ಫ್ರಾನ್ಸ್‌ ಯುವಪಡೆಗೆ ವಿಶ್ವಕಪ್‌ ಮಾಸ್ಕೊ : ಫ್ರಾನ್ಸ್‌ ತಂಡದ ಯುವಪಡೆಯು ಭಾನುವಾರ ರಾತ್ರಿ ಫಿಫಾ ವಿಶ್ವಕಪ್‌ಗೆ ಮುತ್ತಿಟ್ಟಿತು. ಲುಜ್‌ನಿಕಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಫ್ರಾನ್ಸ್‌ ತಂಡವು 4–2 ಗೋಲುಗಳಿಂದ ಕ್ರೊವೇಷ್ಯಾ ತಂಡವನ್ನು ಮಣಿಸಿತು. ಈ ಮೂಲಕ ಫ್ರಾನ್ಸ್ ಎರಡನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಇಪ್ಪತ್ತು ವರ್ಷಗಳ ಹಿಂದೆ ಫ್ರಾನ್ಸ್‌ ಪ್ರಶಸ್ತಿ ಗೆದ್ದಿತ್ತು. ಈ ಟೂರ್ನಿಯಲ್ಲಿ ‘ಕಪ್ಪುಕುದುರೆ’ಯಾಗಿ ಕಣಕ್ಕಿಳಿದಿದ್ದ ಲೂಕಾ ಮಾಡ್ರಿಚ್ ನಾಯಕತ್ವದ ಕ್ರೊವೇಷ್ಯಾ ಬಳಗವು ಮೊದಲ ಸಲ ರನ್ನರ್ಸ್ ಅಪ್ ಆಯಿತು. ಫೈನಲ್‌ ಪಂದ್ಯದ ಆರಂಭದಲ್ಲಿಯೇ ಕ್ರೊವೇಷ್ಯಾ ತಂಡವು ಎಡವಿತು. 18ನೇ ನಿಮಿಷದಲ್ಲಿ ಮ್ಯಾಂಜುಕಿಚ್ ನೀಡಿದ ಉಡುಗೊರೆ ಗೋಲು ಫ್ರಾನ್ಸ್‌ನ ಮುನ್ನಡೆಗೆ ಕಾರಣವಾಯಿತು. 28ನೇ ನಿಮಿಷದಲ್ಲಿ ಪೆರಿಸಿಚ್‌ ಗಳಿಸಿದ ಗೋಲಿನ ಮೂಲಕ ಕ್ರೊವೇಷ್ಯಾ ಸಮಬಲ ಸಾಧಿಸಿತು. ಆದರೆ, ಫ್ರಾನ್ಸ್‌ನ ಗ್ರೀಜ್‌ಮನ್ (38ನೇ ನಿಮಿಷ, ಪೆನಾಲ್ಟಿ), ಪಾಲ್ ಪೊಗ್ಬಾ (59ನೇ ನಿಮಿಷ) ಮತ್ತು ಕೈಲಿಯನ್ ಬಾಪೆ (65ನೇ ನಿಮಿಷ) ಗೋಲು ಗಳಿಸಿದರು. 69ನೇ ನಿಮಿಷದಲ್ಲಿ ಮ್ಯಾಂಜುಕಿಚ್ ತಮ್ಮ ತಂಡದ ಪರ ಗೋಲು ಗಳಿಸಿ ತಪ್ಪು ತಿದ್ದಿಕೊಂಡರು. ಆದರೆ, ನಂತರದ ಅವಧಿಯಲ್ಲಿ ಫ್ರಾನ್ಸ್‌ ರಕ್ಷಣಾ ಪಡೆಯೇ ಮೇಲುಗೈ ಸಾಧಿಸಿತು. ಇಂಜುರಿ ಸಮಯದಲ್ಲಿಯೂ ಗೋಲು ದಾಖಲಾಗಲಿಲ್ಲ. ಇತ್ತ ಗಣ್ಯರ ಗ್ಯಾಲರಿಯಲ್ಲಿದ್ದ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೊನ್, ಕೊಲಿಂಡಾಗ್ರಾಬರ್ ಕಿಟಾರೊವಿಚ್‌ ಪರಸ್ಪರ ಅಭಿನಂದಿಸಿದರು. ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್, ಫಿಫಾ ಅಧ್ಯಕ್ಷ ಜಿಯಾನಿ ಇನ್ಫಾಂಟಿನೊ ಉಭಯ ತಂಡ ಗಳನ್ನು ಅಭಿನಂದಿಸಿ ಪ್ರಶಸ್ತಿ ವಿತರಿಸಿದರು. ಸಂಭ್ರಮದ ಮಳೆ; ಉಲ್ಲಾಸದ ಅಲೆ ಯುವ ಮತ್ತು ಅನುಭವಿ ಆಟಗಾರರ ಒಗ್ಗಟ್ಟಿನ ಆಟಕ್ಕೆ ತವರಿನ ಅಭಿಮಾನಿಗಳು ಮಾತ್ರವಲ್ಲ, ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಫುಟ್‌ಬಾಲ್ ಪ್ರೇಮಿಗಳೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು. ಪಂದ್ಯದ ನಂತರ ಗೆದ್ದವರು ಸಂಭ್ರಮಿಸಿದರೆ ಸೋತವರು ಅವರನ್ನು ಅಭಿನಂದಿಸಿದರು; ಜಯದ ಖುಷಿಯ ನಡುವೆಯೂ ಸೋತವರನ್ನು ಸಾಂತ್ವನಪಡಿಸುವ ಹೊಣೆಯನ್ನು ಗೆದ್ದವರು ನಿರ್ವಹಿಸಿದರು. ಲುಜ್‌ನಿಕಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಫೈನಲ್‌ನಲ್ಲಿ ಕ್ರೊವೇಷ್ಯಾವನ್ನು 4–2ರಿಂದ ಮಣಿಸಿದ ನಂತರ ಫ್ರಾನ್ಸ್‌ ಆಟಗಾರರು ಖುಷಿಯ ಅಲೆಯಲ್ಲಿ ಮಿಂದರು. ಅವರ ಸಂತಸಕ್ಕೆ ವರುಣನೂ ಜೊತೆಯಾದ. ಪ್ರಶಸ್ತಿ ಪ್ರದಾನ ಸಮಾರಂಭದ ಸಂದರ್ಭದಲ್ಲಿ ಸುರಿದ ಧಾರಾಕಾರ ಮಳೆಯಲ್ಲಿ ಕ್ರೊವೇಷ್ಯಾದ ಬೇಸರ ಕೊಚ್ಚಿಕೊಂಡು ಹೋಯಿತು. ಫಳ ಫಳ ಹೊಳೆಯುತ್ತಿದ್ದ ಸ್ವರ್ಣ ಲೇಪಿತ ಟ್ರೋಫಿಯನ್ನು ಎತ್ತಿ ಹಿಡಿದು ವಿಶ್ವವಿಜೇತರು ಕೇಕೆ ಹಾಕಿದರು. ನಂತರ ಮಳೆ ನೀರಿನಲ್ಲಿ ಜಾರಿ ಬಿದ್ದು, ‘ಈಜಾಡಿ’ ಕೇಕೆ ಹಾಕಿದರು. ಕೋಚ್‌ ಡೀಡಿಯರ್ ದೆಶ್ಚಾಂಪ್ಸ್‌ ಅವರನ್ನು ಮೇಲಕ್ಕೆ ಎತ್ತಿ ಆಭಿನಂದಿಸಿದರು. ಡೀಡಿಯರ್ ರನ್ನರ್ಸ್ ಅಪ್‌ ತಂಡದ ಬಳಿಗೆ ಹೋಗಿ ಪ್ರತಿಯೊಬ್ಬ ಆಟಗಾರನನ್ನೂ ಸಾಂತ್ವನಪಡಿಸಿದರು. ನಂತರ ಗೆದ್ದ ತಂಡದ ಆಟಗಾರರು ಕೂಡ ಎದುರಾಳಿ ತಂಡದವರನ್ನು ಅಪ್ಪಿಕೊಂಡು ಸಮಾಧಾನಪಡಿಸಿದರು. ಅಧ್ಯಕ್ಷರ ಬಾಂಧವ್ಯ: ಕ್ರೊವೇಷ್ಯಾದ ಅಧ್ಯಕ್ಷೆ ಕೊಲಿಂಡಾ ಗ್ರಾಬರ್‌ ಕಿಟರೊವಿಚ್‌ ಮತ್ತು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೊನ್ , ಪಂದ್ಯದ ನಂತರ ಬಾಂಧವ್ಯ ಮೆರೆದರು. ಕೊಲಿಂಡಾ ಅವರು ಫ್ರಾನ್ಸ್‌ ಅಧ್ಯಕ್ಷರನ್ನು ಮನಸಾರೆ ಕೊಂಡಾಡಿದರೆ, ಇಮಾನ್ಯುವೆಲ್‌ ಭಾವುಕರಾದರು. ಇವರಿಬ್ಬರೂ ಎರಡೂ ತಂಡಗಳ ಆಟಗಾರರನ್ನು ಆಲಂಗಿಸಿಕೊಂಡು ಬೆನ್ನು ತಟ್ಟಿ ಅಭಿನಂದಿಸಿದರು. ಅಂಗಣಕ್ಕೆ ನುಗ್ಗಲು ಪ್ರಯತ್ನ: ಪಂದ್ಯದ 52ನೇ ನಿಮಿಷದಲ್ಲಿ ನಾಲ್ವರು ಪ್ರತಿಭಟನಾಕಾರರು ಅಂಗಣಕ್ಕೆ ನುಗ್ಗಲು ಪ್ರಯತ್ನಿಸಿದರು. ಹೀಗಾಗಿ ಒಂದು ನಿಮಿಷ ಆಟಕ್ಕೆ ಅಡ್ಡಿಯಾಯಿತು. ಪಂಕ್‌ ರಾಕ್‌ ಗ್ರೂಪ್‌ ಎಂಬ ಸಂಘಟನೆಯವರು ಇದರ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ರಷ್ಯಾದಲ್ಲಿ ಪ್ರತಿಭಟನಾಕಾರರ ಬಂಧನವನ್ನು ಖಂಡಿಸಿ ಮತ್ತು ರಾಜಕೀಯ ಸ್ವಾತಂತ್ರ್ಯಕ್ಕೆ ಅವಕಾಶ ನೀಡುವಂತೆ ಆಗ್ರಹಿಸಿ ಹೀಗೆ ಮಾಡಲಾಯಿತು ಎಂದು ಅವರು ಸಾಮಾಜಿಕ ತಾಣಗಳ ಮೂಲಕ ಬರೆದುಕೊಂಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.