ಬಿದ್ದ ಮೆಸ್ಸಿ, ರೊನಾಲ್ಡೊ; ಎದ್ದ ಕ್ರೊವೇಷ್ಯಾ, ಜಪಾನ್‌ ಮಾಸ್ಕೊ: ವಿಶ್ವಕಪ್ ಫುಟ್‌ಬಾಲ್‌ ಟೂರ್ನಿ ಎಂದರೆ ಅನಿರೀಕ್ಷಿತ ಆಘಾತ, ಸೋಲು–ಗೆಲುವಿನ ‘ಆಟ’ ರಾರಾಜಿಸುವುದು ಸಹಜ. ಈ ಬಾರಿಯೂ ಇಂಥ ರೋಚಕ ಕ್ಷಣಗಳಿಗೆ ಕಾಲ್ಚೆಂಡಿನ ಕಾಳಗ ಸಾಕ್ಷಿಯಾಗಿದೆ. ಲಯೊನೆಲ್‌ ಮೆಸ್ಸಿ, ಕ್ರಿಸ್ಟಿಯಾನೊ ರೊನಾಲ್ಡೊ ಮುಂತಾದವರು ಮಿಂಚಲು ವಿಫಲರಾಗಿ ತೆರೆಮರೆಗೆ ಸರಿದರೆ, ಜರ್ಮನಿ, ಬ್ರೆಜಿಲ್‌, ಪೋರ್ಚುಗಲ್‌ ಮುಂತಾದ ತಂಡಗಳು ಮುಗ್ಗರಿಸಿವೆ. ವಿಶ್ವಕಪ್ ಟೂರ್ನಿಯ ಪ್ರಮುಖ ತಿರುವು, ಏಳು–ಬೀಳುಗಳ ಸುತ್ತ ಒಂದು ಸುತ್ತು... *ಕಳೆದ ಬಾರಿಯ ಚಾಂಪಿಯನ್‌ ಜರ್ಮನಿ ತಂಡಕ್ಕೆ ಗುಂಪು ಹಂತದ ಮೊದಲ ಪಂದ್ಯದಲ್ಲೇ ಸೋಲು. ಮೆಕ್ಸಿಕೊ ಎದುರು ಜೂನ್‌ 17ರಂದು ನಡೆದಿದ್ದ ಪಂದ್ಯದಲ್ಲಿ ಮೆಕ್ಸಿಕೊ 1–0ಯಿಂದ ಗೆದ್ದಿತ್ತು. ಟೂರ್ನಿಯಲ್ಲಿ ತಮ್ಮದು ಸವಾಲಿನ ತಂಡ ಎಂಬುದನ್ನು ಈ ಜಯದ ಮೂಲಕ ಆ್ಯಂಡ್ರೆಸ್ ಗುರ್ಡಾಡೊ ಬಳಗ ಸಾಬೀತು ಮಾಡಿತ್ತು. * ಲಯೊನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾಗೆ ಕ್ರೊವೇಷ್ಯಾ ಎದುರು 0–3 ಅಂತರದ ಸೋಲು. ಜೂನ್‌ 21ರಂದು ನಡೆದ ಗುಂಪು ಹಂತದ ತನ್ನ ಎರಡನೇ ಪಂದ್ಯದಲ್ಲಿ ಅರ್ಜೆಂಟೀನಾ ಈ ನಿರಾಸೆ ಅನುಭವಿಸಿತ್ತು. ಮೊದಲ ಪಂದ್ಯದಲ್ಲಿ ಐಸ್‌ಲೆಂಡ್‌ ಎದುರು ಈ ತಂಡ ಡ್ರಾ ಮಾಡಿಕೊಂಡಿತ್ತು. ಎರಡೂ ಪಂದ್ಯಗಳಲ್ಲಿ ಮೆಸ್ಸಿ ವೈಫಲ್ಯ ಕಂಡಿದ್ದರು. * ಈ ಬಾರಿ ಏಷ್ಯಾದ ತಂಡಗಳು ಅಮೋಘ ಸಾಧನೆ ಮಾಡಿವೆ. ಗುಂಪು ಹಂತದಲ್ಲಿ ಇರಾನ್‌ ತಂಡ ಮೊರೊಕ್ಕೊಗೆ 1–0ಯಿಂದ ಆಘಾತ ನೀಡಿತು. ನಂತರ ಕೊಲಂಬಿಯಾವನ್ನು ಜಪಾನ್‌ 2–1ರಿಂದ ಮಣಿಸಿತ್ತು. ಜರ್ಮನಿಯನ್ನು ಜೂನ್‌ 27ರಂದು 2–1ರಿಂದ ಸೋಲಿಸಿದ ದಕ್ಷಿಣ ಕೊರಿಯಾ ಇತಿಹಾಸ ಬರೆದಿತ್ತು. ಜಪಾನ್‌ ತಂಡ 16ರ ಘಟ್ಟಕ್ಕೂ ಪ್ರವೇಶಿಸಿತ್ತು. * 16ರ ಘಟ್ಟದ ಪಂದ್ಯಗಳಲ್ಲಿ ಫುಟ್‌ಬಾಲ್ ಪ್ರೇಮಿಗಳ ಲೆಕ್ಕಾಚಾರ ತಲೆ ಕೆಳಗಾಯಿತು. ಅರ್ಜೆಂಟೀನಾವನ್ನು 4–3ರಿಂದ ಸೋಲಿಸಿ ಫ್ರಾನ್ಸ್ ಮುನ್ನಡೆಯಿತು. ಮೆಸ್ಸಿ ಮತ್ತು ಅವರ ತಂಡ ನಿರಾಸೆಯಿಂದ ಅಂಗಣ ತೊರೆಯಿತು. * ಭಾರಿ ನಿರೀಕ್ಷೆಯೊಂದಿಗೆ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯ ಆಡಲು ಇಳಿದ ಕ್ರಿಸ್ಟಿಯಾನೊ ರೊನಾಲ್ಡೊ ಬಳಗಕ್ಕೆ ಉರುಗ್ವೆ ಭಾರಿ ಪೆಟ್ಟು ನೀಡಿತು. 1–2ರಿಂದ ಸೋತ ಪೊರ್ಚುಗಲ್ ತಂಡ ಅರ್ಜೆಂಟೀನಾದ ಹಾದಿಯನ್ನೇ ತುಳಿಯಿತು. * ಟೂರ್ನಿ ಆರಂಭವಾಗುವ ಮುನ್ನ ಎಲ್ಲ ಭರವಸೆಗಳನ್ನು ಕಳೆದುಕೊಂಡಿದ್ದ ಆತಿಥೇಯ ರಷ್ಯಾ 16ರ ಘಟ್ಟದ ವರೆಗೂ ತಲುಪಿದ್ದು ಮಾತ್ರವಲ್ಲ, ಈ ಹಂತದಲ್ಲಿ ಸ್ಪೇನ್‌ ವಿರುದ್ಧ ಗೆದ್ದು ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇರಿಸಿತು. ಪೆನಾಲ್ಟಿ ಶೂಟೌಟ್‌ನಲ್ಲಿ 4–3ರಿಂದ ಗೆದ್ದ ರಷ್ಯಾ ತವರಿನ ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆಗಳನ್ನು ಮೂಡಿಸಿತ್ತು. ಆದರೆ ಎಂಟರ ಘಟ್ಟದ ಪಂದ್ಯದಲ್ಲಿ ಕ್ರೊವೇಷ್ಯಾಗೆ ಮಣಿದು ತಂಡ ಹೊರ ಬಿದ್ದಿತು. ಈ ಪಂದ್ಯವೂ ಪೆನಾಲ್ಟಿ ಶೂಟೌಟ್‌ ವರೆಗೆ ಸಾಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.