ಬಳ್ಳಾರಿಯಲ್ಲಿ ಕಾಲ್ಚೆಂಡಿನ ಕಾವು ಕರ್ನಾಟಕದಲ್ಲಿ ಬ್ರಿಟಿಷರ ಮೊದಲ ವಸಾಹತು ಆಗಿದ್ದ ಬಳ್ಳಾರಿ, ಅವರಿಂದಲೇ ಫುಟ್‌ಬಾಲ್‌ ಕಲಿತಿದ್ದು, ಈ ಕ್ಷೇತ್ರದಲ್ಲಿ ಖ್ಯಾತಿ ಪಡೆದಿದ್ದು ಈಗ ಇತಿಹಾಸ. ಅದೇ ಕಾರಣಕ್ಕೆ, ಫುಟ್‌ಬಾಲ್‌ ಎಂದರೆ ತಕ್ಷಣ ಈ ಗಣಿನಗರದ ಹೆಸರು ಮಿಂಚುತ್ತದೆ. ಈ ಮಿಂಚಿಗೆ ಈಗ ಮತ್ತಷ್ಟು ಹೊಳಪು ಬಂದಿದೆ. ಕಾರಣ ಇಷ್ಟೆ: ಇಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸೀನಿಯರ್‌ ಫುಟ್‌ಬಾಲ್ ಅಕಾಡೆಮಿಯೂ ಆರಂಭವಾಗಿದೆ. ರಾಜ್ಯದಲ್ಲಿ ಸುಸಜ್ಜಿತ ಫುಟ್‌ಬಾಲ್‌ ಕ್ರೀಡಾಂಗಣ ಇರುವ ಕೆಲವು ಊರುಗಳಲ್ಲಿ ಬಳ್ಳಾರಿ ಕೂಡ ಒಂದು. ಕರ್ನಾಟಕದ ಫುಟ್‌ಬಾಲ್‌ ಚರಿತ್ರೆಯಲ್ಲಿ ಇರುವ ಮಹತ್ವದ ಕಾರಣಕ್ಕಾಗಿಯೇ ಇಲಾಖೆಯು ಅಕಾಡೆಮಿಯನ್ನು ಇಲ್ಲಿ ಆರಂಭಿಸಿದೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿದ್ದ ಫುಟ್‌ಬಾಲ್‌ ಕ್ರೀಡಾಪಟುಗಳ ನಿಲಯವನ್ನೂ ಇಲ್ಲಿಗೇ ಸ್ಥಳಾಂತರಿಸಿದೆ. ಅಕಾಡೆಮಿಗೆ ಪ್ರವೇಶ ಪಡೆದಿರುವ 22 ಕ್ರೀಡಾಪಟುಗಳಲ್ಲಿ ಬಹುತೇಕರು ರಾಜ್ಯ ಮತ್ತು ರಾಷ್ಟ್ರಮಟ್ಟದ ಟೂರ್ನಿಗಳಲ್ಲಿ ಭಾಗವಹಿಸಿದವರು ಎಂಬುದು ವಿಶೇಷ. ಮಂಡ್ಯ, ಬೀದರ್‌, ಬಿಜಾಪುರ, ಮಂಗಳೂರು, ತುಮಕೂರು, ಹುಬ್ಬಳ್ಳಿ, ಬಾಗಲಕೋಟೆ, ಚಿತ್ರದುರ್ಗ,ಚಿಕ್ಕಮಗಳೂರು, ರಾಮನಗರ ಜಿಲ್ಲೆಯ ಕ್ರೀಡಾಪಟುಗಳು ಈಗ ಬಳ್ಳಾರಿಯ ಬಿಸಿಲಲ್ಲಿ ಬೆವರಳಿಸುತ್ತಿದ್ದಾರೆ. ರಾಷ್ಟ್ರೀಯ ಕ್ರೀಡಾ ಸಂಸ್ಥೆಯಿಂದ (ಎನ್‌ಐಎಸ್‌) ತರಬೇತಿ ಪಡೆದಿರುವ ಎಸ್‌.