ಬ್ರಿಕ್ಸ್‌ ಫುಟ್‌ಬಾಲ್‌: ಭಾರತಕ್ಕೆ ಸೋಲು ನವದೆಹಲಿ: ಭಾರತದ 17 ವರ್ಷದೊಳಗಿನವರ ಬಾಲಕಿಯರ ತಂಡದವರು ದಕ್ಷಿಣ ಆಫ್ರಿಕಾದ ಜೊಹಾನ್ಸ್‌ಬರ್ಗ್‌ನಲ್ಲಿ ನಡೆಯುತ್ತಿರುವ ಬ್ರಿಕ್ಸ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಸೋತಿದ್ದಾರೆ. ಭಾನುವಾರ ನಡೆದ ಹಣಾಹಣಿಯಲ್ಲಿ ಭಾರತ 1–2 ಗೋಲುಗಳಿಂದ ಚೀನಾ ಎದುರು ಪರಾಭವಗೊಂಡಿತು. ಮೊದಲ ಪಂದ್ಯದಲ್ಲಿ ಬ್ರೆಜಿಲ್‌ ಎದುರು ನಿರಾಸೆ ಅನುಭವಿಸಿದ್ದ ಭಾರತದ ಆಟಗಾರ್ತಿಯರು ಚೀನಾ ಎದುರು ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದರು. 25ನೇ ನಿಮಿಷದಲ್ಲಿ ತಂಡಕ್ಕೆ ಮೊದಲ ಯಶಸ್ಸು ಸಿಕ್ಕಿತು. ಮನೀಷಾ, ಫ್ರೀ ಕಿಕ್‌ ಮೂಲಕ ಚೆಂಡನ್ನು ಗುರಿ ಮುಟ್ಟಿಸಿದರು.42ನೇ ನಿಮಿಷದಲ್ಲಿ ಸಿಕ್ಕ ಅವಕಾಶವನ್ನು ಭಾರತ ಕೈಚೆಲ್ಲಿತು. ದ್ವಿತೀಯಾರ್ಧದಲ್ಲಿ ಚೀನಾ ತಂಡ ಪ್ರಾಬಲ್ಯ ಮೆರೆಯಿತು. 74 ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶದಲ್ಲಿ ಈ ತಂಡದ ಆಟಗಾರ್ತಿ ಗೋಲು ಬಾರಿಸಿ 1–1ರ ಸಮಬಲಕ್ಕೆ ಕಾರಣರಾದರು. 82ನೇ ನಿಮಿಷದಲ್ಲಿ ಚೀನಾ ತಂಡದ ಖಾತೆಗೆ ಎರಡನೇ ಗೋಲು ಸೇರ್ಪಡೆಯಾಯಿತು. ನಂತರ ಎಚ್ಚರಿಕೆಯಿಂದ ಆಡಿದ ಈ ತಂಡ ಗೆಲುವಿನ ತೋರಣ ಕಟ್ಟಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.