ಫಿಫಾ ವಿಶ್ವಕಪ್‌: ಮೊದಲ ಬಾರಿ ಫೈನಲ್‌ ತಲುಪಿದ ಕ್ರೊವೇಷ್ಯಾ ಮಾಸ್ಕೊ: ಫಿಫಾ ವಿಶ್ವಕಪ್‌ ಪಂದ್ಯಾವಳಿಯ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಅಮೋಘ ಪ್ರದರ್ಶನತೋರಿದ ಕ್ರೊವೇಷ್ಯಾ ತಂಡ ಬಲಿಷ್ಠ ಇಂಗ್ಲೆಂಡ್‌ ತಂಡವನ್ನು ಮಣಿಸಿ ಮೊದಲ ಬಾರಿ ಫೈನಲ್‌ ಪ್ರವೇಶಿಸಿದೆ. ಇಂಗ್ಲೆಂಡ್‌ ತಂಡದ ಕೈರನ್‌ ಟ್ರಿಪರ್‌ ಪಂದ್ಯದ ಮೊದಲ ಗೋಲು ಗಳಿಸಿ ತಮ್ಮ ತಂಡಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರಾದರೂ, ಬಳಿಕ ಕ್ರೊವೇಷ್ಯಾ ಆಟ ಕಳೆಗಟ್ಟಿತು. ಈ ತಂಡದ ಇವಾನ್ ಪೆರಿಸಿಕ್ಮತ್ತುಮಾರಿಯೋ ಮ್ಯಾಂಡ್ಕುಕಿಕ್ ತಲಾ ಒಂದು ಗೋಲು ಗಳಿಸಿದರು. ಇದರೊಂದಿಗೆ ಲೂಕಾ ಮಾಡ್ರಿಚ್‌ ನೇತೃತ್ವದ ಕ್ರೊವೇಷ್ಯಾ ತಂಡ 2–1 ಅಂತರದಿಂದ ಗೆದ್ದು ಬೀಗಿದರೆ, ಎರಡನೇ ಪ್ರಶಸ್ತಿಯ ಕನಸು ಕಂಡಿದ್ದ ಇಂಗ್ಲೆಂಡ್‌ ಪಡೆ ನಿರಾಸೆ ಅನುಭವಿಸಿತು. ಎರಡು ದಶಕಗಳ ಹಿಂದೆ ಚೊಚ್ಚಲ ವಿಶ್ವಕಪ್‌ ಆಡಿದ್ದ ಕ್ರೊವೇಷ್ಯಾ ಮೊದಲ ಪ್ರಯತ್ನದಲ್ಲೇ ಮೂರನೇ ಸ್ಥಾನ ಗಳಿಸಿ ಫುಟ್‌ಬಾಲ್‌ ಜಗತ್ತಿನ ಗಮನ ಸೆಳೆದಿತ್ತು. ನಂತರ ಮೂರು ಬಾರಿ (2002, 2006 ಮತ್ತು 2014) ಟೂರ್ನಿಗೆ ಅರ್ಹತೆ ಗಳಿಸಿದ್ದ ಈ ತಂಡ ಗುಂಪು ಹಂತದಲ್ಲೇ ಹೊರ ಬಿದ್ದಿತ್ತು. ಹೀಗಾಗಿ ಈ ಬಾರಿಯೂ ಗುಂಪು ಹಂತದಲ್ಲೇ ತಂಡದ ಹೋರಾಟ ಮುಗಿಯಲಿದೆ ಎಂದು ಭಾವಿಸಲಾಗಿತ್ತು. ಆದರೆ ಲೂಕಾ ಪಡೆ ಆಡಿದ ಐದು ಪಂದ್ಯಗಳಲ್ಲೂ ಛಲದಿಂದ ಹೋರಾಡಿತ್ತು. ‍ಪ್ರೀ ಕ್ವಾರ್ಟರ್‌ ಮತ್ತು ಕ್ವಾರ್ಟರ್‌ ಫೈನಲ್‌ನಲ್ಲಿ ತಂಡದಿಂದ ಮೂಡಿಬಂದಿದ್ದ ಆಟ ಅಭಿಮಾನಿಗಳು ಸಂಭ್ರಮದ ಹೊಳೆಯಲ್ಲಿ ಮಿಂದೇಳುವಂತೆ ಮಾಡಿತ್ತು. ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಬೆಲ್ಜಿಯಂ ಎದುರು ಗೆಲುವು ಸಾಧಿಸಿರುವ ಫ್ರಾನ್ಸ್‌ ಹಾಗೂಕ್ರೊವೇಷ್ಯಾ ಭಾನುವಾರ(ಜು,15ರಂದು)ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಪ್ರಶಸ್ತಿಗಾಗಿ ಸೆಣಸಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.