16 ವರ್ಷದೊಳಗಿನವರ ಫುಟ್‌ಬಾಲ್‌: ಭಾರತಕ್ಕೆ ಜಯ ನವದೆಹಲಿ: ಭಾರತದ 16 ವರ್ಷದೊಳಗಿನವರ ಫುಟ್‌ಬಾಲ್‌ ತಂಡವು ಥಾಯ್ಲೆಂಡ್‌ನ 17 ವರ್ಷದೊಳಗಿನವರ ಬುರಿರಾಮ್‌ ಯುನೈಟೆಡ್‌ ಎಫ್‌ಸಿ ತಂಡದ ವಿರುಧ್ದದ ಪಂದ್ಯದಲ್ಲಿ ಜಯಿಸಿದೆ. ಶುಕ್ರವಾರ ಥಾಯ್ಲೆಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಬುರಿರಾಮ್‌ ಯನೈಟೆಡ್‌ ಎಫ್‌ಸಿಯನ್ನು 2–0ಯಿಂದ ಭಾರತ ಮಣಿಸಿತು. ಪಂದ್ಯದ 3ನೇ ನಿಮಿಷದಲ್ಲೇ ಭಾರತದ ಪರವಾಗಿ ಭುವನೇಶ್‌ ಅವರು ಗೋಲು ಗಳಿಸಿ ಮುನ್ನಡೆ ತಂದುಕೊಟ್ಟರು. ಪಂದ್ಯದ ಆರಂಭದಿಂದಲೂ ಬಿರುಸಿನ ಆಟ ಆಡಿದ ಭಾರತ ತಂಡದ ಆಟಗಾರರು ಎದುರಾಳಿ ತಂಡದ ಮುಂಚೂಣಿ ವಿಭಾಗವನ್ನು ಕಟ್ಟಿಹಾಕಿದರು. 83ನೇ ನಿಮಿಷದಲ್ಲಿ ತಂಡದ ರೋಹಿತ್‌ ಧನು ಅವರು ಎರಡನೇ ಗೋಲು ದಾಖಲಿಸಿ ಮುನ್ನಡೆಯನ್ನು 2–0ಗೆ ಹೆಚ್ಚಿಸಿದರು. 89ನೇ ನಿಮಿಷದಲ್ಲಿ ಗಿವ್ಸನ್‌ ಅವರು ಮೂರನೇ ಗೋಲು ಗಳಿಸುವ ಪ್ರಯತ್ನದಲ್ಲಿ ವಿಫಲವಾದರು. ಜುಲೈ 17ರಂದು ನಡೆಯುವ ತನ್ನ ಮುಂದಿನ ಪಂದ್ಯದಲ್ಲಿ ಭಾರತ ತಂಡವು ಬ್ಯಾಂಕಾಕ್‌ ಗ್ಲಾಸ್‌ ಎಫ್‌ಸಿ ತಂಡವನ್ನು ಎದುರಿಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.