ಶಾಂತಿ ಅವರನ್ನು ಫುಟ್‌ಬಾಲ್‌ ತರಬೇತುದಾರರನ್ನಾಗಿ ನೇಮಿಸಲಾಗಿದ್ದು, ಅವರು ಮಾರ್ಚ್‌ನಿಂದಲೇ ನಗರದಲ್ಲಿದ್ದಾರೆ. ಜೂನ್‌ ತಿಂಗಳಿಂದ ಕ್ರೀಡಾಪಟುಗಳಿಗೆ ತರಬೇತಿಯನ್ನೂ ನೀಡುತ್ತಿದ್ದಾರೆ. ಒಬ್ಬ ಸಹಾಯಕ ಕೋಚ್‌ ಕೂಡ ಇದ್ದಾರೆ. ಮೈದಾನಕ್ಕೆ ಅಂಟಿಕೊಂಡಿರುವ ಬಳ್ಳಾರಿ ಜಿಲ್ಲಾ ಅಥ್ಲೆಟಿಕ್ಸ್‌ ಸಂಸ್ಥೆಯ ಕಟ್ಟಡದಲ್ಲೇ ವಸತಿ ನಿಲಯ ಸೌಕರ್ಯವನ್ನೂ ನೀಡಲಾಗಿದೆ. ಅಕಾಡೆಮಿಗೆ ₹ 1 ಕೋಟಿ ಅನುದಾನವನ್ನು ಇಲಾಖೆ ಮೀಸಲಿಟ್ಟಿದ್ದು, ಅಕಾಡೆಮಿ ಸ್ಥಾಪನೆ ಕುರಿತು ಮೂರು ವರ್ಷದ ಹಿಂದೆಯೇ ಜನಾಭಿಪ್ರಾಯವನ್ನು ಸಂಗ್ರಹಿಸಿತ್ತು. ಹಿಂದಿನ ವರ್ಷವೇ ಆರಂಭವಾಗಬೇಕಿದ್ದ ಅಕಾಡೆಮಿ, ಪ್ರಸಕ್ತ ವರ್ಷ ಆರಂಭವಾಗಿದೆ. ಮರ್ಚೆಂಟ್ಸ್‌ ಕ್ಲಬ್‌ನಿಂದ ಆರಂಭ.... ಬಳ್ಳಾರಿಯಲ್ಲಿ ಫುಟ್‌ಬಾಲ್‌ ಇತಿಹಾಸವನ್ನು ಇಲ್ಲಿನ ಮರ್ಚೆಂಟ್ಸ್‌ ಕ್ಲಬ್‌ ಹಾಗೂ ವಾರ್ಡ್ಲಾ ಸ್ಕೂಲ್‌ನಿಂದ ಗುರುತಿಸುವುದು ವಿಶೇಷ. ಆ ಶಾಲೆಯ ಹಳೇ ವಿದ್ಯಾರ್ಥಿಯಾಗಿದ್ದ ಅಲ್ಲಂ ಕರಿಬಸಪ್ಪ ಫುಟ್‌ಬಾಲ್‌ ಆಟವನ್ನು ಕ್ಲಬ್‌ನ ಪ್ರಮುಖ ಚಟುವಟಿಕೆಯನ್ನಾಗಿಸಿದ್ದರು. ‘ಹಿಂದಿನ ಶತಮಾನದ ಆರಂಭದ ಎರಡು, ಮೂರು, ನಾಲ್ಕನೇ ದಶಕಗಳಲ್ಲಿ ಫುಟ್‌ಬಾಲ್‌ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಬಳ್ಳಾರಿ ಮೈದಾನಗಳು ಅದಕ್ಕೆ ವೇದಿಕೆಯಾಗಿದ್ದವು, ಕ್ಲಬ್‌ನ ತಂಡ ಫೆವರಿಟ್‌ ಆಗಿರುತ್ತಿತ್ತು’ ಎಂದು ಇತಿಹಾಸಕಾರ ಮೃತ್ಯುಂಜಯ ರುಮಾಲೆ ತಮ್ಮ ‘ಅಲ್ಲಂ ಕರಿಬಸಪ್ಪ, ಅಲ್ಲಂ ಸುಮಂಗಳಮ್ಮ ’ಕೃತಿಯಲ್ಲಿ ದಾಖಲಿಸಿದ್ದಾರೆ. ಬಳ್ಳಾರಿ ಬಿಸಿಲ ನಡುವೆಯೇ ಅಭ್ಯಾಸ.. ‘ಬಳ್ಳಾರಿ ಬಿಸಿಲು ಮಾತ್ರ ತಡೆಯೋಕೆ ಆಗೋಲ್ಲ ಸರ್‌. ಆದರೂ ನಾವು ಅದಕ್ಕೆ ಹೊಂದಿಕೊಂಡು ಅಭ್ಯಾಸ ನಡೆಸುತ್ತಿದ್ದೇವೆ’ ಎಂದು ಆಟಗಾರರರಾದ ಬಿಜಾಪುರದ ಭೀಮಾಶಂಕರ್‌, ಚಿಕ್ಕಮಗಳೂರಿನ ಕಾರ್ತಿಕ್‌ ಜಾಧವ್ ಹೇಳಿ ನಕ್ಕರು. ‘ಫುಟ್‌ಬಾಲ್‌ಗೆಂದೇ ಇಲ್ಲಿ ಪ್ರಶಾಂತವಾದ ಕ್ರೀಡಾಂಗಣವಿರುವುದು ಸಂತೋಷ ತಂದಿದೆ. ತರಬೇತಿ ಪಡೆದ ಬಳಿಕ ಪಂದ್ಯಾವಳಿಗಳಲ್ಲಿ ಪಾಲ್ಗೊಂಡು ಬಳ್ಳಾರಿ ಅಕಾಡೆಮಿಗೆ ಕೀರ್ತಿ ತಂದೇ ತರುತ್ತೇವೆ’ ಎಂದು ವಿಶ್ವಾಸದಿಂದ ಹೇಳಿದರು. ಬೆಂಗಳೂರಿನಿಂದ ಬಳ್ಳಾರಿಗೆ ಬಂದಿರುವ ಇವರೆಲ್ಲರೂ ಬಳ್ಳಾರಿಯ ವಿವಿಧ ಕಾಲೇಜುಗಳಲ್ಲಿ ಪಿಯುಸಿ ಮತ್ತು ಪದವಿ ತರಗತಿಗಳಿಗೆ ಪ್ರವೇಶ ಪಡೆದಿದ್ದಾರೆ. ಕ್ರೀಡಾಪಟುಗಳಿಗೆ ಉತ್ತಮ ಸೌಕರ್ಯ ಅಕಾಡೆಮಿಗೆ ದಾಖಲಾಗಿರುವ ಕ್ರೀಡಾಪಟುಗಳಿಗೆ ಉತ್ತಮ ಊಟ ಮತ್ತು ವಸತಿ ಸೌಕರ್ಯವನ್ನು ಕಲ್ಪಿಸಲಾಗಿದೆ ಎಂದು ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕ ರಹಮತ್‌ ಉಲ್ಲಾ ತಿಳಿಸಿದರು. ಸುಸಜ್ಜಿತ ಫುಟ್‌ಬಾಲ್‌ ಮೈದಾನಕ್ಕೆ ಹೆಸರಾದ ನಗರದಲ್ಲಿ ಅಕಾಡೆಮಿ ಆರಂಭವಾಗಿರುವುದು ಹೊಸ ದಾಖಲೆ. ಇಲ್ಲಿಂದಲೇ ನಮ್ಮ ಆಟಗಾರರು ಫುಟ್‌ಬಾಲ್‌ ಕ್ಷೇತ್ರದಲ್ಲಿ ಇನ್ನಷ್ಟು ಹೊಸ ದಾಖಲೆಗಳನ್ನು ನಿರ್ಮಿಸಲಿದ್ದಾರೆ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.