ಮಣಿಸಿ ಭರವಸೆ ಹೆಚ್ಚಿಸಿಕೊಂಡಿತ್ತು. ಅನುಭವಿ ಕೋಚ್ ಮತ್ತು ಯುವ ಆಟಗಾರರ ಬಲವಿರುವ ತಂಡವು ಸೆಮಿಫೈನಲ್‌ನಲ್ಲಿ ತನ್ನ ಸಾಮರ್ಥ್ಯವನ್ನು ಮೆರೆದಿದೆ. ಹೀಗಾಗಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಹೊರಹೊಮ್ಮಿದೆ. ಫುಟ್‌ಬಾಲ್‌ಗೆ ಅವಮಾನ: ತಿಬೌಟ್ ‘ಎದುರಾಳಿ ತಂಡದವರು ರಕ್ಷಣಾತ್ಮಕ ಆಟಕ್ಕೆ ಮಾತ್ರ ಒತ್ತು ನೀಡಿ ಆಡಿದ ಕಾರಣ ನಮ್ಮ ತಂಡ ಸೋತಿದೆ. ಫ್ರಾನ್ಸ್‌ ತಂಡ ಫುಟ್‌ಬಾಲ್ ಕ್ರೀಡೆಗೇ ಅವಮಾನ ಮಾಡಿದೆ’ ಎಂದು ಬೆಲ್ಜಿಯಂ ತಂಡದ ಗೋಲ್‌ಕೀಪರ್‌ ತಿಬೌಟ್ ಕಾಟೋಯ್ಸ್‌ ಅಭಿಪ್ರಾಯಪಟ್ಟಿದ್ದಾರೆ. ‘ಇದು ಅತ್ಯಂತ ನೀರಸ ಪಂದ್ಯವಾಗಿತ್ತು. ಫ್ರಾನ್ಸ್ ತಂಡದ ಎಲ್ಲ ಆಟಗಾರರೂ ರಕ್ಷಣಾ ವಿಭಾಗದಲ್ಲಿದ್ದವರಂತೆ ಆಡಿದರು. ಹೀಗಾಗಿ ಅಲ್ಲಿ ನೈಜ ಫುಟ್‌ಬಾಲ್ ಇರಲಿಲ್ಲ’ ಎಂದು ಟಿವಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಹೇಳಿದರು. ‘ಈ ವರೆಗೆ ನಮಗಿಂತ ಉತ್ತಮವಾಗಿದ್ದ ತಂಡಗಳ ವಿರುದ್ಧ ನಾವು ಗೆದ್ದಿದ್ದೇವೆ. ಆದರೆ ಸೆಮಿಫೈನಲ್‌ನಲ್ಲಿ ಮಾತ್ರ ಏನೂ ಅಲ್ಲದ ತಂಡಕ್ಕೆ ತಲೆಬಾಗಬೇಕಾದದ್ದು ಬೇಸರ ತಂದಿದೆ’ ಎಂದು ಅವರು ಹೇಳಿದರು. ** ಕಳೆದ ಬಾರಿಯ ಯೂರೊ ಕಪ್‌ನಲ್ಲಿ ಅನುಭವಿಸಿದ ಕಹಿಯನ್ನು ಮರೆಯಲು ಈ ಜಯ ನೆರವಾಗಿದೆ. ಪ್ರಶಸ್ತಿ ಗೆದ್ದು ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸುವುದು ನಮ್ಮ ಗುರಿ. – ಡೈಡಿಯರ್ ದೆಶ್ಚಾಂಪ್ಸ್‌, ಫ್ರಾನ್ಸ್ ತಂಡದ ಕೋಚ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.