ಫುಟ್‌ಬಾಲ್‌ನಲ್ಲಿ ಉಸೇನ್ ಬೋಲ್ಟ್‌ ‘ಅದೃಷ್ಟ ಪರೀಕ್ಷೆ’ ಸಿಡ್ನಿ : ಮಿಂಚಿನ ವೇಗದ ಓಟಗಾರ ಉಸೇನ್ ಬೋಲ್ಟ್‌ ಅವರು ಇಲ್ಲಿನ ಸೆಂಟ್ರಲ್‌ ಕೋಸ್ಟ್‌ ಮರೈನರ್ಸ್ ಫುಟ್‌ಬಾಲ್‌ ಕ್ಲಬ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಿದ್ಧವಾಗಿದ್ದಾರೆ. ಇದರೊಂದಿಗೆ ಫುಟ್‌ಬಾಲ್‌ ಆಡುವ ತಮ್ಮ ಕನಸನ್ನು ನನಸಾಗಿಸಿಕೊಳ್ಳಲು ಬೋಲ್ಟ್‌ ತಯಾರಾಗಿದ್ದಾರೆ. 31 ವರ್ಷದಜಮೈಕಾದ ಉಸೇನ್‌ ಬೋಲ್ಟ್‌ ಅವರಿಗೆ ಫುಟ್‌ಬಾಲ್‌ ಆಟದ ಬಗ್ಗೆ ಅಪಾರ ಒಲವು. ಅವರು ಪ್ರತಿಷ್ಠಿತ ಮ್ಯಾಂಚೆಸ್ಟರ್‌ ಯುನೈಟೆಡ್‌ ಕ್ಲಬ್‌ನ ಅಭಿಮಾನಿ. ಕಳೆದ ಆಗಸ್ಟ್‌ನಲ್ಲಿ ಲಂಡನ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ ನಂತರ ಬೋಲ್ಟ್‌ ಅವರು ಅಥ್ಲೆಟಿಕ್ಸ್‌ಗೆ ವಿದಾಯ ಹೇಳಿದ್ದರು. ನಂತರ ಸ್ಟ್ರಾಮ್ಸ್‌ಗೊಡ್ಸೆಟ್‌ ಹಾಗೂ ಬುಂಡೆಸ್‌ಲೀಗಾ ಫುಟ್‌ಬಾಲ್‌ ಕ್ಲಬ್‌ಗಳಲ್ಲಿ ತರಬೇತಿ ಪಡೆದಿದ್ದರು. ‘ನಾಲ್ಕರಿಂದ ಐದು ತಿಂಗಳ ಕಾಲ ಬೋಲ್ಟ್‌ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಲಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ಕೆಲವೇ ದಿನಗಳಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದೇವೆ’ ಎಂದು ಸೆಂಟ್ರಲ್‌ ಕೋಸ್ಟ್‌ ಮರೈನರ್ಸ್‌ ಫುಟ್‌ಬಾಲ್‌ ಕ್ಲಬ್‌ನ ಮುಖ್ಯಸ್ಥ ಶಾನ್‌ ಮಿಲೆಕ್ಯಾಂಪ್‌ ಹೇಳಿದ್ದಾರೆ. ‘ಒಪ್ಪಂದ ಮಾಡಿಕೊಂಡ ನಂತರ ಆರು ವಾರಗಳ ಕಾಲ ಆಯ್ಕೆ ಟ್ರಯಲ್ಸ್‌ ನಡೆಯಲಿದೆ. ಈ ವೇಳೆ ಕಾಲ್ಚೆಂಡಿನ ಆಟದಲ್ಲಿ ಅವರ ಪ್ರತಿಭೆಯನ್ನು ಪರೀಕ್ಷಿಸಲಾಗುವುದು. ಅದರಲ್ಲಿ ಯಶಸ್ವಿಯಾದರೆ ಇದೇ ಋತುವಿನಲ್ಲಿ ನಡೆಯುವ ಆಸ್ಟ್ರೇಲಿಯನ್‌ ಲೀಗ್‌ನಲ್ಲಿ ಅವರು ಆಡಲಿದ್ದಾರೆ’ ಎಂದು ಅವರು ತಿಳಿಸಿದ್ದಾರೆ. ‘ಯುರೋಪ್‌ನ ಕ್ಲಬ್‌ಗಳಲ್ಲಿ ತರಬೇತಿ ಪಡೆಯುವ ವೇಳೆ ಉಸೇನ್‌ ಅವರು ಉತ್ತಮ ಸಾಮರ್ಥ್ಯ ತೋರಿದ್ದರು ಎಂಬ ಬಗ್ಗೆ ವರದಿಗಳಿವೆ. ಫುಟ್‌ಬಾಲ್‌ನಲ್ಲಿ ಪ್ರತಿಭೆಯೊಂದಿಗೆ ಸಂಪೂರ್ಣ ಫಿಟ್‌ನೆಸ್‌ ಕೂಡ ಅಗತ್ಯ’ ಎಂದೂ ಅವರು ತಿಳಿಸಿದ್ದಾರೆ. ಆಸ್ಟ್ರೇಲಿಯನ್‌ ಲೀಗ್‌ ಟೂರ್ನಿಯು ಅಕ್ಟೋಬರ್‌ನಿಂದ ಆರಂಭವಾಗಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.