ವಿಶ್ವಕಪ್‌ ಹೀರೊಗಳ ನಾಡಿನಲ್ಲಿ ಸಂಭ್ರಮ ಪ್ಯಾರಿಸ್‌/ಜಗ್ರೆಬ್‌ : ವಿಶ್ವಕಪ್‌ ಫುಟ್‌ಬಾಲ್ ಟೂರ್ನಿಯ ಪ್ರಶಸ್ತಿ ಗೆದ್ದ ಫ್ರಾನ್ಸ್‌ ಮತ್ತು ರನ್ನರ್ಸ್ ಅಪ್ ಕ್ರೊವೇಷ್ಯಾದ ಅಭಿಮಾನಿಗಳು ಸೋಮ ವಾರವಿಡೀ ಸಂಭ್ರಮದ ಅಲೆಯಲ್ಲಿ ಮಿಂದರು. ಉಭಯ ದೇಶಗಳ ರಾಜಧಾನಿಗಳಲ್ಲಿ ತಂಡದ ಆಟಗಾರರು ತಾಯ್ನಾಡಿಗೆ ಮರಳುವುದನ್ನು ಕಾದು ಕುಳಿತ ಅಭಿಮಾನಿಗಳು ಸಂಜೆ ವೇಳೆ ‘ಹೀರೊಗಳು’ ಬಂದಿಳಿಯುತ್ತಿದ್ದಂತೆ ರೋಮಾಂಚನಗೊಂಡರು. ಸರ್ಕಾರದ ಪ್ರತಿನಿಧಿಗಳು ವೈಭವದ ಸ್ವಾಗತ ಕೋರಿ ಆಟಗಾರರನ್ನು ಅಭಿನಂದಿಸಿದರು. ಫ್ರಾನ್ಸ್‌ ತಂಡದ ಬರುವಿಕೆಗಾಗಿ ಸಾವಿರಾರು ಜನರು ಚಾಂಪ್ಸ್‌ ಎಲಿ ಸೀಸ್‌ನಲ್ಲಿ ತಾಸುಗಳಿಂದ ಕಾದು ಕುಳಿತರು. ಆಟಗಾರರನ್ನು ಹೊತ್ತ ವಿಮಾನವು ಚಾರ್ಲ್ಸ್ ಡಿ ಗುಲೆ ವಿಮಾನ ನಿಲ್ದಾಣಕ್ಕೆ ಬಂದು ತಲು‍‍ಪುತ್ತಿದ್ದಂತೆ ಅಗ್ನಿಶಾಮಕ ದಳದವರು ‘ಜಲ ಸಲ್ಯೂಟ್’ ನೀಡಿದರು. ಸಂಭ್ರಮದ ವಾತಾವರಣದಲ್ಲಿ ಮಿರುಗುವ ಟ್ರೋಫಿ ಹಿಡಿದುಕೊಂಡು ಇಳಿದ ನಾಯಕ ಹ್ಯೂಗೊ ಲಾರಿಸ್‌ ಮತ್ತು ಕೋಚ್‌ ಡಿಡಿಯರ್‌ ದೆಶ್ಚಾಂಪ್ಸ್‌ ಜನರತ್ತ ಕೈ ಬೀಸಿದರು. ನಂತರ ಆಟಗಾರರೆಲ್ಲರೂ ಕೆಂಪು ಹಾಸಿನ ಮೇಲೆ ಹೆಜ್ಜೆ ಹಾಕಿ ನಿಲ್ದಾಣದಿಂದ ಹೊರಬಂದರು. ನಂತರ ಮೆರವಣಿಗೆ, ಅಭಿನಂದನೆ ಗಳ ಮಹಾಪೂರದ ಮೂಲಕ ಆಟಗಾರ ರಿಗೆ ರಾಷ್ಟ್ರದ ಗೌರವ ಸಲ್ಲಿಸಲಾಯಿತು. ಸೋತವರಿಗೂ ಗೌರವ: ಫೈನಲ್‌ನಲ್ಲಿ ಸೋತರೂ ಕ್ರೊವೇಷ್ಯಾ ತಂಡದ ಆಟ ಗಾರರ ಮೇಲಿನ ಪ್ರೀತಿ–ಅಭಿಮಾನಕ್ಕೆ ಕೊಂಚವೂ ದಕ್ಕೆಯಾಗಲಿಲ್ಲ. ರಾಜಧಾನಿಯ ಮುಖ್ಯ ವೃತ್ತದಲ್ಲಿ ಜಮಾ ಯಿಸಿದ ಒಂದು ಲಕ್ಷಕ್ಕೂ ಅಧಿಕ ಜನರು ನಾಯಕ ಮತ್ತು ಚಿನ್ನದ ಚೆಂಡು ಪ್ರಶಸ್ತಿ ವಿಜೇತ ಲೂಕಾ ಮಾಡ್ರಿಚ್‌ ಒಳಗೊಂಡ ತಂಡಕ್ಕೆ ವೈಭವದ ಸ್ವಾಗತ ಕೋರಿದರು. ನಂತರ ತೆರೆದ ಬಸ್‌ನಲ್ಲಿ ಮೆರವಣಿಗೆ ನಡೆಸಿದರು. ತಂಡದ ಜೆರ್ಸಿ ಹೋಲುವ ಪೋಷಾಕು ತೊಟ್ಟ ಅಭಿಮಾನಿಗಳು ಚೀರಾಡುತ್ತ, ರಾಷ್ಟ್ರಧ್ವಜವನ್ನು ಬೀಸುತ್ತ ಬಸ್ ಅನ್ನು ಹಿಂಬಾಲಿಸಿದರು. ಸಬ್‌ವೇ, ಮೆಟ್ರೊ ನಿಲ್ದಾಣಕ್ಕೆ ನಾಮಕರಣ: ವಿಶ್ವಕಪ್ ಗೆದ್ದ ಫ್ರಾನ್ಸ್ ತಂಡವನ್ನು ಮುನ್ನಡೆಸಿದ ಡಿಡಿಯರ್‌ ದೆಶ್ಚಾಂಪ್ಸ್‌ ಅವರಿಗೆ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಲು ನಿರ್ಧರಿಸಲಾಗಿದೆ. ಪ್ಯಾರಿಸ್‌ನ ಸಬ್‌ವೇ ರೈಲು ನಿಲ್ದಾಣಕ್ಕೆ ಅವರ ಹೆಸರನ್ನು ಇಡಲಾಗುವುದು ಎಂದು ತಿಳಿಸಲಾಗಿದೆ. ವಿಕ್ಟರ್ ಹ್ಯೂಗೊ ಮೆಟ್ರೊ ನಿಲ್ದಾಣಕ್ಕೆ ತಂಡದ ನಾಯಕ ಹ್ಯೂಗೊ ಲಾರಿಸ್‌ ಅವರ ಹೆಸರಿಡಲಾಗುವುದು. ಬರ್ಸಿ ನಿಲ್ದಾಣಕ್ಕೆ ತಂಡದ ಹೆಸರಾದ ಲೆಸ್ ಬ್ಲೂಸ್ ಎಂದು ಮರುನಾಮಕರಣ ಮಾಡಲಾಗುವುದು. ಆವ್ರನ್ ನಿಲ್ದಾಣದ ಹೆಸರನ್ನು ‘ನಾವು ಗೆದ್ದಿದ್ದೇವೆ’ ಎಂದು ಅರ್ಥ ಕೊಡುವ ‘ನಾವ್ಸ್‌ ಆವ್ರನ್‌ ಗಾಗ್ನೆ’ ಎಂದು ಬದಲಿಸಲು ನಿರ್ಧರಿಸಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.