ಬಿಗ್‌ ಸ್ಕ್ರೀನ್‌ನಲ್ಲಿ ಫುಟ್‌ಬಾಲ್‌ ಫೈನಲ್‌ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಜ್ವರ ಇಡೀ ಜಗತ್ತನ್ನು ಆವರಿಸಿದೆ. ತಿಂಗಳಿಂದ ನಡೆಯುತ್ತಿರುವ ಫುಟ್‌ಬಾಲ್‌ ಟೂರ್ನಿ ಇದೇ 15ಕ್ಕೆ ಕೊನೆಯಾಗಲಿದೆ. ಅಂದು ಫ್ರಾನ್ಸ್‌ ಮತ್ತು ಕ್ರೊವೇಷ್ಯಾ ನಡುವೆ ಫೈನಲ್‌ ಹಣಾಹಣಿ ನಡೆಯಲಿದೆ. ಫೈನಲ್‌ನ ರೋಚಕ ಪಂದ್ಯದ ರಸದೌತಣವನ್ನು ಬೆಂಗಳೂರಿನ ಫುಟ್‌ಬಾಲ್‌ ಪ್ರಿಯರಿಗೆ ಬಿಗ್‌ಸ್ಕ್ರೀನ್‌ಗಳ ಮೂಲಕ ಉಣಬಡಿಸಲು ಹಲವು ಪಂಚತಾರಾ ಹೋಟೆಲ್‌ಗಳು, ಕ್ಲಬ್‌ ಮತ್ತು ಪಬ್‌ಗಳು ಸಿದ್ಧತೆ ನಡೆಸಿವೆ. ಎರಡೂ ತಂಡಗಳಲ್ಲಿನ ತಮ್ಮ ಅಚ್ಚುಮೆಚ್ಚಿನ ಆಟಗಾರರನ್ನು ಬಿಗ್‌ಸ್ಕ್ರೀನ್‌ನಲ್ಲಿ ಕಣ್ತುಂಬಿಕೊಳ್ಳಲು ಫುಟ್‌ಬಾಲ್‌ ಪ್ರಿಯರೂ ಕಾತುರರಾಗಿದ್ದಾರೆ. ಫುಟ್‌ಬಾಲ್‌ ಪಂದ್ಯ ವೀಕ್ಷಣೆ ಜತೆಗೆ ರಾತ್ರಿಯ ಡಿನ್ನರ್‌ ಹಾಗೂ ಬಿಯರ್‌ನ ಆಫರ್‌ಗಳನ್ನೂ ಕ್ಲಬ್‌, ಪಬ್‌ಗಳು ನೀಡಿವೆ. ಲೂಕಾ ಮ್ಯಾಡ್ರಿಚ್‌ ನೇತೃತ್ವದ ಕ್ರೊವೇಷ್ಯಾ ಇದೇ ಮೊದಲ ಬಾರಿಗೆ ಫೈನಲ್‌ ಪ್ರವೇಶಿಸಿದೆ. ಸೆಮಿಫೈನಲ್‌ನಲ್ಲಿ ಪ್ರಬಲ ಇಂಗ್ಲೆಂಡ್‌ ತಂಡವನ್ನು ಸೋಲಿಸಿ ಇದು ಫೈನಲ್‌ ತಲುಪಿದೆ. ಈಗಾಗಲೇ ಒಮ್ಮೆ ಚಾಂಪಿಯನ್‌ ಆಗಿರುವ ಫ್ರಾನ್ಸ್‌ ತಂಡವನ್ನು ಅಂತಿಮ ಹಣಾಹಣಿಯಲ್ಲಿ ಇದು ಎದುರಿಸಲಿದೆ. ಫೈನಲ್‌ ಪಂದ್ಯ ಭಾನುವಾರ ನಿಗದಿಯಾಗಿರುವುದು ಉದ್ಯಾನನಗರಿ ಫುಟ್‌ಬಾಲ್‌ ಪ್ರಿಯರ ವಾರಾಂತ್ಯದ ಮೋಜನ್ನು ಹೆಚ್ಚಿಸಲಿದೆ. ಪಂದ್ಯ ರಾತ್ರಿ 8.30 ಗಂಟೆಗೆ ಆರಂಭ ಆಗಲಿರುವುದರಿಂದ ಬಿಗ್‌ ಸ್ಕ್ರೀನ್‌ಗಳಲ್ಲಿ ಈ ಪಂದ್ಯ ನೋಡುವುದರ ಜತೆಗೆ ಮೋಜು ಮಸ್ತಿ ಹಾಗೂ ಡಿನ್ನರ್‌ಗೂ ಸಾಕಷ್ಟು ಅವಕಾಶ ದೊರೆತಂತಾಗಿದೆ. ತಾಜ್‌ವೆಸ್ಟ್‌ ಎಂಡ್‌ನಲ್ಲಿ 40 ಅಡಿ ಅಗಲ ಎಲ್‌ಇಡಿ ಸ್ಕ್ರೀನ್‌: ನಗರದ ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ತಾಜ್‌ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ಫುಟ್‌ಬಾಲ್‌ ಫೈನಲ್‌ ಪಂದ್ಯ ವೀಕ್ಷಣೆಗೆಂದೇ 40 ಅಡಿ ಅಗಲದ ಬೃಹತ್‌ ಎಲ್‌ಇಡಿ ಸ್ಕ್ರೀನ್‌ನ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಫನ್‌ ಗೇಮ್ಸ್‌, ಡ್ರಿಂಕ್ಸ್‌, ವಿವಿಧ ಬಗೆಯ ಖಾದ್ಯಗಳೂ ಲಭ್ಯ. ಫುಟ್‌ಬಾಲ್‌ ವೀಕ್ಷಣೆಗೆ ₹ 499 ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ. ಮೊದಲ ನೂರು ಜನರಿಗೆ ‘ಕಾಂಪ್ಲಿಮೆಂಟ್ರಿ ಡ್ರಿಂಕ್ಸ್‌’ ದೊರೆಯಲಿದೆ. ಉಳಿದಂತೆ ಊಟ, ಡ್ರಿಂಕ್ಸ್‌ಗೆ ಹೆಚ್ಚುವರಿಯಾಗಿ ಹಣ ಪಾವತಿಸಬೇಕು. ಸೀಟನ್ನು ಆನ್‌ಲೈನ್‌ ಮೂಲಕ ಬುಕ್‌ ಮಾಡಬಹುದು. ಮಧ್ಯಾಹ್ನ 3 ಗಂಟೆ ನಂತರ ಪ್ರವೇಶ. ಹೆಣ್ಣೂರು ರಸ್ತೆಯ ಬೈಗ್‌ ಬ್ರಿವಸ್ಕಿ ಬ್ರೀವಿಂಗ್‌: ಹೆಣ್ಣೂರು ಬಾಗಲೂರು ರಸ್ತೆಯಲ್ಲಿರುವ ಬೈಗ್‌ ಬ್ರಿವಸ್ಕಿ ಬ್ರೀವಿಂಗ್‌ ಕಂಪನಿಯು 40X20 ವಿಸ್ತೀರ್ಣದ ಬೃಹತ್‌ ಸ್ಕ್ರೀನ್‌ ವ್ಯವಸ್ಥೆ ಮಾಡಿದೆ. ಇಲ್ಲಿ ಪೊಲರಾಯ್ಡ್‌ ಫೋಟೊ ಬೂತ್ಸ್‌, ಫೇಸ್‌ ಪೇಂಟಿಂಗ್‌, ಡ್ರೋಣ್‌ ಶೋ, ಡಿಜೆ, ಫನ್‌ ಗೇಮ್‌ಗಳೊಂದಿಗೆ ಫುಟ್‌ಬಾಲ್‌ನ ಫೈನಲ್‌ ಪಂದ್ಯದ ಸೆಣಸಾಟವನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರವೇಶ ದರ ₹ 1,000 (ಮೂರು ಬಿಯರ್‌ ಉಚಿತ). ಸಂಜೆ 7 ಗಂಟೆಯಿಂದ ಪ್ರವೇಶಾವಕಾಶ. ಒರಾಯನ್‌ ಮತ್ತು ಮೀನಾಕ್ಷಿ ಮಾಲ್‌: ಡಾ. ರಾಜ್‌ಕುಮಾರ್‌ ರಸ್ತೆಯಲ್ಲಿರುವ ಒರಾಯನ್‌ ಮಾಲ್‌ ಮತ್ತು ಬನ್ನೇರುಘಟ್ಟ ಮುಖ್ಯರಸ್ತೆಯ ಹುಳಿಮಾವಿನಲ್ಲಿರುವ ರಾಯಲ್‌ ಮೀನಾಕ್ಷಿ ಮಾಲ್‌ನಲ್ಲಿ ಸಿನಿಪೊಲೀಸ್‌ ಬಿಗ್‌ ಸ್ಕ್ರೀನ್‌ ಮೂಲಕ ಫುಟ್‌ಬಾಲ್‌ ಫೈನಲ್‌ ಪಂದ್ಯ ಪ್ರಸಾರದ ವ್ಯವಸ್ಥೆ ಮಾಡಿದೆ. ಪ್ರವೇಶ ಶುಲ್ಕ ₹ 530ರಿಂದ ₹ 570. ದಿ ಹಮ್ಮಿಂಗ್‌ ಟ್ರೀ: ಇಂದಿರಾನಗರದ 12ನೇ ಮುಖ್ಯರಸ್ತೆಯಲ್ಲಿರುವ ‘ದಿ ಹಮ್ಮಿಂಗ್‌ ಟ್ರೀ’ಯಲ್ಲಿ ಫುಟ್‌ಬಾಲ್‌ ವ್ಯವಸ್ಥೆ ಮಾಡಿದ್ದು, ಪ್ರವೇಶ ಉಚಿತ. ಆಲ್ಕೋಹಾಲ್‌ ಲಭ್ಯವಿದೆ. ಇದೇ ರೀತಿ ಆಸ್ಟಿನ್‌ ಟೌನ್‌, ಇಂದಿರಾನಗರ, ದೊಮ್ಮಲೂರು, ಕೋರಮಂಗಲ ಸೇರಿದಂತೆ ನಗರದ ವಿವಿಧೆಡೆ ಇರುವ ಐಷಾರಾಮಿ ಹೋಟೆಲ್‌ಗಳು, ಕ್ಲಬ್‌ ಮತ್ತು ಪಬ್‌ಗಳು ಬಿಗ್‌ ಸ್ಕ್ರೀನ್‌ ಮೂಲಕ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಿವೆ. ಈಗಾಗಲೇ ಕೆಲವೆಡೆ ಲೀಗ್‌, ಎಂಟರ ಘಟ್ಟ ಮತ್ತು ನಾಲ್ಕರ ಘಟ್ಟದ ಪಂದ್ಯಗಳನ್ನು ನಗರದ ಹಲವು ಕ್ಲಬ್‌ ಮತ್ತು ಪಬ್‌ಗಳಲ್ಲಿ ದೊಡ್ಡ ಪರದೆಯಲ್ಲಿ ವೀಕ್ಷಿಸುವ ಅವಕಾಶ ಕಲ್ಪಿಸಲಾಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.